ನವದೆಹಲಿ: ಲೋಕಸಭೆ ಚುನಾವಣೆ ಪ್ರಚಾರದ ವೇಳೆ ಕಾಂಗ್ರೆಸ್ ಪ್ರಣಾಳಿಕೆಯನ್ನು ಟೀಕಿಸುವಾಗ ಪ್ರಧಾನಿ ಮೋದಿ ಮುಸ್ಲಿಂ ವಿರೋಧಿ ಹೇಳಿಕೆ ನೀಡಿದ್ದು ಈಗ ವಿವಾದಕ್ಕೆ ಕಾರಣವಾಗಿದೆ. ತಮಿಳುನಾಡು ಮತ್ತು ಕೇರಳ ಮುಖ್ಯಮಂತ್ರಿಗಳು ಈ ಬಗ್ಗೆ ಚುನಾವಣಾ ಆಯೋಗ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದ್ದಾರೆ.
ರಾಜಸ್ಥಾನ್ ನಲ್ಲಿ ಚುನಾವಣಾ ಪ್ರಚಾರದ ವೇಳೆ ಮೋದಿ, ಕಾಂಗ್ರೆಸ್ ಪ್ರಣಾಳಿಕೆಯನ್ನು ಕಟುವಾಗಿ ಟೀಕಿಸಿದ್ದಾರೆ. ಈ ವೇಳೆ ಕಾಂಗ್ರೆಸ್ ನಿಮ್ಮ ಆಸ್ತಿ ಮೇಲೆ ಕಣ್ಣಿಟ್ಟಿದೆ. ಈ ಹಿಂದೆ ಇದೇ ಪಕ್ಷದ ಪ್ರಧಾನಿ ಮನಮೋಹನ್ ಸಿಂಗ್ ನಮ್ಮ ದೇಶದ ಸಂಪತ್ತಿನ ಮೊದಲ ಅಧಿಕಾರ ಮುಸ್ಲಿಮರಿಗೆ ಅಂದಿದ್ದರು. ಈಗಿನ ಕಾಂಗ್ರೆಸ್ ಪ್ರಣಾಳಿಕೆ ನೋಡಿದರೆ ಮುಂದೆ ಅವರ ಪಕ್ಷ ಗೆದ್ದರೆ ನಿಮ್ಮೆಲ್ಲರ ಆಸ್ತಿ, ಸಂಪತ್ತನ್ನು ವಶಪಡೆದುಕೊಂಡು ಹೆಚ್ಚು ಮಕ್ಕಳನ್ನು ಹೊಂದಿರುವವರಿಗೆ ಹಂಚಲಿದೆ ಎಂದು ಮುಸ್ಲಿಮರನ್ನು ಪರೋಕ್ಷವಾಗಿ ಉದ್ದೇಶಿಸಿ ಟೀಕಿಸಿದ್ದರು.
ಈ ಹೇಳಿಕೆ ವಿರುದ್ಧ ವಿಪಕ್ಷಗಳು ಈಗ ಕಿಡಿ ಕಾರಿವೆ. ಮೋದಿ ಈ ಹೇಳಿಕೆ ನೀಡುವ ಮೂಲಕ ದೇಶ ಒಡೆಯುವ ಮತ್ತು ಕೋಮುಗಲಭೆಗೆ ಕುಮ್ಮಕ್ಕು ನೀಡಿದ್ದಾರೆ ಎಂದು ಆರೋಪಿಸಿವೆ. ತಮಿಳುನಾಡು ಸಿಎಂ ಎಂಕೆ ಸ್ಟಾಲಿನ್ ಈ ಬಗ್ಗೆ ಸೋಷಿಯಲ್ ಮೀಡಿಯಾ ಎಕ್ಸ್ ನಲ್ಲಿ ಸುದೀರ್ಘ ಪೋಸ್ಟ್ ಬರೆದುಕೊಂಡಿದ್ದು ಈ ಹೇಳಿಕೆ ಮೂಲಕ ಮೋದಿ ದೇಶದಲ್ಲಿ ಕೋಮು ಸೌಹಾರ್ದತೆಗೆ ಧಕ್ಕೆ ತಂದಿದ್ದಾರೆ ಎಂದು ಆರೋಪಿಸಿದ್ದಾರೆ.
ಇನ್ನೊಂದೆಡೆ ಕೇರಳ ಸಿಎಂ ಪಿಣರಾಯಿ ವಿಜಯನ್ ಕೂಡಾ ಈ ಹೇಳಿಕೆಯನ್ನು ಖಂಡಿಸಿದ್ದು, ಚುನಾವಣಾ ಆಯೋಗ ಇಂತಹ ಕೋಮುವಾದದ ಹೇಳಿಕೆ ನೀಡುವ ಪ್ರಧಾನಿ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ. ಇಂತಹ ಹೇಳಿಕೆ ವಿರುದ್ಧ ಎಲ್ಲಾ ಜತ್ಯಾತೀತ ಶಕ್ತಿಗಳು ಒಗ್ಗಟ್ಟಾಗಿ ಹೋರಾಡಬೇಕು ಎಂದು ಕರೆ ನೀಡಿದ್ದಾರೆ.