ಧೂಮಪಾನ ವಯೋಮಿತಿ 18 ರಿಂದ 21 ಕ್ಕೇರಿಸಲು ಸುಪ್ರೀಂಗೆ ಮೊರೆ
ಗುರುವಾರ, 2 ಜೂನ್ 2022 (09:10 IST)
ನವದೆಹಲಿ: ಧೂಮಪಾನ ಆರೋಗ್ಯಕ್ಕೆ ಹಾನಿಕಾರಕ ಎಂದರೂ ಯುವಜನತೆ ಈ ಚಟಕ್ಕೆ ಬಲಿಯಾಗುತ್ತಿರುವುದು ದುರಂತ. ಹೀಗಾಗಿ ಇಂದಿನ ಯುವಜನಾಂಗದವರ ಆರೋಗ್ಯ ಗಮನದಲ್ಲಿಟ್ಟುಕೊಂಡು ಧೂಮಪಾನ ವಯೋಮಿತಿ ಏರಿಕೆ ಮಾಡಬೇಕೆಂದು ಸುಪ್ರೀಂಕೋರ್ಟ್ ಗೆ ಸಾರ್ವಜನಿಕ ಹಿತಾಸಕ್ತಿ ಅರ್ಜಿಯೊಂದು ಸಲ್ಲಿಕೆಯಾಗಿದೆ.
ಧೂಮಪಾನ ವಯೋಮಿತಿಯನ್ನು 18 ರಿಂದ 21 ಕ್ಕೆ ಏರಿಕೆ ಮಾಡಬೇಕೆಂದು ಅರ್ಜಿಯಲ್ಲಿ ಮನವಿ ಮಾಡಲಾಗಿದೆ. ಅಲ್ಲದೆ, ಇಂದಿನ ಯುವಜನಾಂಗ ಈ ದುಶ್ಚಟಕ್ಕೆ ದಾಸರಾಗುವುದನ್ನು ತಪ್ಪಿಸಲು ಕ್ರಮ ಕೈಗೊಳ್ಳಬೇಕಾದ ಅಗತ್ಯವಿದೆ ಎಂದು ಅರ್ಜಿಯಲ್ಲಿ ಉಲ್ಲೇಖಿಸಲಾಗಿದೆ.
ನ್ಯಾಯವಾದಿಗಳಾದ ಶುಭಂ ಅವಸ್ಥಿ ಮತ್ತು ಸಪ್ತ ರಿಷಿ ಮಿಶ್ರಾ ಎಂಬವರು ಈ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದು, ಬಸ್, ವಿಮಾನ ನಿಲ್ದಾಣ ಸೇರಿದಂತೆ ಸಾರ್ವಜನಿಕ ಸ್ಥಳಗಳಲ್ಲಿ ಧೂಮಪಾನ ವಲಯ ನಿಷೇಧಿಸುವುದು, ಅಂಗಡಿಗಳಲ್ಲಿ ಲೂಸ್ ಸಿಗರೇಟ್ ಗಳನ್ನು ನೀಡಿವುದಕ್ಕೆ ನಿಷೇಧ ವಿಧಿಸಬೇಕು ಎಂದು ಅರ್ಜಿಯಲ್ಲಿ ಮನವಿ ಮಾಡಲಾಗಿದೆ.