ನವದೆಹಲಿ: ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರು ಬಂಧನಕ್ಕೊಳಗಾದ ನಂತರ ತಮ್ಮ ತೂಕವನ್ನು ಕಳೆದುಕೊಂಡಿದ್ದಾರೆ ಎಂಬ ಆಮ್ ಆದ್ಮಿ ಪಕ್ಷದ (ಎಎಪಿ) ಆರೋಪವನ್ನು ತಿಹಾರ್ ಜೈಲು ಅಧಿಕಾರಿಗಳು ಬುಧವಾರ ತಳ್ಳಿಹಾಕಿದರು.
ದೆಹಲಿ ಸಚಿವ ಅತಿಶಿ ಅವರು ಆಮ್ ಆದ್ಮಿ ಪಕ್ಷದ ಮುಖ್ಯಸ್ಥರ ತೂಕದಲ್ಲಿ ವ್ಯತ್ಯಾಸವಾಗಿದೆ. ಕೇಜ್ರಿವಾಲ್ ಬಂಧನಕ್ಕೆ ಮೊದಲು 69.5 ಕೆಜಿ ತೂಕವಿತ್ತು ಮತ್ತು ಪ್ರಸ್ತುತ ದಾಖಲೆಗಳ ಪ್ರಕಾರ, ಅವರು 12 ದಿನಗಳಲ್ಲಿ 4.5 ಕೆಜಿ ಕಳೆದುಕೊಂಡಿದ್ದಾರೆ ಎಂದು ಆರೋಪಿಸಿದ್ದರು.
ಕೂಡಲೇ ಈ ಬಗ್ಗೆ ಪ್ರತಿಕ್ರಿಯಿಸಿದ ತಿಹಾರ್ ಜೈಲು ಅಧಿಕಾರಿಗಳು ಕೇಜ್ರಿವಾಲ್ ಅವರನ್ನು ಕಸ್ಟಡಿಗೆ ತೆಗೆದುಕೊಂಡ ನಂತರ ತೂಕದಲ್ಲಿ ಏನು ವ್ಯತ್ಯಾಸವಾಗಿಲ್ಲ. ನ್ಯಾಯಾಲಯದ ಆದೇಶದ ಪ್ರಕಾರ ಅವರಿಗೆ ಮನೆ ಊಟವನ್ನೇ ನೀಡುತ್ತಿದ್ದು ಆರೋಗ್ಯ ಸ್ಥಿರವಾಗಿದೆ ಎಂದು ಹೇಳಿದರು.
ಈ ಬಗ್ಗೆ ಎಕ್ಸ್‌ನಲ್ಲಿ ಬರೆದುಕೊಂಡಿರುವ ಸಚಿವ ಅಶಿತಿ ಅವರು, "ಅರವಿಂದ್ ಕೇಜ್ರಿವಾಲ್ ಅವರು ತೀವ್ರ ಮಧುಮೇಹದಿಂದ ಬಳಲುತ್ತಿದ್ದಾರೆ. ಆರೋಗ್ಯ ಸಮಸ್ಯೆಗಳ ನಡುವೆಯೂ ಅವರು ದೇಶದ ಸೇವೆಗಾಗಿ ದಿನದ 24 ಗಂಟೆಗಳ ಕಾಲ ಕೆಲಸ ಮಾಡುತ್ತಿದ್ದರು. ಇದೀಗ ಅವರ ತೂಕದಲ್ಲಿ ಭಾರೀ ವ್ಯತ್ಯಾಸ ಕಂಡಿದೆ. ಇದು ತುಂಬಾ ಕಳವಳಕಾರಿಯಾಗಿದೆ" ಎಂದು ಬರೆದುಕೊಂಡಿದ್ದರು.