ನವದೆಹಲಿ: ಅಬಕಾರಿ ಅಕ್ರಮ ಹಗರಣಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯದಿಂದ ಬಂಧಿತರಾಗಿರುವ ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಗೆ ಮತ್ತೆ ಸುಪ್ರೀಂ ಕೋರ್ಟ್ ನಲ್ಲೂ ಹಿನ್ನಡೆಯಾಗಿದೆ.
ಇಂದು ಕೇಜ್ರಿವಾಲ್ ನ್ಯಾಯಾಂಗ ಬಂಧನ ಅವಧಿ ಮುಕ್ತಾಯವಾಗಿತ್ತು. ಜೊತೆಗೆ ಬಂಧನ ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿಯನ್ನು ತಿರಸ್ಕರಿಸಿದ್ದ ದೆಹಲಿ ಹೈಕೋರ್ಟ್ ಆದೇಶ ಪ್ರಶ್ನಿಸಿ ಸುಪ್ರೀಂಕೋರ್ಟ್ ನಲ್ಲಿ ಮೇಲ್ಮನವಿ ಸಲ್ಲಿಸಿದ್ದರು. ಆದರೆ ಇದೀಗ ಸುಪ್ರೀಂ ಕೋರ್ಟ್ ನಲ್ಲೂ ಕೇಜ್ರಿವಾಲ್ ಗೆ ಹಿನ್ನಡೆಯಾಗಿದೆ.
ಏಪ್ರಿಲ್ 29 ರಂದು ಕೇಜ್ರಿವಾಲ್ ಅರ್ಜಿಯ ಮುಂದಿನ ವಿಚಾರಣೆ ನಡೆಸುವುದಾಗಿ ಸುಪ್ರೀಂ ಕೋರ್ಟ್ ಹೇಳಿದೆ. ಹೀಗಾಗಿ ಅವರ ಜೈಲು ವಾಸ ಮತ್ತೆ ಮುಂದುವರಿಕೆಯಾಗಿದೆ. ಕೇಜ್ರಿವಾಲ್ ಬಂಧನ ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿಗೆ ಏಪ್ರಿಲ್ 24 ಕ್ಕೆ ಪ್ರತಿಕ್ರಿಯೆ ನೀಡುವಂತೆ ಸುಪ್ರೀಂ ಕೋರ್ಟ್ ಜಾರಿ ನಿರ್ದೇಶನಾಲಯಕ್ಕೆ ಸೂಚಿಸಿದೆ.
ಬಳಿಕ ಏಪ್ರಿಲ್ 29 ರಂದು ಎರಡೂ ಅರ್ಜಿಗಳನ್ನು ಪರಿಶೀಲಿಸಿ ವಿಚಾರಣೆ ನಡೆಸಲಿದೆ. ಏಪ್ರಿಲ್ 9 ರಂದು ದೆಹಲಿ ಹೈಕೋರ್ಟ್ ಕೇಜ್ರಿವಾಲ್ ಅರ್ಜಿ ವಜಾಗೊಳಿಸಿತ್ತು. ಮಾರ್ಚ್ 21 ರಂದು ದೆಹಲಿ ಅಬಕಾರಿ ಅಕ್ರಮ ಹಗರಣಕ್ಕೆ ಸಂಬಂಧಿಸಿದಂತೆ 100 ಕೋಟಿ ರೂ. ಕಿಕ್ ಬ್ಯಾಕ್ ಪಡೆದ ಆರೋಪದಲ್ಲಿ ಕೇಜ್ರಿವಾಲ್ ರನ್ನು ಬಂಧಿಸಲಾಗಿತ್ತು.