ಶಿಕ್ಷಣದಲ್ಲಿ ಹಿಂದಿ ಹೇರಿಕೆ ವಿರುದ್ಧ ತೊಡೆ ತಟ್ಟಿದ ಸಿದ್ದರಾಮಯ್ಯ
ಸೋಮವಾರ, 3 ಜೂನ್ 2019 (10:47 IST)
ಬೆಂಗಳೂರು: ಕೇಂದ್ರ ಮಾನವ ಸಂಪನ್ಮೂಲ ಇಲಾಖೆಯ ಪ್ರಸ್ತಾವಿತ ಹೊಸ ಶಿಕ್ಷಣ ನೀತಿಯಲ್ಲಿ ಎಲ್ಲಾ ರಾಜ್ಯಗಳಲ್ಲಿ ಹಿಂದಿ ಕಲಿಕೆ ಕಡ್ಡಾಯ ಪ್ರಸ್ತಾಪಕ್ಕೆ ಇದೀಗ ಹಿಂದಿಯೇತರ ರಾಜ್ಯಗಳಿಂದ ತೀವ್ರ ವಿರೋಧ ವ್ಯಕ್ತವಾಗುತ್ತಿದೆ.
ತಮಿಳುನಾಡಿನ ಡಿಎಂಕೆ ಪಕ್ಷದ ನಾಯಕ ಎಂಕೆ ಸ್ಟಾಲಿನ್, ನಟ ಕಮಲ್ ಹಾಸನ್, ಶಿವಸೇನೆ ಬಳಿಕ ಇದೀಗ ಕರ್ನಾಟಕದ ಮಾಜಿ ಸಿಎಂ, ಕಾಂಗ್ರೆಸ್ ನಾಯಕ ಸಿದ್ದರಾಮಯ್ಯ ಕೂಡಾ ಹಿಂದಿ ಹೇರಿಕೆಗೆ ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ.
ಇತರ ರಾಜ್ಯಗಳಲ್ಲಿ ಹಿಂದಿಯನ್ನು ಮೂರನೇ ಕಡ್ಡಾಯ ಭಾಷೆಯಾಗಿ ಜಾರಿಗೊಳಿಸುವುದು ನಮ್ಮ ಮೇಲಿನ ಗದಾಪ್ರಹಾರ ಎಂದು ಸರಣಿ ಟ್ವೀಟ್ ಮಾಡಿ ಸಿದ್ದರಾಮಯ್ಯ ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ. ಈ ಕೂಗಿಗೆ ಇನ್ನಷ್ಟು ಅಪಸ್ವರಗಳು ಕೇಳಿಬರುವ ಸಾಧ್ಯತೆಯಿದೆ.
ಹಿಂದಿಯೇತರ ಭಾಷೆ ಮಾತನಾಡುವ ರಾಜ್ಯಗಳಲ್ಲಿ ಈ ರೀತಿ ಹಿಂದಿಯನ್ನು ಕಡ್ಡಾಯವಾಗಿ ಹೇರುವುದು ಸರಿಯಲ್ಲ ಎಂದು ಈ ನಾಯಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ನಡುವೆ ಇದಕ್ಕೆ ಪ್ರತಿಕ್ರಿಯೆ ನೀಡಿರುವ ಕೇಂದ್ರ ಸಚಿವ ಪ್ರಕಾಶ್ ಜಾವೇಡ್ಕರ್ ಕೇಂದ್ರ ಶಿಕ್ಷಣ ಸಮಿತಿಯ ಪ್ರಸ್ತಾಪವನೆಯನ್ನು ಪರಿಶೀಲಿಸುತ್ತಿದೆಯಷ್ಟೇ. ಯಾವುದೇ ಭಾಷೆಯನ್ನೂ ಕಡ್ಡಾಯವಾಗಿ ಹೇರಿಕೆ ಮಾಡುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.