ಪ್ರಧಾನ್ ಮಂತ್ರಿ ಉಜ್ವಲ್ ಯೋಜನೆ 2ನೇ ಕಂತಿನ ಹಣ ಇಂದು ಬಿಡುಗಡೆ
ಮಂಗಳವಾರ, 10 ಆಗಸ್ಟ್ 2021 (15:13 IST)
ನವದೆಹಲಿ:ಕೇಂದ್ರ ಸರ್ಕಾರ ಜನರ ಅಭಿವೃದ್ಧಿಯ ದೃಷ್ಟಿಯಿಂದ ಹಲವಾರು ಯೋಜನೆಗಳನ್ನು ಜಾರಿಗೆ ತಂದಿದೆ. ನಿನ್ನೆ ಅಷ್ಟೇ ಪ್ರಧಾನ್ ಮಂತ್ರಿ ಕಿಸಾನ್ ಸಮ್ಮಾನ್ ಯೋಜನೆಯ 9ನೇ ಕಂತನ್ನು ಪ್ರಧಾನಿ ಮೋದಿ, ವಿಡಿಯೋ ಕಾನ್ಫರೆನ್ಸ್ ಮೂಲಕ ಬಿಡುಗಡೆ ಮಾಡಿದ್ದರು. ಇದೀಗ ಮೋದಿ ಅವರು ಉಜ್ವಲ 2.0 (ಪ್ರಧಾನ ಮಂತ್ರಿ ಉಜ್ವಲ ಯೋಜನೆ - PMUY) ಯನ್ನು LPG ಸಿಲಿಂಡರ್ಗಳನ್ನು ಹಸ್ತಾಂತರ ಮಾಡುವ ಮೂಲಕ ಇಂದು ಯೋಜನೆಯ 2ನೆ ಹಂತಕ್ಕೆ ಚಾಲನೆ ನೀಡಲಿದ್ದಾರೆ.
ಮಧ್ಯಾಹ್ನ 12,30ಕ್ಕೆ ವಿಡಿಯೋ ಕಾನ್ಫರೆನ್ಸ್ ಮೂಲಕ ಉತ್ತರ ಪ್ರದೇಶದ ಮಹೋಬಾದಲ್ಲಿ ಈ ಕಾರ್ಯಕ್ರಮ ನಡೆಯಲಿದೆ. ಇನ್ನು ಕಾರ್ಯಕ್ರಮದಲ್ಲಿ ಪ್ರಧಾನ ಮಂತ್ರಿ ಉಜ್ವಲ ಫಲಾನುಭವಿಗಳೊಂದಿಗೆ ಸಂವಾದ ನಡೆಸಿ ನಂತರ ರಾಷ್ಟ್ರವನ್ನು ಉದ್ದೇಶಿಸಿ ಮಾತನಾಡಲಿದ್ದಾರೆ ಎಂದು ಪ್ರಧಾನಮಂತ್ರಿ ಕಚೇರಿ ಅಧಿಕೃತವಾಗಿ ತಿಳಿಸಿದೆ.
2016 ರಲ್ಲಿ ಆರಂಭವಾದ ಉಜ್ವಲ 1.0 ಯೋಜನೆಯ ಸಮಯದಲ್ಲಿ, ಬಡತನ ರೇಖೆಗಿಂತ ಕೆಳಗಿರುವ (ಬಿಪಿಎಲ್) ಕುಟುಂಬಗಳ ಐದು ಕೋಟಿ ಮಹಿಳಾ ಸದಸ್ಯರಿಗೆ ದ್ರವೀಕೃತ ಪೆಟ್ರೋಲಿಯಂ ಗ್ಯಾಸ್ (LPG ) ಸಂಪರ್ಕಗಳನ್ನು ಒದಗಿಸುವ ಗುರಿಯನ್ನು ಹೊಂದಲಾಗಿತ್ತು. ನಂತರ ಈ ಯೋಜನೆಯನ್ನು 2018 ರ ಏಪ್ರಿಲ್ನಲ್ಲಿ ವಿಸ್ತರಿಸಣೆ ಮಾಡಲಾಯಿತು. ಈ ಯೋಜನೆಯ ಅಡಿಯಲ್ಲಿ ಇನ್ನೂ ಏಳು ವರ್ಗಗಳಾದ SC/ST, PMAY, AAY, ಅತ್ಯಂತ ಹಿಂದುಳಿದ ವರ್ಗಗಳು, ಚಹಾ ತೋಟ, ಅರಣ್ಯ ನಿವಾಸಿಗಳು, ದ್ವೀಪ ಪ್ರದೇಶದ ಮಹಿಳಾ ಫಲಾನುಭವಿಗಳನ್ನು ಸೇರಿಸಲಾಯಿತು. ಅಲ್ಲದೆ, ಈ ಯೋಜನೆಯ ಗುರಿಯನ್ನು ಎಂಟು ಕೋಟಿ ಐPಉ ಸಂಪರ್ಕ ನೀಡುವುದಾಗಿತ್ತು. ಆದರೆ ಈ ಗುರಿಯನ್ನು ನಿಗದಿತ ದಿನಕ್ಕಿಂತ ಏಳು ತಿಂಗಳು ಮುಂಚಿತವಾಗಿ ಆಗಸ್ಟ್ 2019 ರಲ್ಲಿಯೇ ಈ ಯೋಜನೆ ಸಾಧಿಸಿದೆ.
ಇನ್ನು 2021-22ರ ಆರ್ಥಿಕ ವರ್ಷದ ಕೇಂದ್ರ ಬಜೆಟ್ ನಲ್ಲಿ, ಪ್ರಧಾನ ಮಂತ್ರಿ ಉಜ್ವಲ ಯೋಜನೆಯಡಿ ಹೆಚ್ಚುವರಿ ಒಂದು ಕೋಟಿ LPG ಸಂಪರ್ಕಗಳನ್ನು ಜನರಿಗೆ ನೀಡಲಾಗುವುದು ಘೋಷಿಸಲಾಯಿತು. ಈ ಒಂದು ಕೋಟಿ ಹೆಚ್ಚುವರಿ PMUY ಸಂಪರ್ಕಗಳು (ಉಜ್ವಲ 2.0 ಅಡಿಯಲ್ಲಿ) PMUY ಯ ಹಿಂದಿನ ಹಂತದಲ್ಲಿ ಅವಕಾಶ ಸಿಗದ ಕಡಿಮೆ ಆದಾಯದ ಕುಟುಂಬಗಳಿಗೆ ಠೇವಣಿ ರಹಿತ LPG ಸಂಪರ್ಕಗಳನ್ನು ಒದಗಿಸುವ ಗುರಿಯನ್ನು ಹೊಂದಿದೆ.
ಈ ಯೋಜನೆಯ ಅಡಿಯಲ್ಲಿ ಠೇವಣಿ ರಹಿತ ಎಲ್ಪಿಜಿ ಸಂಪರ್ಕದ ಜೊತೆಗೆ, ಮೊದಲ ರೀಫಿಲ್ಲಿಂಗ್ ಮತ್ತು ಹಾಟ್ಪ್ಲೇಟ್ ಅನ್ನು ಫಲಾನುಭವಿಗಳಿಗೆ ಉಚಿತವಾಗಿ ನೀಡಲಾಗುವುದು ಎಂದು ಕೇಂದ್ರ ಸರ್ಕಾರ ತಿಳಿಸಿದೆ. ಜೊತೆಗೆ, ದಾಖಲಾತಿ ಪ್ರಕ್ರಿಯೆಗೆ ಕನಿಷ್ಠ ಕಾಗದಪತ್ರದ ಅಗತ್ಯವಿರುತ್ತದೆ. ಉಜ್ವಲ 2.0 ರಲ್ಲಿ, ವಲಸಿಗರು ಪಡಿತರ ಚೀಟಿ ಅಥವಾ ವಿಳಾಸ ಪುರಾವೆ ಸಲ್ಲಿಸುವ ಅಗತ್ಯವಿಲ್ಲ. ಸ್ವಯಂ ಘೋಷಣೆ ಸಾಕು ಎಂದು ಸಚಿವಾಲಯ ತಿಳಿಸಿದೆ.
ಉಜ್ವಲ 2.0 ಯೋಜನೆಯು ದೇಶದ ಎಲ್ಲ ಜನರಿಗೆ ಎಲ್ಪಿಜಿ ಸೇವೆ ದೊರೆಯಬೇಕು ಎಂಬ ಪ್ರಧಾನಿ ಮೋದಿ ಅವರ ದೃಷ್ಟಿಕೋನವನ್ನು ಸಾಧಿಸಲು ಸಹಾಯ ಮಾಡುತ್ತದೆ. ಇನ್ನು ಈ ಕಾರ್ಯಕ್ರಮದಲ್ಲಿ ಯೂನಿಯನ್ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವ ಹರ್ದೀಪ್ ಎಸ್ ಪುರಿ ಮತ್ತು ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಕೂಡ ಭಾಗವಹಿಸಲಿದ್ದಾರೆ.