ತಮಿಳುನಾಡು ರಾಜಕೀಯ ಬಿಕ್ಕಟ್ಟು: ಕೇಂದ್ರಕ್ಕೆ ವರದಿ ರವಾನಿಸಿದ ಗವರ್ನರ್
ಶುಕ್ರವಾರ, 10 ಫೆಬ್ರವರಿ 2017 (08:36 IST)
ತಮಿಳುನಾಡಿನಲ್ಲಿ ಏರ್ಪಟ್ಟಿರುವ ರಾಜಕೀಯ ಹಗ್ಗಜಗ್ಗಾಟ ರಾಜಭವನದ ಅಂಗಳ ಪ್ರವೇಶಿಸಿದೆ. ನಿನ್ನೆಯೇ ಹಂಗಾಮಿ ಮುಖ್ಯಮಂತ್ರಿ ಪನ್ನೀರ್ ಸೆಲ್ವಂ ಮತ್ತು ಸಿಎಂ ಹುದ್ದೆ ಆಕಾಂಕ್ಷಿ ಶಶಿಕಲಾ ಜೊತೆ ಮಾತುಕತೆ ನಡೆಸಿದ ಗವರ್ನರ್ ವಿದ್ಯಾ ಸಾಗರ್ ರಾವ್, ರಾತ್ರಿಯೇ ಕೇಂದ್ರಕ್ಕೆ ವರದಿ ರವಾನಿಸಿದ್ದಾರೆ ಎಂದು ತಿಳಿದುಬಂದಿದೆ.
ಶಶಿಕಲಾರಿಂದ ಸರ್ಕಾರ ರಚನೆಗೆ ಹಕ್ಕು ಮಂಡನೆ: ನಿನ್ನೆ ಸಂಜೆ 7.30ರ ಸುಮಾರಿಗೆ ಬೆಂಬಲಿಗ ಸಚಿವರು ಮತ್ತು ಶಾಸಕರ ಜೊತೆ ರಾಜ್ಯಪಾಲರನ್ನ ಭೇಟಿಯಾದ ಶಶಿಕಲಾ, ಶಾಸಕರ ಬೆಂಬಲವಿರುವ ಪತ್ರ ಮತ್ತು ಶಾಸಕಾಂಗ ಸಭೆಯಲ್ಲಿ ಕೈಗೊಂಡ ನಿರ್ಣಯದ ಪತ್ರ ನೀಡಿ ಸರ್ಕಾರ ರಚನೆಗೆ ಅವಕಾಶ ಕೊಡುವಂತೆ ಮನವಿ ಮಾಡಿದ್ದಾರೆ.
ಈ ಸಂದರ್ಭ, ಅಕ್ರಮ ಆಸ್ತಿ ಗಳಿಕೆ ಪ್ರಕರಣದ ತೀರ್ಪಿನ ಬಗ್ಗೆ ಗವರ್ನರ್ ಕೆಲ ಪ್ರಶ್ನೆಗಳನ್ನ ಮುಂದಿಟ್ಟಿದ್ದಾರೆ. ಈ ಕುರಿತು ಪ್ರತಿಕ್ರಿಯಿಸಿರುವ ಶಶಿಕಲಾ, ಈ ಪ್ರಕರಣದಲ್ಲಿ ಹೈಕೋರ್ಟ್ ಕ್ಲೀನ್ ಚಿಟ್ ನೀಡಿದೆ. ಸುಪ್ರೀಂಕೋರ್ಟ್`ನಲ್ಲೂ ನಮ್ಮ ಪರವಾಗಿ ತೀರ್ಪು ಬರುವ ಸಾಧ್ಯತೆ ಇದೆ. ಹೀಗಾಗಿ, ಸರ್ಕಾರ ರಚನೆಗೆ ಅನುವುಮಾಡಿಕೊಡಬೇಕೆಂದು ಕೋರಿದ್ದಾರೆ ಎನ್ನಲಾಗಿದೆ.