Operation Sindoor: ಇಡೀ ದೇಶ ಹೆಮ್ಮೆಪಡುವಾಗ ರಾಹುಲ್ ಗಾಂಧಿ, ಖರ್ಗೆ ಭಾರತೀಯ ಸೇನೆ ಬಗ್ಗೆ ಹೇಳಿದ್ದೇನು

Krishnaveni K

ಬುಧವಾರ, 7 ಮೇ 2025 (09:46 IST)
ನವದೆಹಲಿ: ಪಹಲ್ಗಾಮ್ ಉಗ್ರ ದಾಳಿಗೆ ಪ್ರತೀಕಾರವಾಗಿ ಭಾರತೀಯ ಸೇನೆ ಆಪರೇಷನ್ ಸಿಂದೂರ್ ಹೆಸರಿನಲ್ಲಿ ಪಾಕಿಸ್ತಾನದ ಉಗ್ರರ ಅಡುಗದಾಣಗಳ ಮೇಲೆ ದಾಳಿ ನಡೆಸಿದ ಬಗ್ಗೆ ವಿಪಕ್ಷ ನಾಯಕರಾದ ರಾಹುಲ್ ಗಾಂಧಿ ಮತ್ತು ಮಲ್ಲಿಕಾರ್ಜುನ ಖರ್ಗೆ ಪ್ರತಿಕ್ರಿಯಿಸಿದ್ದಾರೆ.

ನಿನ್ನೆ ತಡರಾತ್ರಿ ಪಾಕಿಸ್ತಾನದ ಉಗ್ರರ ಅಡಗುದಾಣಗಳ ಮೇಲೆ ಭಾರತೀಯ ಸೇನೆ ದಾಳಿ ನಡೆಸಿತ್ತು. ಈ ದಾಳಿಯನ್ನು ಇಡೀ ದೇಶವೇ ಸಂಭ್ರಮಿಸುತ್ತಿದೆ. ಪಾಕಿಸ್ತಾನಕ್ಕೆ ತಕ್ಕ ಪಾಠ ಕಲಿಸಿದ್ದಕ್ಕೆ ಭಾರತೀಯ ಯೋಧರ ಮೇಲೆ ಹೆಮ್ಮೆಪಡುತ್ತಿದೆ.

ಇದರ ಬೆನ್ನಲ್ಲೇ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಮತ್ತು ಲೋಕಸಭೆ ವಿಪಕ್ಷ ನಾಯಕ ರಾಹುಲ್ ಗಾಂಧಿ ಕೂಡಾ ಟ್ವೀಟ್ ಮಾಡಿ ಪ್ರತಿಕ್ರಿಯಿಸಿದ್ದಾರೆ. ಒಂದೇ ಸಾಲಿನ ಟ್ವೀಟ್ ಮಾಡಿರುವ ರಾಹುಲ್ ಗಾಂಧಿ ‘ನಮ್ಮ ಸೈನಿಕರು ನಮ್ಮ ಹೆಮ್ಮೆ, ಜೈ ಹಿಂದ್’ ಎಂದು ಕೊಂಡಾಡಿದ್ದಾರೆ.

ಇನ್ನು ಮಲ್ಲಿಕಾರ್ಜುನ ಖರ್ಗೆ ಕೂಡಾ ಟ್ವೀಟ್ ಮಾಡಿದ್ದು ‘ಭಾರತ ಸದಾ ಪಾಕಿಸ್ತಾನ ಹಾಗೂ ಪಾಕ್ ಆಕ್ರಮಿತ ಕಾಶ್ಮೀರದಿಂದ ಭಯೋತ್ಪಾದನೆ ನಿರ್ಮೂಲನೆ ಮಾಡಲು ಬದ್ಧವಾಗಿದೆ. ಪಾಕಿಸ್ತಾನ ಮತ್ತು ಪಾಕ್ ಆಕ್ರಮಿತ ಕಾಶ್ಮೀರದಲ್ಲಿ ಏರ್ ಸ್ಟ್ರೈಕ್ ನಡೆಸಿದ ಭಾರತೀಯ ಸೇನೆ ಬಗ್ಗೆ ನಮಗೆ ಹೆಮ್ಮೆಯಿದೆ. ಅವರ ಧೈರ್ಯ ಮತ್ತು ಸಾಹಸಕ್ಕೆ ನಮ್ಮದೊಂದು ಸಲಾಂ. ಪಹಲ್ಗಾಮ್ ದಾಳಿಯಾದಾಗಿನಿಂದ ಕಾಂಗ್ರೆಸ್ ಪಕ್ಷ ಭಾರತೀಯ ಸೇನೆ ಮತ್ತು ಸರ್ಕಾರ ತೆಗೆದುಕೊಳ್ಳುವ ನಿರ್ಧಾರಕ್ಕೆ ನಮ್ಮ ಬೆಂಬಲವಿದೆ ಎಂದು ಹೇಳುತ್ತಲೇ ಬಂದಿದೆ. ಕಾಂಗ್ರೆಸ್ ಪಕ್ಷಕ್ಕೆ ದೇಶದ ಒಗ್ಗಟ್ಟು ಮತ್ತು ಭದ್ರತೆಯೇ ಮುಖ್ಯವಾಗಿದೆ’ ಎಂದು ಹೊಗಳಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ