ಮೋದಿಯಿಂದ 1 ಕಪ್ ಟೀ ಖರೀದಿಸಿವರಿಗೆ 2 ಲಕ್ಷ ರೂಪಾಯಿ ಬಹುಮಾನ: ದಿಗ್ವಿಜಯ್ ಸಿಂಗ್

ಶುಕ್ರವಾರ, 17 ಜೂನ್ 2016 (15:47 IST)
ಪ್ರಧಾನಿ ನರೇಂದ್ರ ಮೋದಿಯವರು ಟೀ ಮಾರಾಟ ಮಾಡುತ್ತಿದ್ದಾಗ (ವಿದ್ಯಾರ್ಥಿ ಜೀವನದಲ್ಲಿ) ಅವರಿಂದ ಒಂದು ಕಪ್ ಟೀ ಕೊಂಡುಕೊಂಡಿದ್ದೆ ಎಂದು ಹೇಳುವವರು ಅಥವಾ ಅವರೊಂದಿಗೆ ಪದವಿ ವ್ಯಾಸಂಗ ಮಾಡಿದವರು ಯಾರಾದರೂ ಇದ್ದರೆ ಅಂತವರಿಗೆ ಎರಡು ಲಕ್ಷ ರೂಪಾಯಿ ಬಹುಮಾನ ನೀಡುವುದಾಗಿ ಹಿರಿಯ ಕಾಂಗ್ರೆಸ್ ನಾಯಕ ದಿಗ್ವಿಜಯ್ ಸಿಂಗ್ ಘೋಷಿಸಿದ್ದಾರೆ.
 
ಮಹಾರಾಷ್ಟ್ರದಲ್ಲಿ ತಮ್ಮ ಪಕ್ಷದ ವತಿಯಿಂದ ಆಯೋಜಿಸಲಾಗಿದ್ದ ರೈತರ ಪ್ರತಿಭಟನಾ ಮೆರವಣಿಗೆ  ‘ಚಾಯ್ ಕೀ ಚರ್ಚಾ’ ದಲ್ಲಿ ಪಾಲ್ಗೊಂಡು ಮಾತನಾಡುತ್ತಿದ್ದ ದಿಗ್ವಿಜಯ್ ಸಿಂಗ್, ನರೇಂದ್ರ ಮೋದಿಯವರ ಜೊತೆ ಪದವಿ ವ್ಯಾಸಂಗ ಮಾಡಿದವರು ಅಥವಾ ಅವರಿಂದ ಚಹಾ ಖರೀದಿಸಿ ಕುಡಿದವರು ಯಾರಾದರು ಇದ್ದರೆ ಅವರಿಗೆ 2 ಲಕ್ಷ ರೂಪಾಯಿ ಬಹುಮಾನ ನೀಡುವುದಾಗಿ ಹೇಳಿದರು.
 
ಅವರು ಚಹಾ ಮಾರಿರುವುದರಲ್ಲಿ ಮತ್ತು ಪದವಿ ಮುಗಿಸುವುದರಲ್ಲಿ ಅನುಮಾನ ವ್ಯಕ್ತ ಪಡಿಸಿರುವ ಸಿಂಗ್, ಈ ಹಿಂದೆ ಸ್ವತಃ ನರೇಂದ್ರ ಮೋದಿಯವರೇ ತಾವು ಮೆಟ್ರಿಕುಲೇಶನ್ ಮುಗಿಸಿದ್ದೇನೆ ಎಂದಿದ್ದರು. ಆದರೆ ಈಗ ತಾವು ಪದವೀಧರರು ಎನ್ನುತ್ತಿದ್ದಾರೆ. ಹಾಗಾಗಿ ಅವರಿಂದ ಚಹ ಕೊಂಡುಕೊಂಡವರು ಅಥವಾ ಪದವಿಯಲ್ಲಿ ಅವರ ಸಹಪಾಠಿಗಳಾಗಿದ್ದವರು ಯಾರಾದರೂ ಇದ್ದರೆ ಮುಂದೆ ಬನ್ನಿ ಎಂದು ಪ್ರಧಾನಿಯವರಿಗೆ ಟಾಂಗ್ ನೀಡಿದ್ದಾರೆ. 

ತಾಜಾ ಸುದ್ದಿಗಳಿಗಾಗಿ ವೆಬ್ ದುನಿಯಾ ಮೊಬೈಲ್ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ.

ವೆಬ್ದುನಿಯಾವನ್ನು ಓದಿ