ನವದೆಹಲಿ : ಬೀದಿನಾಯಿಗಳ ಅಟ್ಟಹಾಸಕ್ಕೆ ಬಾಲಕಿ ಬಲಿಯಾಗಿರುವ ಘಟನೆ ದೆಹಲಿಯ ಮೋತಿ ನಗರದಲ್ಲಿ ನಡೆದಿದೆ.
ಲಕ್ಷ್ಮಿ(3) ಮೃತ ಬಾಲಕಿ. ಆಟವಾಡುತ್ತಿದ್ದ ಬಾಲಕಿಯ ಮೇಲೆ ನಾಯಿಗಳು ದಾಳಿ ಮಾಡಿ ಬಾಲಕಿಯ ಪ್ರಾಣವನ್ನು ತೆಗೆದಿವೆ.
ದೆಹಲಿ ಪೊಲೀಸರ ಪ್ರಕಾರ, ಡಿಸೆಂಬರ್ 17ರ ಮಧ್ಯಾಹ್ನ 2.45ರ ಸುಮಾರಿಗೆ ಬೀದಿ ನಾಯಿಗಳು ಲಕ್ಷ್ಮಿ ಎಂಬ ಬಾಲಕಿ ಉದ್ಯಾನವನದಲ್ಲಿ ಆಟವಾಡುತ್ತಿದ್ದಾಗ ದಾಳಿ ಮಾಡಿವೆ.
ಬಾಲಕಿಯನ್ನು ತಕ್ಷಣ ಎಬಿಜಿ ಆಸ್ಪತ್ರೆಗೆ ದಾಖಲು ಮಾಡಲಾಯಿತಾದರೂ, ಚಿಕಿತ್ಸೆ ಫಲಕಾರಿಯಾಗದೇ ಆಕೆ ಸಾವನ್ನಪ್ಪಿದ್ದಾಳೆ. ಪೊಲೀಸರು ಬಾಲಕಿಯ ಮೃತದೇಹವನ್ನು ದೀನ್ ದಯಾಳ್ ಉಪಾಧ್ಯಾಯ ಆಸ್ಪತ್ರೆಗೆ ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದು, ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ.
ಕೆಲವು ದಿನಗಳ ಹಿಂದೆ ಮಂಗ, ನಾಯಿ ಗ್ಯಾಂಗ್ವಾರ್ನಲ್ಲಿ 250 ನಾಯಿಗಳು ಸಾವನ್ನಪ್ಪಿರುವ ಘಟನೆ ಮಹಾರಾಷ್ಟ್ರದ ಬೀಡ್ ಜಿಲ್ಲೆಯಲ್ಲಿ ನಡೆದಿರುವುದು ಬಹುದೊಡ್ಡಮಟ್ಟದಲ್ಲಿ ಸುದ್ದಿಯಾಗಿತ್ತು. ಬೀದಿ ನಾಯಿಗಳ ಮೇಲಿನ ಪ್ರತೀಕಾರದಿಂದ ಕೋತಿಗಳ ಗುಂಪು ಸಿಕ್ಕ ಸಿಕ್ಕ ನಾಯಿಮರಿಗಳನ್ನೆಲ್ಲಾ ಹೊತ್ತೊಯ್ದು ಎತ್ತರದ ಕಟ್ಟಡ ಅಥವಾ ಮರದಿಂದ ಕೈಬಿಟ್ಟು ಕೊಂದು ಹಾಕಿದ್ದವು. ಇದೀಗ ಬೀದಿ ನಾಯಿ ಮಗುನ ಪ್ರಾಣವನ್ನು ತೆಗೆದಿರುವುದು ದೆಹಲಿಯಲ್ಲಿ ಸುದ್ದಿಯಾಗುತ್ತಿದೆ.