ತಮಿಳುನಾಡಿನಲ್ಲಿ ನನಗೆ ಜೀವ ಬೆದರಿಕೆ ಇದೆ ಎಂದು ಎಐಡಿಎಂಕೆ ಸಂಸದೆ ನಿನ್ನೆ ರಾಜ್ಯಸಭೆಯಲ್ಲಿ ಗೋಳಾಡಿದರು. ಇದಾದ ಕೆಲವೇ ಗಂಟೆಗಳಲ್ಲಿ ಪಕ್ಷಕ್ಕೆ ಕೆಟ್ಟ ಹೆಸರು ತಂದ ಆರೋಪದ ಮೇಲೆ ಅವರನ್ನು ಪಕ್ಷದಿಂದ ವಜಾ ಮಾಡಲಾಗಿದೆ.
ತಮಿಳುನಾಡಿನಲ್ಲಿ ನನಗೆ ರಕ್ಷಣೆ ಇಲ್ಲ ಎಂದು ಶಶಿಕಲಾ ಪುಷ್ಪಾ ಭೋರ್ಗರೆಂದು ಅಳುವಾಗ ಕಾಂಗ್ರೆಸ್ ಸೇರಿದಂತೆ ವಿರೋಧ ಪಕ್ಷಗಳ ಸಂಸದರು ಅವರಿಗೆ ಬೆಂಬಲ ವ್ಯಕ್ತ ಪಡಿಸಿದವು. ತಮಗೆ ಸಾಂತ್ವನ ಹೇಳಿದ ಕಾಂಗ್ರೆಸ್ ನಾಯಕರಾದ ಸೋನಿಯಾ ಗಾಧಿ ಮತ್ತು ರಾಹುಲ್ ಗಾಂಧಿಯವರಿಗೆ ಶಶಿಕಲಾ ಕೃತಜ್ಞತೆ ಸಲ್ಲಿಸಿರುವುದರಿಂದ ಅವರೀಗ ಕಾಂಗ್ರೆಸ್ ಸೇರುವರೇ ಎಂಬ ಸಂಶಯ ಹುಟ್ಟಿಕೊಂಡಿದೆ.
ಈ ಘಟನೆ ನಡೆದ ಕೆಲವೇ ಕ್ಷಣಗಳಲ್ಲಿ ಪಕ್ಷಕ್ಕೆ ಅಪಕೀರ್ತಿ ತಂದ ಕಾರಣ ನೀಡಿ ಶಶಿಕಲಾ ಪುಷ್ಪಾ ಅವರನ್ನು ಪಕ್ಷದಿಂದ ತೆಗೆದುಹಾಕಲಾಗಿದೆ ಎಂದು ತಮಿಳುನಾಡು ಮುಖ್ಯಮಂತ್ರಿ ಎಐಎಡಿಎಂಕೆ ಮುಖ್ಯಸ್ಥೆ ಜೆ.ಜಯಲಲಿತಾ ಪ್ರಕಟಿಸಿದ್ದಾರೆ.
ಪಕ್ಷದ ಸಿದ್ದಾಂತಗಳನ್ನು ಉಲ್ಲಂಘಿಸಿದ ಹಿನ್ನೆಲೆಯಲ್ಲಿ ಸಂಸದೆ ಶಶಿಕಲಾ ಪುಷ್ಪಾ ಅವರನ್ನು ಪಕ್ಷದ ಎಲ್ಲಾ ಹುದ್ದೆಗಳು ಮತ್ತು ಪ್ರಾಥಮಿಕ ಸದಸ್ಯತ್ವದಿಂದ ಉಚ್ಚಾಟಿಸಲಾಗಿದೆ ಎಂದು ಸಿಎಂ ಜಯಲಲಿತಾ ಘೋಷಿಸಿದ್ದಾರೆ.
ಕಳೆದ ಶನಿವಾರ ದೆಹಲಿ ವಿಮಾನ ನಿಲ್ದಾಣದಲ್ಲಿ ಪ್ರತಿಪಕ್ಷ ಡಿಎಂಕೆ ಸಂಸದ ಟ್ರಿಚಿ ಶಿವ ಅವರಿಗೆ ಕಪಾಳಮೋಕ್ಷ ಮಾಡಿದ ನಂತರ ವಿಮಾನದಿಂದ ಹೊರಹಾಕಲ್ಪಟ್ಟ ಶಶಿಕಲಾ ಪಕ್ಷದಿಂದ ಶಿಕ್ಷೆಗೊಳಗಾಗುವ ಭೀತಿಯಲ್ಲಿದ್ದರು. ನಾನು ಸಂಸದೆ ಸ್ಥಾನಕ್ಕೆ ರಾಜೀನಾಮೆ ನೀಡುವ ಪರಿಸ್ಥಿತಿ ಬಂದೊದಗಿದೆ ಎಂದು ಅವರು ರಾಜ್ಯಸಭೆಯಲ್ಲಿ ಹೇಳಿದ್ದರು.
ಸಂಸತ್ತಿನ ಹೊರ ಆವರಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಶಶಿಕಲಾ ವಿಮಾನ ನಿಲ್ದಾಣದಲ್ಲಿ ನಡೆದ ಘಟನೆಗೂ ಈಗ ಕೈಗೊಂಡಿರುವ ಶಿಸ್ತುಕ್ರಮಕ್ಕೂ ಏನೂ ಸಂಬಂಧವಿಲ್ಲ. ಕಳೆದ ಎರಡು ತಿಂಗಳುಗಳಿಂದ ನನಗೆ ಮನೆಗೆ ಹೋಗಲು ಅವಕಾಶ ನೀಡಲಿಲ್ಲ. ಅವರ ಮನೆಯಲ್ಲಿ ನಾಯಿಯಂತೆ ಕಟ್ಟಿಹಾಕಿ ರಾಜೀನಾಮೆಗೆ ಒತ್ತಡ ಹೇರಲಾಗುತ್ತಿತ್ತು. ಜೀವ ಬೆದರಿಕೆಯೊಡ್ಡಲಾಗಿತ್ತು ಎಂದು ಸಿಎಂ ಜಯಲಲಿತಾ ವಿರುದ್ಧ ಗಂಭೀರ ಆರೋಪ ಮಾಡಿದ್ದಾರೆ.
ಎಐಎಡಿಎಂಕೆ ಪಕ್ಷ ತಮ್ಮನ್ನು ಉಚ್ಚಾಟಿಸಿದ್ದರ ಬಗ್ಗೆ ಸಂತಸ ವ್ಯಕ್ತಪಡಿಸಿದ ಅವರು, ಇದೀಗ ನಾನು ನನ್ನ ಸ್ವಂತ ನಿರ್ಧಾರಗಳನ್ನು ಕೈಗೊಳ್ಳಬಹುದಾಗಿದೆ ಎಂದು ಸಂತಸ ವ್ಯಕ್ತಪಡಿಸಿದರು.