ಫ್ಲೋರಿಡಾ: ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣಕ್ಕೆ ತೆರಳಿದ್ದ ಭಾರತೀಯ ಶುಭಾಂಶು ಶುಕ್ಲ ಸೇರಿದಂತೆ ಗಗನಯಾನಿಗಳ ತಂಡ ಇಂದು ಅಪರಾಹ್ನ ಭೂಮಿಗೆ ಬಂದಿಳಿಯಲಿದ್ದಾರೆ.
ಶುಭಾಂಶು ಶುಕ್ಲ ಸೇರಿದಂತೆ ನಾಲ್ವರು ಗಗನಯಾನಿಗಳನ್ನು ಹೊತ್ತ ಡ್ರ್ಯಾಗನ್ ಗ್ರೇಸ್ ಬಾಹ್ಯಾಕಾಶ ನೌಕೆ ಭಾರತೀಯ ಕಾಲಮಾನ ಪ್ರಕಾರ ನಿನ್ನೆ ಸಂಜೆ 4.45 ಕ್ಕೆ ಐಎಸ್ ಎಸ್ ನಿಂದ ಬೇರ್ಪಟ್ಟಿತ್ತು. ಬೇರ್ಪಡುವಿಕೆಯ 2 ಗಂಟೆ ಮುಂಚಿತವಾಗಿ ಗಗನಯಾನಿಗಳು ನೌಕೆಯನ್ನು ಪ್ರವೇಶಿಸಿದ್ದರು. 2.37 ಕ್ಕೆ ನೌಕೆಯ ದ್ವಾರವನ್ನು ಮುಚ್ಚಲಾಯಿತು.
ಬಳಿಕ ಎರಡು ಬಾರಿ ಥ್ರಸ್ಟರ್ ಗಳನ್ನು ದಹಿಸುವ ಮೂಲಕ ಸಂಜೆ 4.45 ಕ್ಕೆ ನೌಕೆಯು ಬೇರ್ಪಟ್ಟಿತ್ತು. ಭೂಮಿಯ ವಾತಾವರಣಕ್ಕೆ ಹೊಂದಿಕೊಳ್ಳಲು ಹಲವು ಬಾರಿ ಎಂಜಿನ್ ದಹನ ಪ್ರಕ್ರಿಯೆ ನಡೆಯುತ್ತದೆ. ಬಳಿಕ ತನ್ನ ಪಥವನ್ನು ಸರಿಪಡಿಡಿಸಿಕೊಳ್ಳಲು ನೌಕೆಯು ಭೂಮಿಗೆ ಹಲವು ಬಾರಿ ಸುತ್ತುತ್ತದೆ.
ಭೂಮಿಯ ವಾತಾವರಣಕ್ಕೆ ಮರಳುವ ಮುನ್ನ ಭೂಮಿಯಿಂದ 350 ಕಿ.ಮೀ. ಎತ್ತರದಲ್ಲಿಕ್ಯಾಪ್ಸೂಲ್ ನಿಂದ ಟ್ರಂಕ್ ಪ್ರತ್ಯೇಕಗೊಂಡು ಉರಿದುಹೋಗುತ್ತದೆ. ಬಳಿಕ ಭೂಮಿಯ ವಾತಾವರಣಕ್ಕೆ ಕ್ಯಾಪ್ಸೂಲ್ ಪ್ರವೇಶಿಸುತ್ತದೆ. ಈ ವೇಳೆ ಶಾಖ 1600 ಡಿ.ಸೆ.ಯಷ್ಟಿರುತ್ತದೆ. ಹೀಗಾಗಿ ಒಳಗಿರುವವರನ್ನು ರಕ್ಷಿಸಲು ಶಾಖ ರಕ್ಷಾ ಕವಚ ಮುಂಬರುವಂತೆ ಕ್ಯಾಪ್ಸೂಲ್ ತಿರುಗುತ್ತದೆ. ಕ್ಯಾಪ್ಸಲೂ್ ನ ವೇಗ ಕಡಿಮೆಗೊಳಿಸಲು ಒಂದೊಂದಾಗಿ ಪ್ಯಾರಾಚೂಟ್ ಗಳು ತೆರೆಯಲ್ಪಡುತ್ತವೆ. ಗಗನಯಾನಿಗಳಿರುವ ಕ್ಯಾಪ್ಸೂಲ್ ಇಂದು ಅಪರಾಹ್ನ 3 ಗಂಟೆಗೆ ಕ್ಯಾಲಿಫೋರ್ನಿಯಾದ ಸಮುದ್ರ ಕರಾವಳಿಯಲ್ಲಿ ಬಂದಿಳಿಯಲಿದೆ. ಅವರನ್ನು ರಕ್ಷಿಸಲು ನೌಕೆ ಸಿದ್ಧವಾಗಿರುತ್ತದೆ. ಭೂಮಿಗೆ ಬಂದ ಬಳಿಕ ಶುಭಾಂಶು ಸೇರಿದಂತೆ ನಾಲ್ವರು ಗಗನಯಾನಿಗಳು 7 ದಿನಗಳ ಕಾಲ ಭೂಮಿಯ ವಾತಾವರಣಕ್ಕೆ ಹೊಂದಿಕೊಳ್ಳಲು ಪುನಶ್ಚೇತನ ಕಾರ್ಯದಲ್ಲಿ ತೊಡಗಿಸಿಕೊಳ್ಳಲಿದ್ದಾರೆ.