ನವದೆಹಲಿ: ನಿನ್ನೆ ಸಂಸತ್ ನಲ್ಲಿ ರಾಷ್ಟ್ರಪತಿಗಳ ಭಾಷಣಕ್ಕೆ ವಂದನಾ ನಿರ್ಣಯ ಮಾಡಲು ಅವಕಾಶ ಸಿಕ್ಕಾಗ ಮೊದಲ ಬಾರಿಗೆ ವಿಪಕ್ಷ ನಾಯಕನಾದ ಮೇಲೆ ಭಾಷಣ ಮಾಡಿದ ರಾಹುಲ್ ಗಾಂಧಿ ಮೋದಿ ಸರ್ಕಾರದ ವಿರುದ್ಧ ಟೀಕಾ ಪ್ರಹಾರ ನಡೆಸಿದ್ದರು. ಜೊತೆಗೆ ಹಿಂದೂಗಳ ಬಗ್ಗೆಯೂ ನೀಡಿರುವ ಹೇಳಿಕೆ ವಿವಾದಕ್ಕೆ ಕಾರಣವಾಗಿದೆ.
ಹಿಂದೂಗಳು ಎಂದು ಹೇಳಿಕೊಂಡು ತಿರುಗಾಡುವವರು ಹಿಂಸಾಚಾರ, ಭಯ ಹುಟ್ಟಿಸುವುದರಲ್ಲೇ ಕಾಲ ಕಳೆಯುತ್ತಿದ್ದಾರೆ. ನೀವು ನಿಜವಾದ ಹಿಂದೂಗಳೇ ಅಲ್ಲ ಎಂದು ಬಿಜೆಪಿ ಸಂಸದರಿಗೆ ಟಾಂಗ್ ಕೊಟ್ಟಿದ್ದರು. ಅಲ್ಲದೆ, ಸಂಸತ್ ನಲ್ಲಿ ಶಿವ, ಜೀಸಸ್, ಗುರು ನಾನಕ್, ಅಲ್ಲಾ ಫೋಟೋಗಳನ್ನು ಪ್ರದರ್ಶಿಸಿದ್ದರು.
ಅವರ ಈ ಭಾಷಣದ ಬಗ್ಗೆ ಸಾಕಷ್ಟು ವಿವಾದಗಳಾಗಿವೆ. ಸಂಸತ್ ನಲ್ಲಿ ಭಿತ್ತಿಪತ್ರ ಪ್ರದರ್ಶಿಸುವುದು ನಿಯಮಗಳಿಗೆ ವಿರುದ್ಧವಾಗಿದೆ ಎಂದು ಸ್ಪೀಕರ್ ಓಂ ಬಿರ್ಲಾ ಹೇಳಿದ್ದಾರೆ. ಅಲ್ಲದೆ, ರಾಹುಲ್ ತಮ್ಮ ಭಾಷಣದಲ್ಲಿ ಹಿಂದೂಗಳ ಬಗ್ಗೆ ನೀಡಿರುವ ಹೇಳಿಕೆಯನ್ನು ಕಡತದಿಂದ ತೆಗೆದು ಹಾಕುವಂತೆ ಬಿಜೆಪಿ ಆಗ್ರಹಿಸಿದೆ.
ಈ ವಿವಾದಿತ ಭಾಷಣದ ಬಗ್ಗೆ ಪಾರ್ಲಿಮೆಂಟ್ ಸೆಷನ್ ಮುಗಿಸಿಕೊಂಡು ಮರಳುವಾಗ ರಾಹುಲ್ ಗಾಂಧಿ ಪತ್ರಕರ್ತರ ಬಳಿ ಕೇಳಿದ್ದಾರೆ. ನಿಮಗೆ ಈವತ್ತು ನನ್ನ ಭಾಷಣ ಇಷ್ಟವಾಯಿತೇ ಎಂದು ರಾಹುಲ್ ಪತ್ರಕರ್ತರನ್ನು ಕೇಳಿದ್ದಾರೆ. ಇಂದು ರಾಹುಲ್ ಭಾಷಣಕ್ಕೆ ಪ್ರಧಾನಿ ಮೋದಿ ಪ್ರತ್ಯುತ್ತರ ನೀಡುವ ನಿರೀಕ್ಷೆಯಿದೆ.