‘ಬಾಹ್ಯಾಕಾಶ ಕ್ಷೇತ್ರಕ್ಕೆ ಶಕ್ತಿ ತುಂಬುವ ಕೆಲಸವನ್ನು ಸರ್ಕಾರ ಮಾಡುತ್ತದೆ’ : ಮೋದಿ

ಸೋಮವಾರ, 11 ಅಕ್ಟೋಬರ್ 2021 (13:29 IST)
ನವದೆಹಲಿ : ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಇಂದು ಭಾರತೀಯ ಬಾಹ್ಯಾಕಾಶ ಸಂಘ (ISpA)ವನ್ನು ವರ್ಚ್ಯುವಲ್ ಆಗಿ ಉದ್ಘಾಟನೆ ಮಾಡಿದರು. ನಂತರ ಮಾತನಾಡಿದ ಅವರು, ಇನ್ನು ಮುಂದೆ ಸರ್ಕಾರ ಬಾಹ್ಯಾಕಾಶ ಕ್ಷೇತ್ರದ ನಿರ್ವಾಹಕನಾಗಿ ಕೆಲಸ ಮಾಡಲು ಸಾಧ್ಯವಿಲ್ಲ.

ಆದರೆ ಖಂಡಿತವಾಗಿಯೂ ಈ ಕ್ಷೇತ್ರಕ್ಕೆ ನಿರಂತರವಾಗಿ ಶಕ್ತಿ ತುಂಬುವ ಕೆಲಸ ಮಾಡುತ್ತದೆ ಎಂದು ಹೇಳಿದ್ದಾರೆ. ಹಾಗೇ, ಬಾಹ್ಯಾಕಾಶ ಕ್ಷೇತ್ರದಲ್ಲಿ ಖಾಸಗಿ ವಲಯಗಳ ಭಾಗವಹಿಸುವಿಕೆಯನ್ನು ಸರಳಗೊಳಿಸಲು ಸರ್ಕಾರ ಇನ್-ಸ್ಪೇಸ್ (IN-SPACe) ರಚಿಸಿದೆ. ಈ ಇನ್-ಸ್ಪೇಸ್ ಬಾಹ್ಯಾಕಾಶ ಸಂಬಂಧಿತ ಎಲ್ಲ ಕಾರ್ಯಕ್ರಮಗಳಿಗೂ  ಏಕ-ಗವಾಕ್ಷಿ ಸ್ವತಂತ್ರ ಏಜೆನ್ಸಿಯಾಗಿ ಕೆಲಸ ಮಾಡುತ್ತದೆ. ಖಾಸಗಿ ವಲಯದ ಯೋಜನೆಗಳನ್ನು ಮತ್ತಷ್ಟು ವೇಗಗೊಳಿಸುತ್ತದೆ ಎಂದು ಹೇಳಿದ್ದಾರೆ. 
ಇಂದು ಸರ್ಕಾರ ಬಾಹ್ಯಾಕಾಶ ಕ್ಷೇತ್ರಕ್ಕೆ ಸಂಬಂಧಪಟ್ಟಂತೆ ಅಧಿಕಾರವನ್ನು ಹಂಚಿಕೊಳ್ಳುತ್ತಿದೆ ಮತ್ತು ಖಾಸಗಿ ವಲಯಕ್ಕೆ ಲಾಂಚ್ ಪ್ಯಾಡ್ಗಳನ್ನು ಒದಗಿಸುತ್ತಿದೆ. ಇಸ್ರೋ ಕೂಡ ತನ್ನಲ್ಲಿರುವ ವ್ಯವಸ್ಥೆಗಳನ್ನು ಖಾಸಗಿ ವಲಯದವರು ಬಳಸಿಕೊಳ್ಳಲು ತೆರೆದಿಡುತ್ತಿದೆ ಎಂದು ಹೇಳಿದ್ದಾರೆ. ಭಾರತದಲ್ಲಿ ಬಾಹ್ಯಾಕಾಶ ಕ್ಷೇತ್ರ ರೈತರಿಗೆ, ಮೀನುಗಾರರಿಗೆ ತುಂಬ ಅನುಕೂಲ ಮಾಡಿಕೊಡುತ್ತಿದೆ. ಯಾಕೆಂದರೆ ಹವಾಮಾನ ಮುನ್ಸೂಚನೆ ನೀಡುತ್ತದೆ. ಪ್ರಾಕೃತಿಕ ವಿಕೋಪಗಳ ಮುನ್ಸೂಚನೆಯಲ್ಲೂ ಪ್ರಮುಖ ಪಾತ್ರ ವಹಿಸಿದೆ ಎಂದು ನರೇಂದ್ರ ಮೋದಿ ತಿಳಿಸಿದ್ದಾರೆ.
ನಮ್ಮ ನೋಟ, ಗುರಿ ಆತ್ಮ ನಿರ್ಭರ ಭಾರತದತ್ತ ನೆಟ್ಟಿದೆ. ಹೀಗಾಗಿ ದೇಶದಲ್ಲೀಗ ಕ್ರಿಯಾತ್ಮಕ ಸುಧಾರಣೆಗಳು ಆಗುತ್ತಿವೆ. ಆತ್ಮನಿರ್ಭರತೆ ಕೇವಲ ನಮ್ಮ ದೃಷ್ಟಿಯಲ್ಲ, ಭಾರತವನ್ನು ಜಾಗತಿಕ ಉತ್ಪಾದನೆ ಮತ್ತು ಜಾಗತಿಕ ನಾವೀನ್ಯತೆಯ ಕೇಂದ್ರವನ್ನಾಗಿ ಮಾಡುವ ಉತ್ತಮ ಚಿಂತನೆಯಾಗಿದೆ. ಹಾಗೇ, ಸಮಗ್ರ ಯೋಜಿತ ಆರ್ಥಿಕ ಕಾರ್ಯತಂತ್ರವಾಗಿದೆ ಎಂದು ಹೇಳಿದ ನರೇಂದ್ರ ಮೋದಿ, ಬಾಹ್ಯಾಕಾಶ ಕ್ಷೇತ್ರದಲ್ಲಿ ಅತ್ಯಂತ ಹೆಚ್ಚಿನ ಸಾಮರ್ಥ್ಯ ಹೊಂದಿರುವ ಕೆಲವೇಕೆಲವು ರಾಷ್ಟ್ರಗಳಲ್ಲಿ ಭಾರತವೂ ಒಂದು. ನಾವು ಬಾಹ್ಯಾಕಾಶ ತಂತ್ರಜ್ಞಾನದ ಉಪಗ್ರಹಗಳು, ಉಡಾವಣಾ ವಾಹಕಗಳ ಅಪ್ಲಿಕೇಶನ್ಗಳು, ಅಂತರ್ಗ್ರಹ ಯೋಜನೆಗಳು ಸೇರಿ ಬಹುತೇಕ ಅಂಶಗಳನ್ನು ಒಳಗೊಂಡಿದ್ದೇವೆ ಎಂದು ತಿಳಿಸಿದ್ದಾರೆ.
ಭಾರತೀಯ ಬಾಹ್ಯಾಕಾಶ ಸಂಘವೆಂಬುದು, ಬಾಹ್ಯಾಕಾಶ ಮತ್ತು ಉಪಗ್ರಹ ಕಂಪನಿಗಳ ಒಂದು ಪ್ರಧಾನ ಉದ್ದಿಮೆಯಾಗಲಿದೆ. ಭಾರತೀಯ ಬಾಹ್ಯಾಕಾಶ ಕ್ಷೇತ್ರಕ್ಕೆ ಸಾಮೂಹಿಕ ಶಕ್ತಿಯಾಗಲು ಬಯಸುವ ಕಂಪನಿಗಳನ್ನು ಇದು ಒಳ್ಳಗೊಳ್ಳಲಿದೆ ಎಂದು ಪ್ರಧಾನಮಂತ್ರಿ ಕಚೇರಿ ಹೇಳಿಕೆ ಬಿಡುಗಡೆ ಮಾಡಿದೆ. ಇದು ಭಾರತೀಯ ಬಾಹ್ಯಾಕಾಶ ಕ್ಷೇತ್ರದಲ್ಲಿ ಸರ್ಕಾರ ಮತ್ತು ಅದರ ಏಜೆನ್ಸಿಗಳನ್ನು ಸೇರಿ, ಎಲ್ಲ ಪಾಲುದಾರರನ್ನೂ ಒಳಗೊಳ್ಳುತ್ತದೆ ಮತ್ತು ರೂಪಿತ ನೀತಿಗಳ ಪರ ವಕಾಲತ್ತು ಕೆಲಸ ಕೈಗೊಳ್ಳುತ್ತದೆ ಎಂದು ತಿಳಿಸಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ