ನವದೆಹಲಿ : ಕರ್ನಾಟಕ ವಿಧಾನಸಭಾ ಚುನಾವಣೆಗೆ ಇನ್ನೂ 10 ದಿನಗಳು ಬಾಕಿಯಿರುವಾಗಲೇ ಪ್ರಧಾನಿ ಮೋದಿ ಅವರ ʻಮನ್ ಕಿ ಬಾತ್ʼ ಕಾರ್ಯಕ್ರಮ 100ನೇ ಸಂಚಿಕೆ ಪೂರೈಸುತ್ತಿದೆ.
ಸದ್ಯ ಶನಿವಾರ ಸಂಜೆ ಬೆಂಗಳೂರಿನಲ್ಲಿ ಅದ್ಧೂರಿ ರೋಡ್ ಶೋ ನಡೆಸಿರುವ ಮೋದಿ ಅವರು ರಾಜಭವನದಲ್ಲಿ ವಾಸ್ತವ್ಯ ಹೂಡಿದ್ದು, ಭಾನುವಾರ (ಏ.30) ಕಾರ್ಯಕ್ರಮ ಮುಗಿಸಿ ದೆಹಲಿಗೆ ಮರಳಲಿದ್ದಾರೆ.
ನರೇಂದ್ರ ಮೋದಿ ಅವರು 2014ರಲ್ಲಿ ಮೊದಲ ಬಾರಿಗೆ ಪ್ರಧಾನಿಯಾದ ಬಳಿಕ ಅದೇ ವರ್ಷದ ಅಕ್ಟೋಬರ್ನಲ್ಲಿ ಮನ್ ಕಿ ಬಾತ್ ಕಾರ್ಯಕ್ರಮ ಆರಂಭಿಸಿದರು. ರಾಜಕೀಯ ವಿಷಯಗಳನ್ನು ಪ್ರಸ್ತಾಪಿಸದೇ ಇರುವ ಇದೊಂದು ಆತ್ಮೀಯ ಸಂವಹನವೆನಿಸಿದೆ.
ಪ್ರತಿ ತಿಂಗಳ ಕೊನೇ ಭಾನುವಾರ ಭಾಷಣ ಪ್ರಸಾರವಾಗುತ್ತದೆ. ಒಂದೇ ಒಂದು ತಿಂಗಳೂ ಕಾರ್ಯಕ್ರಮ ಪ್ರಸಾರ ನಿಂತಿಲ್ಲ. ಇದಕ್ಕೆ ಸುಮಾರು 130 ಕೋಟಿ ಶ್ರೋತೃಗಳಿರುವುದು ಹೆಮ್ಮೆಯ ವಿಚಾರ.
ಪ್ರಧಾನಿ ಮೋದಿ ಅವರು ಪ್ರತಿ ತಿಂಗಳು ರಾಷ್ಟ್ರವನ್ನು ಉದ್ದೇಶಿಸಿ ಮಾತನಾಡುತ್ತಾ, ಭಾರತದ ಅಭಿವೃದ್ಧಿ ಪಯಣದಲ್ಲಿ ಭಾಗವಹಿಸಲು ಲಕ್ಷಾಂತರ ಜನರನ್ನು ಪ್ರೇರೇಪಿಸುತ್ತಿದ್ದಾರೆ. ಪ್ರತಿ ತಿಂಗಳು ವಿವಿಧ ಕ್ಷೇತ್ರದ ಸಾಧನೆಗಳು, ಸಿಹಿ – ಕಹಿ ಘಟನೆ, ಸಂತೋಷ ಮತ್ತು ಹೆಮ್ಮೆಯ ಕ್ಷಣಗಳನ್ನು ಮತ್ತು ನವ ಭಾರತಕ್ಕಾಗಿ ಸಲಹೆಗಳನ್ನು ಮೋದಿ ಈ ಕಾರ್ಯಕ್ರಮದ ಮೂಲಕ ಹಂಚಿಕೊಳ್ಳುತ್ತಿದ್ದಾರೆ.