ಪ್ರಯಾಗ್ ರಾಜ್ ಗೆ ಈಗಲೂ ನಿತ್ಯವೂ ಸಾವಿರಾರು ಜನರ ಭೇಟಿ: ಈ ದಿನದವರೆಗೂ ವಿಶೇಷವೇ

Krishnaveni K

ಮಂಗಳವಾರ, 25 ಮಾರ್ಚ್ 2025 (11:12 IST)
ಪ್ರಯಾಗ್ ರಾಜ್: ಇತ್ತೀಚೆಗೆ ಪ್ರಯಾಗ್ ರಾಜ್ ನಲ್ಲಿ ಕುಂಭಮೇಳ ಮುಕ್ತಾಯಗೊಂಡಿರಬಹುದು. ಆದರೆ ಈಗಲೂ ಪ್ರಯಾಗ್ ರಾಜ್ ತ್ರಿವೇಣಿ ಸಂಗಮಕ್ಕೆ ನಿತ್ಯವೂ ಸಾವಿರಾರು ಮಂದಿ ಭೇಟಿ ನೀಡುತ್ತಲೇ ಇರುತ್ತಾರೆ.

ಪ್ರಯಾಗ್ ರಾಜ್ ನಲ್ಲಿ ನಡೆದಿದ್ದ ಕುಂಭಮೇಳದಲ್ಲಿ 40 ಕೋಟಿಗೂ ಅಧಿಕ ಮಂದಿ ಪಾಲ್ಗೊಂಡು ದಾಖಲೆಯಾಗಿತ್ತು. ಸರ್ಕಾರಕ್ಕೆ ಸ್ಥಳೀಯ ಉದ್ದಿಮೆದಾರರಿಗೆ, ಟ್ರಾವೆಲ್ ಏಜೆನ್ಸಿಗಳಿಗೆ ಕೋಟ್ಯಾಂತರ ರೂಪಾಯಿ ಆದಾಯ ತಂದುಕೊಟ್ಟಿತ್ತು. ಶಿವರಾತ್ರಿ ದಿನ ಕುಂಭಮೇಳ ಮುಕ್ತಾಯಗೊಂಡಿತ್ತು.

ಹಾಗಿದ್ದರೂ ಈಗಲೂ ಪ್ರತಿನಿತ್ಯ ಕುಂಭಮೇಳ ನಡೆದ ಪ್ರಯಾಗ್ ರಾಜ್ ಗೆ ಪ್ರತಿನಿತ್ಯ ಹೆಚ್ಚು ಕಡಿಮೆ 20 ರಿಂದ 30 ಸಾವಿರ ಮಂದಿ ಭಕ್ತರು ಭೇಟಿ ಕೊಡುತ್ತಲೇ ಇರುತ್ತಾರೆ. ಸಾವಿರಾರು ಮಂದಿ ಇಂದೂ ತ್ರಿವೇಣಿ ಸಂಗಮದಲ್ಲಿ ಬಂದು ಪುಣ್ಯಸ್ನಾನ ಮಾಡಿ ಹೋಗುತ್ತಾರೆ.

ಕುಂಭಮೇಳ ಮುಕ್ತಾಯವಾಗಿದ್ದರೂ ಈಗಲೂ ಅಲ್ಲಿ ಪುಣ್ಯಸ್ನಾನ ವಿಶೇಷವಾಗಿದೆ. ಈ ಮಾರ್ಚ್ 30 ರವರೆಗೂ ಇಲ್ಲಿ ತ್ರಿವೇಣಿ ಸಂಗಮದಲ್ಲಿ ಸ್ನಾನ ಮಾಡುವುದರಿಂದ ಪುಣ್ಯ ಪ್ರಾಪ್ತಿಯಾಗುವ ವಿಶೇಷ ಶಕ್ತಿಯಿದೆ ಎಂದು ನಂಬಲಾಗಿದೆ. ಹೀಗಾಗಿ ಭಕ್ತರು ಈಗಲೂ ಇಲ್ಲಿಗೆ ಸಾಕಷ್ಟು ಸಂಖ್ಯೆಯಲ್ಲಿ ಇಲ್ಲಿಗೆ ಬಂದು ಪುಣ್ಯಸ್ನಾನ ಮಾಡುತ್ತಿದ್ದಾರೆ.

ಕುಂಭಮೇಳಕ್ಕೆ ಮಾಡಲಾಗಿದ್ದ ಎಲ್ಲಾ ವ್ಯವಸ್ಥೆಗಳನ್ನೂ ಈಗಲೂ ಮುಂದುವರಿಸಲಾಗಿದೆ. ಸ್ನಾನ ಘಟ್ಟದಲ್ಲಿ ಸ್ನಾನ ಮಾಡಲು, ಗಂಗಾ ನದಿಯಲ್ಲಿ ಬೋಟಿಂಗ್ ವ್ಯವಸ್ಥೆಗಳು ಎಲ್ಲವೂ ಮೊದಲಿನಂತೇ ಇದೆ. ಮೊದಲಿನಂತೆ ಈಗ ಕಿ.ಮೀಗಟ್ಟಲೆ ನಡೆಯಬೇಕಾಗಿಲ್ಲ. ಪ್ರಯಾಗ್ ರಾಜ್ ತ್ರಿವೇಣಿ ಸಂಗಮದವರೆಗೂ ವಾಹನ ವ್ಯವಸ್ಥೆಯಿದೆ. ಹೀಗಾಗಿ ಈಗ ಸುಲಭವಾಗಿ ಕುಂಭಮೇಳ ನಡೆದ ಜಾಗ ತಲುಪಬಹುದು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ