ಕಾವೇರಿ ವಿಚಾರದಲ್ಲಿ ಮೊದಲು ನಮ್ಮ ಆದೇಶ ಪಾಲಿಸಿ: ಸುಪ್ರೀಂ ಕೋರ್ಟ್ ತಾಕೀತು
ಮಂಗಳವಾರ, 10 ಏಪ್ರಿಲ್ 2018 (08:26 IST)
ನವದೆಹಲಿ: ಕಾವೇರಿ ಜಲಮಂಡಳಿ ರಚನೆ ವಿಚಾರದಲ್ಲಿ ಮೊದಲು ನಮ್ಮ ಆದೇಶ ಪಾಲಿಸಿ ಎಂದು ಸುಪ್ರೀಂಕೋರ್ಟ್ ಕೇಂದ್ರ ಸರ್ಕಾರಕ್ಕೆ ತಾಕೀತು ಮಾಡಿದೆ.
ಕಾವೇರಿ ಜಲಮಂಡಳಿ ರಚನೆ ವಿವಾದ ಕುರಿತಂತೆ ಇದೀಗ ಕರ್ನಾಟಕ ಮತ್ತು ತಮಿಳುನಾಡಿನಲ್ಲಿ ಪರ ವಿರೋಧ ಪ್ರತಿಭಟನೆ ಕಾವೇರುತ್ತಿದೆ. ಇದರ ಬೆನ್ನಲ್ಲೇ ಸುಪ್ರೀಂ ಕೋರ್ಟ್ ಕೇಂದ್ರಕ್ಕೆ ಚಾಟಿ ಬೀಸಿರುವುದು ಮತ್ತಷ್ಟು ಕುತೂಹಲಕ್ಕೆ ಕಾರಣವಾಗಿದೆ.
ಉಭಯ ರಾಜ್ಯಗಳಿಗೆ ನದಿ ನೀರಿನ ಹಂಚಿಕೆಯಲ್ಲಿ ಯಾವುದೇ ತಾರತಮ್ಯವಾಗದ ರೀತಿಯಲ್ಲಿ ನದಿ ನಿರ್ವಹಣಾ ಮಂಡಳಿಯೊಂದನ್ನು ರಚಿಸುವಂತೆ ಕೇಂದ್ರಕ್ಕೆ ಸುಪ್ರೀಂ ಕೋರ್ಟ್ ಆದೇಶಿಸಿತ್ತು. ಆದರೆ ಕೇಂದ್ರ ಈ ಬಗ್ಗೆ ಮಂಡಳಿ ರಚಿಸುವುದರ ಬಗ್ಗೆ ನಿರಾಸಕ್ತಿ ತೋರಿರುವುದು ಉಚ್ಛ ನ್ಯಾಯಾಲಯದ ಕೆಂಗಣ್ಣಿಗೆ ಗುರಿಯಾಗಿದೆ.
ಮೇ 3 ರೊಳಗಾಗಿ ಜಲ ನಿರ್ವಹಣಾ ಮಂಡಳಿಯ ರೂಪು ರೇಷೆಯನ್ನು ನ್ಯಾಯಾಲಯಕ್ಕೆ ತಿಳಿಸಬೇಕೆಂದು ಸುಪ್ರೀಂ ಕೋರ್ಟ್ ಆದೇಶಿಸಿತ್ತು. ಆದರೆ ಕರ್ನಾಟಕದಲ್ಲಿ ಚುನಾವಣೆ ನಡೆಯುತ್ತಿರುವುದರಿಂದ ಹೆಚ್ಚಿನ ಸಮಯ ನೀಡಬೇಕೆಂದು ಕೇಂದ್ರ ಮನವಿ ಮಾಡಿತ್ತು. ಇದಕ್ಕೆ ತಿರುಗೇಟು ನೀಡಿರುವ ಸುಪ್ರೀಂಕೋರ್ಟ್ ನಿಮಗೆ ಯಾವುದೇ ಸಂಶಯವಿದ್ದರೆ ನಮ್ಮ ಬಳಿಗೆ ಬನ್ನಿ ಎಂದು ತಾಕೀತು ಮಾಡಿದೆ.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.