ಕುತುಬ್‌ ಮಿನಾರ್‌ : ತೀರ್ಪು ಕಾಯ್ದಿರಿಸಿದ ಕೋರ್ಟ್‌!

ಮಂಗಳವಾರ, 24 ಮೇ 2022 (14:28 IST)
ನವದೆಹಲಿ :  ಕುತುಬ್ ಮಿನಾರ್ ಸಂಕೀರ್ಣದಲ್ಲಿ ಹಿಂದೂ ಮತ್ತು ಜೈನರ ಆರಾಧನಾ ಮೂರ್ತಿಗಳನ್ನು ಪುನರ್ಸ್ಥಾಪಿಸಲು ಕೋರಿರುವ ಮೇಲ್ಮನವಿಗೆ ಸಂಬಂಧಿಸಿದ ಆದೇಶವನ್ನು ದೆಹಲಿಯ ಸಾಕೇತ್ ಕೋರ್ಟ್ ಮಂಗಳವಾರ ಕಾಯ್ದಿರಿಸಿದೆ.

ಮೆಹ್ರೌಲಿಯಲ್ಲಿರುವ ಕುತುಬ್ ಮಿನಾರ್ ಸಂಕೀರ್ಣದೊಳಗೆ ಇರುವ ಕುವ್ವಾತ್-ಉಲ್-ಇಸ್ಲಾಂ ಮಸೀದಿಯನ್ನು ದೇವಾಲಯದ ಸಂಕೀರ್ಣದ ಸ್ಥಳದಲ್ಲಿ ನಿರ್ಮಿಸಲಾಗಿದೆ ಎಂದು ಮೇಲ್ಮನವಿಯಲ್ಲಿ ಆರೋಪಿಸಲಾಗಿದೆ.

ಹೆಚ್ಚುವರಿ ಜಿಲ್ಲಾ ನ್ಯಾಯಾಧೀಶ ನಿಖಿಲ್ ಚೋಪ್ರಾ ಅವರು ಮಂಗಳವಾರ ಮೇಲ್ಮನವಿ ಆಲಿಸಿದ ನಂತರ ತೀರ್ಪನ್ನು ಕಾಯ್ದಿರಿಸಿದರು. ಮೇಲ್ಮನವಿಗೆ ಸಂಬಂಧಿಸಿದಂತೆ ಜೂನ್ 9ರಂದು ತೀರ್ಪು ನೀಡಲಾಗುವುದು ಎಂದು ತಿಳಿಸಿದ್ದಾರೆ.

ಮಹಮ್ಮದ್ ಘೋರಿ ಆಡಳಿತದಲ್ಲಿ ಸೇನಾ ನಾಯಕನಾಗಿದ್ದ ಕುತುಬುದ್ದೀನ್ ಐಬಕ್ 27 ದೇವಾಲಯಗಳನ್ನು ಭಾಗಶಃ ಧ್ವಂಸ ಮಾಡಿದ್ದು, ಇವುಗಳ ಸಾಮಗ್ರಿಗಳನ್ನು ಬಳಸಿ ಕುತುಬ್ ಮಿನಾರ್ ಸಂಕೀರ್ಣದೊಳಗೆ ಮಸೀದಿಯನ್ನು ನಿರ್ಮಿಸಲಾಗಿದೆ ಎಂದು ಅರ್ಜಿಯಲ್ಲಿ ಆರೋಪಿಸಲಾಗಿದೆ.

ಜೈನ ತೀರ್ಥಂಕರ ವೃಷಭದೇವ ಮತ್ತು ಹಿಂದೂ ದೇವರು ವಿಷ್ಣುವಿನ ಮೂರ್ತಿಯನ್ನು ಸಂಕೀರ್ಣದಲ್ಲಿ ಪುನರ್ ಪ್ರತಿಷ್ಠಾಪಿಸಬೇಕು ಎಂದು ಕೋರಲಾಗಿದೆ. 

ಕುತುಬ್ ಮಿನಾರ್ ಬಳಿ ದೇವಸ್ಥಾನದ ಉತ್ಖನನ ನಡೆಸಲು ಒತ್ತಡ ಕೇಳಿ ಬಂದ ಬೆನ್ನಲ್ಲೇ ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆ ಸಾಕೇತ್ ಕೋರ್ಟ್ಗೆ ತನ್ನ ವರದಿಯನ್ನು ಸಲ್ಲಿಕೆ ಮಾಡಿದ್ದು, ತೀವ್ರ ವಿರೋಧವನ್ನು ವ್ಯಕ್ತಪಡಿಸಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ