ನವದೆಹಲಿ: ವಕ್ಫ್ ಮಂಡಳಿಯಲ್ಲಿ ಮುಸ್ಲಿಮೇತರರಿಗೆ ಅವಕಾಶ ಕೊಡುವಂತೆ ಹಿಂದೂ ಟ್ರಸ್ಟ್ ಗಳಲ್ಲಿ ಮುಸ್ಲಿಮರಿಗೆ ಅವಕಾಶ ಕೊಡ್ತೀರಾ? ಹೀಗಂತ ಕೇಂದ್ರ ಸರ್ಕಾರಕ್ಕೆ ಸುಪ್ರೀಂಕೋರ್ಟ್ ಕಠಿಣ ಪ್ರಶ್ನೆ ಮಾಡಿದೆ.
ಇಂದು ವಕ್ಫ್ ತಿದ್ದುಪಡಿ ಬಿಲ್ ಬಗ್ಗೆ ಸಲ್ಲಿಕೆಯಾದ ಆಕ್ಷೇಪ ಅರ್ಜಿಯ ವಿಚಾರಣೆ ನಡೆಸಿದ ಸುಪ್ರೀಂಕೋರ್ಟ್ ನ್ಯಾಯಪೀಠ ಕೇಂದ್ರ ಸರ್ಕಾರಕ್ಕೆ ಕೆಲವು ಕಠಿಣ ಪ್ರಶ್ನೆಗಳನ್ನು ಮುಂದಿಟ್ಟಿದೆ. ವಿಶೇಷವಾಗಿ ಬಳಕೆದಾರರಿಂದ ವಕ್ಫ್ ಆಸ್ತಿಗಳ ನಿಬಂಧನೆ ಬಗ್ಗೆ ಹಲವು ಪ್ರಶ್ನೆ ಮಾಡಿದೆ.
ಸುಪ್ರೀಂಕೋರ್ಟ್ ಮುಖ್ಯ ನಾಯಮೂರ್ತಿ ಸಂಜೀವ್ ಖನ್ನಾ, ಜಸ್ಟಿಸ್ ಸಂಜಯ್ ಕುಮಾರ್ ಮತ್ತು ಜಸ್ಟಿಸ್ ಕೆವಿ ವಿಶ್ವನಾಥನ್ ಅವರನ್ನೊಳಗೊಂಡ ಪೀಠ ವಕ್ಫ್ ಕುರಿತು ಸಲ್ಲಿಕೆಯಾದ ಅರ್ಜಿ ವಿಚಾರಣೆ ನಡೆಸಿತು. ಈ ವೇಳೆ ವಕ್ಫ್ ತಿದ್ದುಪಡಿ ಬಿಲ್ ವಿರೋಧಿಸಿ ಪಶ್ಚಿಮ ಬಂಗಾಲದಲ್ಲಿ ನಡೆದ ಪ್ರತಿಭಟನೆ ಹಿಂಸಾರೂಪಕ್ಕೆ ತಾಳಿರುವುದರ ಬಗ್ಗೆ ತೀವ್ರ ಕಳವಳ ವ್ಯಕ್ತಪಡಿಸಿದೆ.
ಇದುವರೆಗೆ ಮುಸ್ಲಿಮರು ಮಾತ್ರ ವಕ್ಫ್ ಮಂಡಳಿಯಲ್ಲಿದ್ದರು. ಹೊಸ ಕಾಯಿದೆ ಪ್ರಕಾರ ಹಿಂದೂಯೇತರರೂ ಇರಬಹುದು ಎಂದಿದೆ ಎಂದು ಅರ್ಜಿದಾರರಲ್ಲಿ ಒಬ್ಬರಾಗಿರುವ ಕಪಿಲ್ ಸಿಬಲ್ ವಾದಿಸಿದ್ದಾರೆ. ಇದಕ್ಕೆ ಪ್ರತಿಯಾಗಿ ನ್ಯಾಯಪೀಠ ಕೇಂದ್ರ ಸರ್ಕಾರಕ್ಕೆ ಮೇಲಿನಂತೆ ಪ್ರಶ್ನೆ ಮಾಡಿದೆ. ಇನ್ನು, ವಕ್ಫ್ ತಿದ್ದುಪಡಿ ಕಾಯಿದೆಯಲ್ಲಿರುವ ಕೆಲವು ತೀವ್ರ ಚರ್ಚಿತ ಅಂಶಗಳಿಗೆ ಸದ್ಯಕ್ಕೆ ಮಧ್ಯಂತರ ತಡೆ ನೀಡುವುದಾಗಿಯೂ ಕೋರ್ಟ್ ಸುಳಿವು ನೀಡಿದೆ.