ನವದೆಹಲಿ: ಕಳೆದ ವಾರ ಸಂಸತ್ತಿನಲ್ಲಿ ತಮ್ಮ ಹೆಸರಿನ ಜೊತೆ ಅಮಿತಾಭ್ ಬಚ್ಚನ್ ಎಂದು ಸೇರಿಸಿದ್ದಕ್ಕೆ ತಕರಾರು ತೆಗೆದಿದ್ದ ಸಂಸದೆ ಜಯಾ ಬಚ್ಚನ್ ಮತ್ತೊಮ್ಮೆ ಇಂದು ಇದೇ ವಿಚಾರಕ್ಕೆ ರಾಜ್ಯ ಸಭೆಯಲ್ಲಿ ಸ್ಪೀಕರ್ ಜಗದೀಪ್ ಧನಕರ್ ಜೊತೆ ವಾಗ್ವಾದ ನಡೆಸಿದರು.
ಜಯಾ ಅವರನ್ನು ಇಂದು ಸ್ಪೀಕರ್ ಜಗದೀಪ್ ಧನಕರ್ ಜಯಾ ಅಮಿತಾಭ್ ಬಚ್ಚನ್ ಎಂದು ಕರೆದರು. ಇದರಿಂದ ಸಿಟ್ಟಿಗೆದ್ದ ಜಯಾ ಸ್ಪೀಕರ್ ಸರ್ ನನ್ನನ್ನು ಕ್ಷಮಿಸಿ. ಆದರೆ ನಿಮ್ಮ ಮಾತಿನ ಧಾಟಿ ಸರಿ ಇಲ್ಲ ಎಂದಿದ್ದಾರೆ. ಇದಕ್ಕೆ ಸಿಟ್ಟಿಗೆದ್ದ ಸ್ಪೀಕರ್ ಧನಕರ್, ನೀವು ಸೆಲೆಬ್ರಿಟಿಯಾಗಿರಬಹುದು. ಆದರೆ ಇಲ್ಲಿ ಕೆಲವೊಂದು ಶಿಷ್ಟಾಚಾರಗಳನ್ನು ಪಾಲಿಸಬೇಕಾಗುತ್ತದೆ ಎಂದರು.
ಜಯಾರನ್ನು ಕುಳಿತುಕೊಳ್ಳಲು ಸೂಚಿಸಿದ ಸ್ಪೀಕರ್ ಧನಕರ್ ನೀವು ನನಗೆ ಪಾಠ ಮಾಡಲು ಬರಬೇಡಿ ಎಂದರು. ಈ ವೇಳೆ ಜಯಾ ಬಚ್ಚನ್ ಕೂಡಾ ವಾಗ್ವಾದ ನಡೆಸಿದ್ದು ಇದು ತುಂಬಾ ಅವಮಾನಕರ ಅನುಭವ. ಈ ವಿಚಾರದಲ್ಲಿ ಸ್ಪೀಕರ್ ಕ್ಷಮೆ ಯಾಚಿಸಬೇಕು ಎಂದು ಜಯಾ ಪಟ್ಟು ಹಿಡಿದರು.
ಜಯಾಗೆ ಬೆಂಬಲ ಕೋರಿ ಸೋನಿಯಾ ಗಾಂಧಿ ನೇತೃತ್ವದಲ್ಲಿ ವಿಪಕ್ಷ ಸದಸ್ಯರು ಸಭಾ ತ್ಯಾಗ ಮಾಡಿದ್ದಾರೆ. ಜಯಾ ನಾಲ್ಕು ಬಾರಿ ಸಂಸದೆಯಾಗಿ ಆಯ್ಕೆಯಾದವರು. ಅವರಿಗೆ ಅವಮಾನವಾಗುವುದು ಸಹಿಸಲ್ಲ. ಸ್ಪೀಕರ್ ಕ್ಷಮೆ ಕೇಳಲೇಬೇಕು ಎಂದು ವಿಪಕ್ಷಗಳು ಆಗ್ರಹಿಸಿವೆ. ಕಳೆದ ವಾರವೂ ಸಂಸತ್ ನಲ್ಲಿ ಸ್ಪೀಕರ್ ಹರಿವಂಶ್ ನಾರಾಯಣ್ ಸಿಂಗ್ ಅವರಿಗೆ ನನ್ನನ್ನು ಜಯಾ ಬಚ್ಚನ್ ಎಂದು ಕರೆದರೆ ಸಾಕು ಎಂದು ಖಡಕ್ ಆಗಿ ಹೇಳಿದ್ದರು.