ಸ್ವಂತ ಮನೆಯೇ ಇಲ್ಲ ಎನ್ನುವ ಸಿದ್ದರಾಮಯ್ಯಗೆ ದೇಶದ ಶ್ರೀಮಂತ ಮುಖ್ಯಮಂತ್ರಿಗಳ ಪಟ್ಟಿಯಲ್ಲಿ ಎಷ್ಟನೇ ಸ್ಥಾನ ನೋಡಿ

Krishnaveni K

ಮಂಗಳವಾರ, 31 ಡಿಸೆಂಬರ್ 2024 (10:25 IST)
ಬೆಂಗಳೂರು: ನನಗೆ ಸ್ವಂತ ಮನೆಯೇ ಇಲ್ಲ ಎನ್ನುವ ಮುಖ್ಯಮಂತ್ರಿ ಸಿದ್ದರಾಮಯ್ಯಗೆ ದೇಶದ ಶ್ರೀಮಂತ ಮುಖ್ಯಮಂತ್ರಿಗಳ ಪಟ್ಟಿಯಲ್ಲಿ ಎಷ್ಟನೇ ಸ್ಥಾನ ಎಂಬ ವಿಚಾರ ಈಗ ಬಹಿರಂಗವಾಗಿದೆ.

ಅಸೋಸಿಯೇಟ್ ಫಾರ್ ಡೆಮಾಕ್ರಾಟಿಕ್ ರಿಫಾರ್ಮ್ಸ್ (ಎಡಿಆರ್) ವರದಿಯೊಂದನ್ನು ಬಿಡುಗಡೆ ಮಾಡಿದೆ. ಆ ಪ್ರಕಾರ ಆಂಧ್ರಪ್ರದೇಶದ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ದೇಶದ ನಂ.1 ಶ್ರೀಮಂತರಾಗಿದ್ದಾರೆ. ತಮ್ಮದೇ ಉದ್ಯಮವನ್ನೂ ಹೊಂದಿರುವ ಅವರ ಆಸ್ತಿ ಮೌಲ್ಯ ಬರೋಬ್ಬರಿ 931 ಕೋಟಿ ರೂ.ಗಳಾಗಿವೆ.

ಕರ್ನಾಟಕದ ಸಿಎಂ ಸಿದ್ದರಾಮಯ್ಯಗೆ ಶ್ರೀಮಂತ ಮುಖ್ಯಮಂತ್ರಿಗಳ ಪಟ್ಟಿಯಲ್ಲಿ ಮೂರನೇ ಸ್ಥಾನವಿದೆ. ಮುಡಾ ಹಗರಣ ಬಯಲಿಗೆ ಬಂದಾಗ ವಿಪಕ್ಷಗಳ ವಿರುದ್ಧ ವಾಗ್ದಾಳಿ ನಡೆಸಿದ್ದ ಸಿಎಂ ಸಿದ್ದರಾಮಯ್ಯ ನನ್ನ ಬಳಿ ಸ್ವಂತ ಮನೆಯೂ ಇಲ್ಲ ಎಂದಿದ್ದರು. ಆದರೆ ಅವರ ಆಸ್ತಿ ಮೌಲ್ಯ 51 ಕೋಟಿ ರೂ.ಗಳಾಗಿವೆ. ಎಡಿಆರ್ ವರದಿ ಪ್ರಕಾರ ಅರುಣಾಚಲ ಪ್ರದೇಶದ ಮುಖ್ಯಮಂತ್ರಿ ಪೆಮಾ ಖಂಡು ಆಸ್ತಿ ಮೌಲ್ಯ 332 ಕೋಟಿ ರೂ.ಗಳಾಗಿದ್ದು ಎರಡನೇ ಸ್ಥಾನದಲ್ಲಿದ್ದಾರೆ.

ಮಮತಾ ಬ್ಯಾನರ್ಜಿಗೆ ಕೊನೆಯ ಸ್ಥಾನ
ಶ್ರೀಮಂತ ಮುಖ್ಯಮಂತ್ರಿಗಳ ಪಟ್ಟಿಯಲ್ಲಿ ಪಶ್ಚಿಮ ಬಂಗಾಲದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿಗೆ ಕೊನೆಯ ಸ್ಥಾನವಿದೆ. ಅವರ ಆಸ್ತಿ ಮೌಲ್ಯ ಕೇವಲ 15 ಲಕ್ಷ ರೂ. ಜಮ್ಮು ಕಾಶ್ಮೀರ ಮುಖ್ಯಮಂತ್ರಿ ಒಮರ್ ಅಬ್ದುಲ್ಲಾ 55 ಲಕ್ಷ ರೂ., ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ 1.18 ಕೋಟಿ ರೂ., ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ 13.27 ಕೋಟಿ ರೂ., ಬಿಹಾರ ಸಿಎಂ ನಿತೀಶ್ ಕುಮಾರ್ ಯಾದವ್ 3 ಕೋಟಿ, ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್, ಪಂಜಾಬ್ ಸಿಎಂ ಭಗವಂತ್ ಆಸ್ತಿ ಮೌಲ್ಯ ತಲಾ 1 ಕೋಟಿ ರೂ., ತಮಿಳುನಾಡು ಸಿಎಂ ಎಂಕೆ ಸ್ಟಾಲಿನ್ 8 ಕೋಟಿ ರೂ., ಗೋವಾ ಸಿಎಂ ಪ್ರಮೋದ್ ಸಾವಂತ್ 9 ಕೋಟಿ, ಮೇಘಾಲಯ ಸಿಎಂ ಕಾನ್ರಾಡ್ ಸಂಗ್ಮಾ 15 ಕೋಟಿ, ತ್ರಿಪುರಾ ಸಿಎಂ ಮಾಣಿಕ್ ಸಹಾ 13 ಕೋಟಿ ರೂ.ಗಳಷ್ಟಿದೆ ಎಂದು ತಿಳಿದುಬಂದಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ