ಕಡಿಮೆ ಅಂಕ ನೀಡಿದ್ದಕ್ಕೆ ಶಿಕ್ಷಕನನ್ನೇ ಥಳಿಸಿದ ವಿದ್ಯಾರ್ಥಿಗಳು!

ಬುಧವಾರ, 31 ಆಗಸ್ಟ್ 2022 (14:43 IST)
ರಾಂಚಿ : ಪರೀಕ್ಷೆಯಲ್ಲಿ ಕಡಿಮೆ ಅಂಕ ನೀಡಿದ್ದಕ್ಕೆ ಶಾಲೆಯ ಗಣಿತ ಶಿಕ್ಷಕ ಮತ್ತು ಗುಮಾಸ್ತರನ್ನೇ ಮರಕ್ಕೆ ಕಟ್ಟಿಹಾಕಿ ವಿದ್ಯಾರ್ಥಿಗಳು ಥಳಿಸಿರುವ ಘಟನೆ ಜಾರ್ಖಂಡ್ನ ದುಮ್ಕಾ ಜಿಲ್ಲೆಯ ವಸತಿ ಶಾಲೆಯಲ್ಲಿ ನಡೆದಿದೆ.

ಜಿಲ್ಲೆಯ ಗೋಪಿಕಂದರ್ ಪೊಲೀಸ್ ಠಾಣೆ ವ್ಯಾಪ್ತಿಯ ಸರ್ಕಾರಿ ಪರಿಶಿಷ್ಟ ಪಂಗಡ ವಸತಿ ಶಾಲೆಯಲ್ಲಿ ಸೋಮವಾರ ಈ ಘಟನೆ ನಡೆದಿದೆ.

ಜಾರ್ಖಂಡ್ ಅಕಾಡೆಮಿಕ್ ಕೌನ್ಸಿಲ್ (ಜೆಎಸಿ) ಶನಿವಾರ ಪ್ರಕಟಿಸಿದ 9 ನೇ ತರಗತಿ ಪರೀಕ್ಷೆ ಫಲಿತಾಂಶದಲ್ಲಿ 32 ವಿದ್ಯಾರ್ಥಿಗಳ ಪೈಕಿ 11 ವಿದ್ಯಾರ್ಥಿಗಳು ಅನುತ್ತೀರ್ಣಕ್ಕೆ ಗ್ರೇಡ್ ‘ಡಿಡಿ’ ಪಡೆದಿದ್ದರು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಈ ಪ್ರಕರಣದಲ್ಲಿ ಯಾವುದೇ ಎಫ್ಐಆರ್ ದಾಖಲಾಗಿಲ್ಲ. ಏಕೆಂದರೆ ಶಾಲಾ ಆಡಳಿತವು ಘಟನೆಯ ಬಗ್ಗೆ ಯಾವುದೇ ಲಿಖಿತ ದೂರನ್ನು ನೀಡಿಲ್ಲ. ಘಟನೆಯ ಪರಿಶೀಲನೆ ನಂತರ ದೂರು ದಾಖಲಿಸಲು ಶಾಲಾ ಅಧಿಕಾರಿಯನ್ನು ಕೇಳಿದೆವು. ಆದರೆ ಅವರು ನಿರಾಕರಿಸಿದರು. ಇದರಿಂದ ವಿದ್ಯಾರ್ಥಿಗಳ ಬದುಕು ಹಾಳಾಗಬಹುದು ಎಂದಿದ್ದಾರೆಂದು ಪೊಲೀಸರು ತಿಳಿಸಿದ್ದಾರೆ. 

ಶಿಕ್ಷಕನನ್ನು ಸುಮನ್ ಕುಮಾರ್ ಹಾಗೂ ಗುಮಾಸ್ತ ಸೋನೆರಾಮ್ ಚೌರೆ ಎಂದು ಗುರುತಿಸಲಾಗಿದೆ. ಅವರು ಕೂಡ ಪೊಲೀಸರಿಗೆ ಯಾವುದೇ ಲಿಖಿತ ದೂರು ನೀಡಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ