ಆತಂಕದ ಸ್ಥಿತಿಯಲ್ಲಿ ಬುದ್ಧಿಜೀವಿಗಳ ಪಾತ್ರ ಮಹತ್ತರ

ಶುಕ್ರವಾರ, 28 ನವೆಂಬರ್ 2008 (18:59 IST)
ಶಿವಾನಿ

ಇಂದಿನ ನಮ್ಮ ಸಾಮಾಜಿಕ, ರಾಜಕೀಯ ಪರಿಸ್ಥಿತಿಯಲ್ಲಿ ದ್ವೇಷ, ಅಸಹನೆ, ಭೀತಿ, ಆತಂಕ ಮಡುಗಟ್ಟಿದೆ. ಇವನ್ನೆಲ್ಲಾ ಗಮನಿಸಿದರೆ, ಬುದ್ಧಿಜೀವಿಗಳು, ಸಾಹಿತಿಗಳ ಪಾತ್ರ ಎಷ್ಟು ಗುರುತರವಾದುದು ಎಂಬುದು ಮನವರಿಕೆಯಾಗುತ್ತದೆ, ಇಂಥ ವಿಷಮ ಪರಿಸ್ಥಿತಿಯಲ್ಲಿ ಜನರ ನಡುವಿನ ದ್ವೇಷ ಮರೆಯಾಗಿ ಹೃದಯಗಳನ್ನು ಹತ್ತಿರಗೊಳಿಸುವ ಕಾರ್ಯ ಸಾಹಿತಿಗಳಿಂದಾಗಬೇಕಿದೆ ಎಂದು ಕನ್ನಡದ ಮೇರು ಕವಿ, ನಾಡೋಜ ಡಾ. ಕೆ.ಎಸ್. ನಿಸಾರ್ ಅಹಮ್ಮದ್ ಹೇಳಿದ್ದಾರೆ.
WD
ಶುಕ್ರವಾರ ದಕ್ಷಿಣ ಕನ್ನಡ ಜಿಲ್ಲೆಯ ಮೂಡುಬಿದಿರೆಯ ವಿದ್ಯಾಗಿರಿಯಲ್ಲಿ ಮೂರು ದಿನಗಳ ಕಾಲ ನಡೆಯುವ ಐದನೇ ವರ್ಷದ "ಆಳ್ವಾಸ್ ನುಡಿಸಿರಿ' ಕನ್ನಡ ನಾಡು ನುಡಿಯ ರಾಷ್ಟ್ರೀಯ ಸಮ್ಮೇಳನವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ವಿಘಟಿತಗೊಳ್ಳುತ್ತಿರುವ ಸಾಮಾಜಿಕ ಸಾಮರಸ್ಯದ ಕಟ್ಟಡವನ್ನು ದುರಸ್ತಿಗೊಳಿಸುವ ಕೆಲಸ ಅತೀಶೀಘ್ರದಲ್ಲೇ ನಡೆಯಬೇಕಾಗಿದೆ ಎಂದು ಒತ್ತಿ ಹೇಳಿದ ಅವರು, ರಾಜಕೀಯ ನಿರ್ಬಂಧವಿಲ್ಲದೆ, ಪ್ರಭುತ್ವದ ಹಂಗಿಲ್ಲದೆ ಮುಕ್ತ ವಾತಾವರಣದಲ್ಲಿ ನಡೆಯುತ್ತಿರುವ ಆಳ್ವಾಸ್ ನುಡಿಸಿರಿಯಂಥ ಉತ್ಸವದ ಮೂಲಕ ಈ ಗುರುತರ ಕಾರ್ಯ ಮಾಡಲು ಸಾದ್ಯ ಎಂದರು. ಅಗ್ಗದ ಮೋಜಿನ ಮೇಜವಾನಿಯ ಹಿಂದೆ ಹೊರಟಿರುವ ಯುವ ಜನಾಂಗವನ್ನು ಹಿಡಿದು ನಿಲ್ಲಿಸುವ ಕೆಲಸ ಆಗಬೇಕಾಗಿದೆ. ಜಾಗತೀಕರಣ, ಪರಭಾಷಾ ವ್ಯಾಮೋಹ, ಕೆಲವು ಮಾಧ್ಯಮಗಳ ಪ್ರಚೋದನಕಾರಿ ಪ್ರೇರಣೆಯಿಂದ ಯುವಕರನ್ನು ಬಚಾವು ಮಾಡುವ ಕೆಲಸ ಇಲ್ಲಿ ನಡೆಯುತ್ತಿದೆ ಎಂದರು.

ತಂತ್ರಜ್ಞಾನವನ್ನು ನೆಚ್ಚಿಕೊಂಡು ಹೋಗಬೇಕಾದ ಆಧುನಿಕ ಸ್ಥಿತಿಯಲ್ಲಿ ನಾವಿದ್ದೇವೆ. ಟಿವಿ, ಕಂಪ್ಯೂಟರ್, ಇಂಟರ್ನೆಟ್ ಮುಂತಾದ ವೈಜ್ಞಾನಿಕ ಸಲಕರಣೆಗಳ ಮೇರೆ ಮೀರಿದ ಮೆರೆತಗಳಿಂದ ಅಪಾಯ ಆದೀತು ಎಂಬ ಭಾವನೆಯ ಜತೆಗೆ, ಕನ್ನಡ ಭಾಷೆಗೆ ಹೊಸ ಶಕ್ತಿ ಬರಬಹುದು ಎಂದು ತೋರುತ್ತದೆ. ಜಾಗತೀಕರಣ, ಉದಾರೀಕರಣದಿಂದ ಸ್ಥಳೀಯ ಭಾಷೆ, ಸಂಸ್ಕೃತಿ ನುಚ್ಚುನೂರಾಗುತ್ತದೆ ಎಂದು ಹಪಹಪಿಸುವುದನ್ನು ಬಿಟ್ಟು, ಈ ಬದಲಾವಣೆಯ ಬಿರುಗಾಳಿಗೆ ಸಿಕ್ಕಿ ನಮ್ಮತನವೆಂಬ ದೀಪ ಆರದಂತೆ ಸ್ವಯಂ ರಕ್ಷಣೆ ಮಾಡಿಕೊಳ್ಳಬೇಕು. ಜಾಢ್ಯ ಬಿಟ್ಟು ಮುನ್ನಡೆಯೋಣ. ಕನ್ನಡ ಭಾಷೆಯನ್ನು ಬಿಟ್ಟು ಆಂಗ್ಲ ಭಾಷಾ ವ್ಯಾಮೋಹ ಅಂಟಿಸಿಕೊಳ್ಳುವ ದರಿದ್ರ ಚಾಳಿ ತೊರೆಯೋಣ. ಹುದ್ದೆ- ಮುದ್ದೆ- ನಿದ್ದೆ ಈ ಮೂರಕ್ಕೆ ಮಾತ್ರ ಅಂಟಿಕೊಳ್ಳುವ ಚಾಳಿಯನ್ನು ತ್ಯಜಿಸೋಣ ಎಂದು ನಿಸಾರ್ ಅಹಮ್ಮದ್ ಹೇಳಿದರು.

ನಮ್ಮ ಊರಿನ ಹೆಸರುಗಳು ನಮ್ಮ ಸಂಸ್ಕೃತಿ, ನಮ್ಮ ಭಾಷೆ, ನಮ್ಮತನದ ದ್ಯೋತಕ. ನಗರೀಕರಣ ಮಾಡುವ ಭರದಲ್ಲಿ ಏಕಮುಖಿ ಸಂಸ್ಕೃತಿಗೊಳಿಸುವ ಕೆಲಸ ನಾಚಿಕೆಗೇಡು. ಈ ಹೆಸರುಗಳನ್ನು ಬದಲಾವಣೆ ಮಾಡುವುದು ನಮ್ಮ ಸೊಗಡನ್ನು ಕೊಂದಂತೆ ಎಂದು ನಿಸಾರ್ ವಿಷಾದ ವ್ಯಕ್ತಪಡಿಸಿದರು.

ಸಮ್ಮೇಳನದ ಅಧ್ಯಕ್ಷತೆಯನ್ನು ನಾಡೋಜ ಚೆನ್ನವೀರ ಕಣವಿ ವಹಿಸಿದ್ದರು. ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಡಾ. ನಲ್ಲೂರು ಪ್ರಸಾದ್, ಮೂಡುಬಿದಿರೆ ಶಾಸಕ ಅಭಯಚಂದ್ರ ಜೈನ್, ಮಾಜಿ ಸಚಿವ ಕೆ. ಅಮರನಾಥ ಶೆಟ್ಟಿ ಮುಖ್ಯ ಅತಿಥಿಗಳಾಗಿದ್ದರು. ಸಮ್ಮೇಳನದ ರೂವಾರಿ ಡಾ.ಎಂ.ಮೋಹನ ಆಳ್ವಾ ಪ್ರಾಸ್ತಾವಿಕ ಮಾತನಾಡಿದರು. ಆಳ್ವಾರ ತಂದೆ ಅನಂದ ಆಳ್ವಾ ಉಪಸ್ಥಿತರಿದ್ದರು.

ಈ ಸಂದರ್ಭದಲ್ಲಿ ಸಮ್ಮೇಳನಾಧ್ಯಕ್ಷರನ್ನು ಸನ್ಮಾನಿಸಲಾಯಿತು. ಇದಕ್ಕೂ ಮೊದಲು ಸಮ್ಮೇಳನಾಧ್ಯಕ್ಷರನ್ನು ಪಲ್ಲಕ್ಕಿಯಲ್ಲಿ ಕೂರಿಸಿ ಭವ್ಯ ಮೆರವಣಿಗೆಯಲ್ಲಿ ವೇದಿಕೆಗೆ ಕರೆತರಲಾಯಿತು. ಮತ್ತೊಂದು ಪಲ್ಲಕ್ಕಿಯಲ್ಲಿ ಕನ್ನಡ ಗ್ರಂಥಗಳನ್ನಿಟ್ಟು ಮೆರವಣಿಗೆಯಲ್ಲಿ ತರಲಾಯಿತು. ವಿವಿಧ ಸಾಂಸ್ಕೃತಿಕ ಕಲಾಪ್ರಕಾರಗಳು ಮೆರವಣಿಗೆಗೆ ರಂಗು ತುಂಬಿತು. ಪತ್ರಕರ್ತ ಮನೋಹರ ಪ್ರಸಾದ್ ಕಾರ್ಯಕ್ರಮ ನಿರ್ವಹಿಸಿದರು.