ಅರವಿಂದ್ ಕೇಜ್ರಿವಾಲ್ ಗೆ ಜೈಲೇ ಗತಿ: ಬಂಧನ ಪ್ರಶ್ನಿಸಿದ ಅರ್ಜಿ ತಿರಸ್ಕರಿಸಿದ ದೆಹಲಿ ಕೋರ್ಟ್

Krishnaveni K

ಮಂಗಳವಾರ, 9 ಏಪ್ರಿಲ್ 2024 (16:50 IST)
ದೆಹಲಿ: ಅಬಕಾರಿ ಅಕ್ರಮ ಹಗರಣದಲ್ಲಿ ಜಾರಿ ನಿರ್ದೇಶನಾಲಯದಿಂದ ಬಂಧಿತರಾಗಿರುವ ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಬಂಧನ ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿಯನ್ನು ದೆಹಲಿ ಹೈಕೋರ್ಟ್ ತಿರಸ್ಕರಿಸಿದೆ. ಆ ಮೂಲಕ ಆಪ್ ನಾಯಕನಿಗೆ ಜೈಲೇ ಗತಿಯಾಗಿದೆ.

ನ್ಯಾಯಮೂರ್ತಿ ಸ್ವರಣಾ ಕಾಂತ ಶರ್ಮಾ ಈ ಬಗ್ಗೆ ತೀರ್ಪು ನೀಡಿದ್ದಾರೆ. ಮುಖ್ಯಮಂತ್ರಿ ಎಂಬ ಕಾರಣಕ್ಕೆ ಕೇಜ್ರಿವಾಲ್ ಗೆ ಪ್ರತ್ಯೇಕ ಕಾನೂನು ಅನ್ವಯವಾಗುವುದಿಲ್ಲ. ಕೇಜ್ರಿವಾಲ್ ರನ್ನು ಬಂಧಿಸಲು ಬೇಕಾದ ದಾಖಲೆಗಳು ಇಡಿ ಬಳಿಯಿತ್ತು. ಅಲ್ಲದೆ ಲೋಕಸಭೆ ಚುನಾವಣೆ ಯಾವಾಗ ಘೋಷಣೆಯಾಗಬಹುದು ಎಂಬ ಸುಳಿವು ಕೇಜ್ರಿವಾಲ್ ಗಿತ್ತು. ಹೀಗಾಗಿ ಇದು ಸಮಯ ನೋಡಿಕೊಂಡು ಬೇಕೆಂದೇ ಮಾಡಿದ ಪಿತೂರಿ ಎಂದು ಹೇಳಲಾಗದು ಎಂದು ಕೋರ್ಟ್ ಹೇಳಿದೆ.

ದೆಹಲಿ ಸಿಎಂ ಈಗ ಆರೋಪಿ ಸ್ಥಾನದಲ್ಲಿದ್ದಾರೆ. ತನಿಖೆಯನ್ನು ಅವರು ನಿರ್ಧರಿಸಲಾಗದು. ತನಿಖಾ ಸಂಸ್ಥೆಗಳು ತನಿಖೆ ನಡೆಸುವ ವಿಚಾರದಲ್ಲಿ ಸ್ವತಂತ್ರರು.ಇದು ಕೇಂದ್ರ ಮತ್ತು ಕೇಜ್ರಿವಾಲ್ ನಡುವಿನ ಸಮವರವಲ್ಲ, ಕೇಜ್ರಿವಾಲ್ ಮತ್ತು ಇಡಿ ನಡುವಿನದ್ದಾಗಿದೆ. ಬಂಧನವನ್ನು ಪ್ರಶ್ನಿಸಿ ಕೇಜ್ರಿವಾಲ್ ಸಲ್ಲಿಸಿರುವ ಮನವಿ ಸಮರ್ಥನೀಯವಲ್ಲ ಎಂದು ಕೋರ್ಟ್ ಹೇಳಿದೆ.

ಇದೀಗ ತಮ್ಮ ಬಂಧನ ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿ ತಿರಸ್ಕೃತವಾದ ಬೆನ್ನಲ್ಲೇ ಕೇಜ್ರಿವಾಲ್ ಸುಪ್ರೀಂ ಕೋರ್ಟ್ ಮೊರೆ ಹೋಗುವ ಸಾಧ್ಯತೆಯಿದೆ. ಸದ್ಯಕ್ಕೆ ಅವರ ನ್ಯಾಯಾಂಗ ಬಂಧನ ಅವಧಿ ಏಪ್ರಿಲ್ 15 ರವರೆಗಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ