ನವದೆಹಲಿ: ನರೇಂದ್ರ ಮೋದಿ ನೇತೃತ್ವದಲ್ಲಿ ದೇಶದಲ್ಲಿ ಎನ್ ಡಿಎ ಸರ್ಕಾರ ನಾಳೆ ಅಧಿಕಾರಕ್ಕೇರಲಿದೆ. ಮೋದಿ ಮೂರನೆಯ ಬಾರಿಗೆ ಪ್ರಧಾನಿಯಾಗಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ಈ ನಡುವೆ ಮೋದಿ ಹೊಸ ಸಂಪುಟದಲ್ಲಿ ಈ ಒಂದು ಖಾತೆಗಾಗಿ ಭಾರೀ ಬೇಡಿಕೆಯಿದೆ.
ಕಳೆದ ಬಾರಿ ಬಿಜೆಪಿಯೇ ಬಹುಮತ ಸಾಧಿಸಿತ್ತು. ಹೀಗಾಗಿ ಸಚಿವ ಸ್ಥಾನ ಹಂಚಿಕೆ ವಿಚಾರದಲ್ಲಿ ಯಾವುದೇ ಗೊಂದಲಗಳಿರಲಿಲ್ಲ. ಮಿತ್ರ ಪಕ್ಷಗಳೂ ಗಪ್ ಚುಪ್ ಆಗಿದ್ದವು. ಆದರೆ ಈ ಬಾರಿ ಬಿಜೆಪಿಗೆ ಸರ್ಕಾರ ರಚಿಸಲು ಮಿತ್ರ ಪಕ್ಷಗಳ ನೆರವು ಬೇಕಾಗಿದೆ. ಹೀಗಾಗಿ ಮೋದಿ ಹೊಸ ಸರ್ಕಾರದಲ್ಲಿ ಸಚಿವ ಸ್ಥಾನಕ್ಕಾಗಿ ಮಿತ್ರ ಪಕ್ಷಗಳಿಂದಲೂ ಬೇಡಿಕೆ ಬಂದಿದೆ.
ಬಿಜೆಪಿಗೆ ಸರ್ಕಾರ ರಚಿಸಲು ನಿತೀಶ್ ಕುಮಾರ್ ನೇತೃತ್ವದ ಜೆಡಿಯು ಮತ್ತು ಚಂದ್ರಬಾಬು ನಾಯ್ಡು ನೇತೃತ್ವದ ಟಿಡಿಪಿ ನೆರವು ತೀರಾ ಅಗತ್ಯ. ಹೀಗಾಗಿ ಈ ಎರಡೂ ಪಕ್ಷಗಳಿಗೆ ಸರ್ಕಾರದಲ್ಲಿ ಬಂಪರ್ ಸ್ಥಾನ ಸಿಗಲಿದೆ. ಈ ನಡುವೆ ರೈಲ್ವೇ ಖಾತೆಗಾಗಿ ಮಿತ್ರ ಪಕ್ಷಗಳಿಂದ ಭಾರೀ ಬೇಡಿಕೆ ಕೇಳಿಬಂದಿದೆ.
ಈ ಮೊದಲು ನಿತೀಶ್ ಕುಮಾರ್ ರೈಲ್ವೇ ಖಾತೆ ನಿಭಾಯಿಸಿದ ಅನುಭವಿ. ಹೀಗಾಗಿ ಜೆಡಿಯು ರೈಲ್ವೇ ಖಾತೆಗಾಗಿ ಬೇಡಿಕೆಯಿಟ್ಟಿದೆ. ಇನ್ನೊಂದೆಡೆ ಟಿಡಿಪಿ ಕೂಡಾ ಇದೇ ಖಾತೆಗಾಗಿ ಪಟ್ಟು ಹಿಡಿದದೆ. ಇನ್ನು ಈ ಬಾರಿ ಮೋದಿ ಸರ್ಕಾರ ಕೆಲವು ಹೊಸ ಮುಖಗಳಿಗೆ ಮಣೆ ಹಾಕಲಿದೆ. ಆದರೆ ಅಂತಿಮವಾಗಿ ಬಹುಬೇಡಿಕೆಯಲ್ಲಿರುವ ರೈಲ್ವೇ ಖಾತೆ ಯಾರ ಪಾಲಿಗೆ ಒಲಿಯಲಿದೆ ನೋಡಬೇಕಿದೆ.