ನವದೆಹಲಿ: ಮಾಜಿ ಪ್ರಧಾನಿ ಡಾ ಮನಮೋಹನ್ ಸಿಂಗ್ ಸಾವಿನ ದುಃಖ ಆರುವ ಮುನ್ನವೇ ರಾಹುಲ್ ಗಾಂಧಿ ವಿದೇಶ ಪ್ರವಾಸ ಮಾಡುತ್ತಿರುವುದು ಬಿಜೆಪಿ ಟೀಕೆಗೆ ಗುರಿಯಾಗಿದೆ.
ಡಾ ಮನಮೋಹನ್ ಸಿಂಗ್ ನಿಧನದ ನಿಮಿತ್ತ ಕೇಂದ್ರ ಸರ್ಕಾರವೇ ಏಳು ದಿನಗಳ ಶೋಕಾಚರಣೆ ಮಾಡುತ್ತಿದೆ. ಈ ನಡುವೆ ಕಾಂಗ್ರೆಸ್ ಪಕ್ಷದ ನಾಯಕ ರಾಹುಲ್ ಗಾಂಧಿ ವಿಯೆಟ್ನಾಂಗೆ ತೆರಳಿದ್ದಾರೆ. ರಾಹುಲ್ ಹೊಸ ವರ್ಷಾಚರಣೆ ಮಾಡಲೆಂದೇ ವಿದೇಶಕ್ಕೆ ತೆರಳಿದ್ದಾರೆ ಎನ್ನಲಾಗಿದೆ. ಇದು ಬಿಜೆಪಿಯ ಟೀಕೆಗೆ ಗುರಿಯಾಗಿದೆ.
ಡಾ ಮನಮೋಹನ್ ಸಿಂಗ್ ತೀರಿಕೊಂಡ ದುಃಖ ಇನ್ನೂ ಆರಿಲ್ಲ. ಅದಕ್ಕೆ ಮೊದಲೇ ರಾಹುಲ್ ಮೋಜು ಮಾಡಲು ವಿದೇಶಕ್ಕೆ ತೆರಳಿರುವ ರಾಹುಲ್ ಹಿರಿಯ ನಾಯಕನಿಗೆ ಅವಮಾನ ಮಾಡಿದ್ದಾರೆ ಎಂದು ಬಿಜೆಪಿ ಟೀಕೆ ಮಾಡಿದೆ. ಕಾಂಗ್ರೆಸ್ ಗೆ ಮನಮೋಹನ್ ಸಿಂಗ್ ಬಗ್ಗೆ ಕ್ಯಾರೇ ಇಲ್ಲ ಎನ್ನುವುದಕ್ಕೆ ಇದೇ ಸಾಕ್ಷಿ ಎಂದು ಬಿಜೆಪಿ ಟೀಕಿಸಿದೆ.
ಮನಮೋಹನ್ ಸಿಂಗ್ ಅಂತ್ಯಕ್ರಿಯೆಗೆ ನಿಗದಿ ಮಾಡಿದ ಜಾಗದ ಬಗ್ಗೆ ಕಾಂಗ್ರೆಸ್ ತಕರಾರರು ತೆಗೆದಿತ್ತು. ಮಾಜಿ ಪ್ರಧಾನಿ ಅಂತ್ಯಕ್ರಿಯೆ ವೇಳೆ ಕೇಂದ್ರ ಸರ್ಕಾರ ಅಗೌರವಯುತವಾಗಿ ನಡೆದುಕೊಂಡು ಅವಮಾನ ಮಾಡಿದೆ ಎಂದು ಕಾಂಗ್ರೆಸ್ ಆರೋಪಿಸಿತ್ತು. ಇದೀಗ ಕಾಂಗ್ರೆಸ್ ವಿರುದ್ಧ ಬಿಜೆಪಿಗೆ ರಾಹುಲ್ ಅಸ್ತ್ರ ಸಿಕ್ಕಂತಾಗಿದೆ.
ಪ್ರತೀ ವರ್ಷವೂ ರಾಹುಲ್ ಗಾಂಧಿ ಹೊಸ ವರ್ಷವನ್ನು ತಮ್ಮ ಕುಟುಂಬದ ಜೊತೆ ವಿದೇಶ ಅಥವಾ ವಿಶೇಷ ತಾಣದಲ್ಲಿ ಕಳೆಯುತ್ತಾರೆ. ಈ ಹಿಂದೆ ಗೋವಾಕ್ಕೆ ತಾಯಿ ಸೋನಿಯಾ ಗಾಂಧಿ ಜೊತೆ ಬಂದಿದ್ದನ್ನು ಸ್ಮರಿಸಿಕೊಳ್ಳಬಹುದು.