ನವದೆಹಲಿ: ಲೋಕಸಭೆ ಸ್ಪೀಕರ್ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿಎನ್ ಡಿಎ ಅಭ್ಯರ್ಥಿ ಓಂ ಬಿರ್ಲಾ ಮತ್ತೊಮ್ಮೆ ಸ್ಪೀಕರ್ ಆಗಿ ಆಯ್ಕೆಯಾಗಿದ್ದಾರೆ. ಎನ್ ಡಿಎ ಮತ್ತು ಇಂಡಿಯಾ ಒಕ್ಕೂಟದ ನಡುವೆ ಈ ಬಗ್ಗೆ ಕಳೆದ ಎರಡು ದಿನಗಳಿಂದ ತಿಕ್ಕಾಟ ನಡೆದಿತ್ತು.
ವಿಪಕ್ಷಗಳ ವತಿಯಿಂದ ಕೆ ಸುರೇಶ್ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದರು. ಅಂತಿಮವಾಗಿ ಎನ್ ಡಿಎ ಅಭ್ಯರ್ಥಿ ಓಂ ಬಿರ್ಲಾ ಅತೀ ಹೆಚ್ಚು ಮತ ಪಡೆದು ಸ್ಪೀಕರ್ ಆಗಿ ಆಯ್ಕೆಯಾಗಿದ್ದಾರೆ. 48 ವರ್ಷಗಳಲ್ಲಿ ಇದೇ ಮೊದಲ ಬಾರಿಗೆ ಸ್ಪೀಕರ್ ಆಯ್ಕೆಗೆ ಚುನಾವಣೆ ನಡೆದಿದ್ದು ವಿಶೇಷ.
ಇದು ಎರಡನೇ ಬಾರಿಗೆ ಓಂ ಬಿರ್ಲಾ ಸ್ಪೀಕರ್ ಆಗಿ ಆಯ್ಕೆಯಾಗಿದ್ದಾರೆ. ಕಳೆದ ಮೋದಿ ಸರ್ಕಾರದ ಅವಧಿಯಲ್ಲೂ ಓಂ ಬಿರ್ಲಾ ಸ್ಪೀಕರ್ ಆಗಿದ್ದರು. ಇಂದು ಹಂಗಾಮಿ ಸ್ಪೀಕರ್ ಭಾರ್ತೃಹರಿ ಸ್ಪೀಕರ್ ಆಯ್ಕೆ ಪ್ರಕ್ರಿಯೆ ನಡೆಸಿಕೊಟ್ಟರು. ಬಳಿಕ ಅತೀ ಹೆಚ್ಚು ಮತ ಪಡೆದ ಓಂ ಬಿರ್ಲಾ ಸ್ಪೀಕರ್ ಆಗಿ ಆಯ್ಕೆಯಾಗಿರುವುದಾಗಿ ಘೋಷಣೆ ಮಾಡಿದರು.
ಬಳಿಕ ಪ್ರಧಾನಿ ಮೋದಿ ಮತ್ತು ವಿಪಕ್ಷ ನಾಯಕ ರಾಹುಲ್ ಗಾಂಧಿ ಓಂ ಬಿರ್ಲಾ ಅವರನ್ನು ಸ್ಪೀಕರ್ ಕುರ್ಚಿಯತ್ತ ಕರೆದೊಯ್ದು ಕುಳ್ಳಿರಿಸಿದರು. ಈ ವೇಳೆ ಎಲ್ಲಾ ಸಂಸದರೂ ಅವರಿಗೆ ಅಭಿನಂದನೆ ಸಲ್ಲಿಸಿದರು. ಬಳಿಕ ಪ್ರಧಾನಿ ಮೋದಿ, ಓಂ ಬಿರ್ಲಾಗೆ ಅಭಿನಂದನಾ ಭಾಷಣ ಮಾಡಿದರು.