ಪರಂಪರೆ, ಪ್ರಕೃತಿ ಇದ್ದರೆ ಕನ್ನಡದ ಶಾಸ್ತ್ರೀಯತೆ ಪರಿಪೂರ್ಣ

ವಿಶೇಷ ಸಂದರ್ಶನ: ಅವಿನಾಶ್ ಬಿ.
ಕನ್ನಡಕ್ಕೆ ಶಾಸ್ತ್ರೀಯ ಸ್ಥಾನಮಾನ ದೊರೆತಿದೆ ಎಂದಾಕ್ಷಣ ಸರಕಾರವು ಜನ ಸಾಮಾನ್ಯರ ಮೇಲೆ ಜವಾಬ್ದಾರಿ ಹೊರಿಸಿ ಸುಮ್ಮನೆ ಕುಳಿತುಕೊಳ್ಳುವಂತಿಲ್ಲ. ಭಾಷೆ ಮತ್ತು ಕನ್ನಡದ ಪರಂಪರೆ ಉಳಿಸುವ ನಿಟ್ಟಿನಲ್ಲಿ ಸರಕಾರ ರಾಜಕೀಯ ಇಚ್ಛಾಶಕ್ತಿ ರೂಢಿಸಿಕೊಂಡು ಕಾರ್ಯೋನ್ಮುಖವಾಗಬೇಕಾಗಿದೆ ಎಂದು ನಿತ್ಯೋತ್ಸವ ಕವಿ, ನಾಡೋಜ ಡಾ.ಕೆ.ಎಸ್.ನಿಸಾರ್ ಅಹ್ಮದ್ ಹೇಳಿದ್ದಾರೆ.
WD

ಮೂಡುಬಿದಿರೆಯಲ್ಲಿ ನಡೆಯುತ್ತಿರುವ ಮೂರು ದಿನಗಳ 'ಆಳ್ವಾಸ್ ನುಡಿಸಿರಿ-08' ಕನ್ನಡ ನಾಡು-ನುಡಿಯ ರಾಷ್ಟ್ರೀಯ ಸಮ್ಮೇಳನದ ಪಾರ್ಶ್ವದಲ್ಲಿ ವೆಬ್‌ದುನಿಯಾಕ್ಕೆ ವಿಶೇಷ ಸಂದರ್ಶನ ನೀಡಿದ ಕವಿ ನಿಸಾರ್ ಅಹ್ಮದ್, ಈ ನಿಟ್ಟಿನಲ್ಲಿ ಸರಕಾರ ಪ್ರಧಾನವಾಗಿ ಮಾಡಲೇಬೇಕಾದ ಮೂರು ಅಂಶಗಳನ್ನು ಮುಖ್ಯಮಂತ್ರಿ ಜೊತೆ ಪ್ರಸ್ತಾಪಿಸುವುದಾಗಿ ಹೇಳಿದರು.

ಕನ್ನಡಕ್ಕೆ ಶಾಸ್ತ್ರೀಯ ಸ್ಥಾನಮಾನ ದೊರೆತ ಹಿನ್ನೆಲೆಯಲ್ಲಿ ಇದೇ ತಿಂಗಳ 30ರಂದು ಸಾರಸ್ವತ ಲೋಕದ ಏಳು ಮಂದಿ ದಿಗ್ಗಜರನ್ನು ಸರಕಾರ ಸನ್ಮಾನಿಸಲಿದೆ.

ಈ ಸಂದರ್ಭದಲ್ಲಿ ಅವಕಾಶ ದೊರೆತರೆ, "ಕನ್ನಡಕ್ಕೆ ಶಾಸ್ತ್ರೀಯ ಸ್ಥಾನಮಾನ ನೀಡುವುದಕ್ಕೆ ತಡೆ ಕೋರಿ ಮದ್ರಾಸ್ ಹೈಕೋರ್ಟಿನಲ್ಲಿ ಸಲ್ಲಿಸಲಾದ ತಕರಾರು ಅರ್ಜಿ ತೆರವುಗೊಳಿಸಲು ತುರ್ತು ಕ್ರಮ ಕೈಗೊಳ್ಳಬೇಕು, ಕನ್ನಡದಲ್ಲಿ ಲಭ್ಯವಿರುವ ಅಮೂಲ್ಯವಾದ ಪ್ರಾಚೀನ ಗ್ರಂಥಗಳು ಜನಸಾಮಾನ್ಯರಿಗೂ ತಲುಪುವಂತಾಗಲು ಸರಳ ಗದ್ಯಾನುವಾದ ಮಾಡಿ ಪ್ರಕಟಿಸಿ, ಹಂಚಬೇಕು ಮತ್ತು ರಾಜ್ಯದ ಪ್ರಮುಖ ಪ್ರವಾಸೀ ಕೇಂದ್ರಗಳನ್ನು ಉಳಿಸಿ, ಪೋಷಿಸಬೇಕು" ಎಂಬ ಬೇಡಿಕೆಗಳನ್ನು ಮುಖ್ಯಮಂತ್ರಿ ಮುಂದಿಡುವುದಾಗಿ ನಿಸಾರ್ ಅಹ್ಮದ್ ನುಡಿದರು.

ಕನ್ನಡದ ಹಳೆಯ ಕೃತಿಗಳು ಅಗ್ಗದ ಬೆಲೆಗೆ ಸಿಗೋದಿಲ್ಲ, ಸಿಕ್ಕಿದ್ರೂ ಓದುವಂತಹ ನೈಪುಣ್ಯ, ಪರಿಣತಿ ಜನಸಾಮಾನ್ಯರಿಗೆ ಕಡಿಮೆ. ಉದಾಹರಣೆಗೆ ಪಂಪ, ರನ್ನ ಮೊದಲಾದವರ ಕೃತಿಗಳು ಇಂಗ್ಲಿಷಿನಲ್ಲಿ ತರ್ಜುಮೆಗೊಂಡು ಸರಳ ಅನುವಾದದ ಮೂಲಕ ಲಭ್ಯವಿದೆ. ಅಂಥವು ಕನ್ನಡದಲ್ಲಿಯೂ ಜನಸಾಮಾನ್ಯರಿಗೆ ಅರ್ಥವಾಗಿಸುವಂತಹ ಗದ್ಯಾನುವಾದದೊಂದಿಗೆ ಜನರಿಗೆ ದೊರೆಯಬೇಕು. ಇವುಗಳನ್ನು ಕಡಿಮೆ ಬೆಲೆಗೆ ವಿದ್ಯಾಸಂಸ್ಥೆಗಳಿಗೆ ಮತ್ತು ಜನ ಸಾಮಾನ್ಯರಿಗೂ ಸರಕಾರವೇ ಕಾಳಜಿಯಿಂದ ತಲುಪಿಸಬೇಕು ಎಂದು ಅವರು ಅಭಿಪ್ರಾಯಪಟ್ಟರು.

ನಾಟಕ ಮತ್ತಿತರ ಮಾಧ್ಯಮಗಳ ಮೂಲಕ ಶೇಕ್ಸ್‌ಪಿಯರ್ ಜನರಿಗೆ ಸಾಕಷ್ಟು ಹತ್ತಿರವಾದವರು. ಅದೇ ರೀತಿ ಕನ್ನಡದಲ್ಲೂ ಮಹಾನ್ ಕೃತಿಗಳು, ಜನಸಾಮಾನ್ಯರನ್ನು ತಕ್ಷಣವೇ ತಟ್ಟಬಲ್ಲಂತಹ ದೃಶ್ಯ ಮಾಧ್ಯಮದ ಮೂಲಕ ಜನರ ಮನಸ್ಸನ್ನು ತಲುಪುವಂತಾಗಬೇಕು. ಇದರಿಂದ ಕನ್ನಡದ ಬಗ್ಗೆ ಕನ್ನಡ ಜನತೆಗೆ ಆಸಕ್ತಿ, ಅಭಿಮಾನ ಮೂಡುವಂತಾಗಬಹುದು ಎಂದು ನಿಸಾರ್ ಅಹ್ಮದ್ ಕಳಕಳಿ ವ್ಯಕ್ತಪಡಿಸಿದರು.

ಆಳ್ವಾಸ್ ನುಡಿಸಿರಿಯಂತಹ ಕಾರ್ಯಕ್ರಮಗಳಿಗೆ ವಿಭಿನ್ನ ಆಸಕ್ತಿಯ ಜನ ಆಗಮಿಸುತ್ತಾರೆ. ಅವರಿಗೆ ಕನ್ನಡ ಸಾಹಿತ್ಯದ ಸಮೃದ್ಧಿಯ ತಿಳಿವಳಿಕೆ ಮೂಡಿಸುವ ಕಾರ್ಯಗಳು ಸರಕಾರದ ವತಿಯಿಂದ ನಡೆಯಬೇಕು ಎಂದವರು ಹೇಳಿದರು. ಸರಕಾರದಿಂದ ಅಂಗೀಕಾರ ಮದ್ರೆ ದೊರೆತರೆ ಅದಕ್ಕೆ ಹೆಚ್ಚಿನ ಮಹತ್ವ ಬರುತ್ತದೆ. ಇದಕ್ಕೆಲ್ಲಾ ಸರಕಾರದ ನೆರವಿಲ್ಲದೆ ಆಗುವುದಿಲ್ಲ. ನುಡಿಸಿರಿಯಂತಹ ಸಮ್ಮೇಳನಗಳು ಸರಕಾರದಿಂದ ಪ್ರೋತ್ಸಾಹದಿಂದ ಆಗಬೇಕು. ಇಲ್ಲವಾದಲ್ಲಿ ಇದಕ್ಕೆ ಅಧಿಕೃತತೆಯ ಮುದ್ರೆ ಬೀಳುವುದಿಲ್ಲ. ಅಂಗೀಕಾರ ದೊರೆತರೆ ಭಾಷೆಗೆ ಎಲ್ಲ ರೀತಿಯಲ್ಲೂ ಅನುಕೂಲ. ಆಳ್ವಾಸ್ ನುಡಿಸಿರಿ ಎಂಬೊಂದು ಅಕ್ಷರ ಜಾತ್ರೆ ಇರುವ ಬಗ್ಗೆ ರಾಜ್ಯದ ಬೇರೆ ಪ್ರದೇಶಗಳ ಜನರಿಗೆ ತಿಳಿವಳಿಕೆ ಇಲ್ಲ. ಇದಕ್ಕೆ ಮತ್ತಷ್ಟು ಪ್ರಚಾರ ಸಿಗುವಂತಾಗಬೇಕು ಎಂದು ಅಭಿಪ್ರಾಯಪಟ್ಟರು.

ನಮ್ಮಲ್ಲಿ ಸಾಕಷ್ಟು ಭವ್ಯ ಪರಂಪರೆ, ಇತಿಹಾಸವಿರುವ ತಾಣಗಳಿವೆ. ಅದ್ಭುತ ಪ್ರಕೃತಿ ಐಸಿರಿ ಜೋಗ ಜಲಪಾತ ವೈಭವವಿದೆ. ಇಂಥ ತಾಣಗಳು ಈಗ ಗಬ್ಬೆದ್ದು ಹೋಗಿವೆ, ಕುಡಿತ, ಮೋಜಿನ ತಾಣವಾಗಿ, ಅಸಹನೀಯ ವಾತಾವರಣ ಅಲ್ಲಿದೆ. ಇಂಥ ಜನಾಕರ್ಷಕ ತಾಣಗಳ ರಕ್ಷಣೆ, ಕಾಳಜಿ ಸರಕಾರದಿಂದ ಆಗಬೇಕು. ಶಾಸ್ತ್ರೀಯ ಭಾಷೆ ಜತೆಜತೆಗೇ ಪರಂಪರೆ ಉಳಿಸುವ ಕಾರ್ಯವೂ ಆಗಬೇಕು ಎಂದ ಅವರು, ರಾಜಕಾರಣಿಗಳು ಕುರ್ಚಿ ಉಳಿಸುವ ತಿಕ್ಕಾಟದಲ್ಲೇ ತೊಡಗಿಕೊಳ್ಳುವ ಬದಲು, ರಾಜಕೀಯ ಇಚ್ಛಾಶಕ್ತಿಯಿಂದ ಜನಪರವಾದ ಕಾರ್ಯ ನಡೆಸುವಂತಾಗಬೇಕು, ನಮ್ಮ ಭವ್ಯ ಪ್ರಾಕೃತಿಕ ಸಂಪತ್ತಿನ ರಕ್ಷಣೆ ಮತ್ತು ಪ್ರಚಾರ ಕಾರ್ಯ ಆಗಬೇಕು ಎಂದರು.

ಶಾಸ್ತ್ರೀಯ ಭಾಷೆ ಅಂದ್ರೆ ನಾಡು ಮತ್ತು ಸಂಸ್ಕೃತಿಯ ವಿಭಿನ್ನ ಮಜಲುಗಳು ಒಳಗೊಳ್ಳುತ್ತದೆ ಎಂದು ನನ್ನ ಅಭಿಪ್ರಾಯ. ಇದನ್ನು ಮುಖ್ಯಮಂತ್ರಿಗಳಿಗೆ ತಿಳಿಹೇಳಲಿದ್ದೇನೆ. ಪಾರಂಪರಿಕ ಸ್ಥಳಗಳಲ್ಲಿ, ಪ್ರವಾಸೀ ಕೇಂದ್ರಗಳಲ್ಲಿ ಸೂಕ್ತ ಮಾರ್ಗದರ್ಶಿಯ ನೇಮಕ ಮುಂತಾದ ವ್ಯವಸ್ಥೆಯಿಂದ ಭಾಷೆ-ನಾಡು-ನುಡಿ ಅಭಿವೃದ್ಧಿಯಾಗಬಹುದು ಎಂದು ಆಶಿಸಿದರು.

ಬ್ಯಾಂಗಲೋರ್, ಹುಬ್ಳಿ, ಮೈಸೋರ್, ಮ್ಯಾಂಗಲೋರ್ ಮುಂತಾದ ಊರುಗಳ ಹೆಸರಿನ ಕನ್ನಡೀಕರಣಕ್ಕೆ ಸಂಬಂಧಿಸಿದಂತೆ ಕೇಳಲಾದ ಪ್ರಶ್ನೆಗೆ ಉತ್ತರಿಸಿದ ಅವರು, ಜನರಲ್ಲಿ ಇಂಥ ಮನೋಭಾವನೆ ಮೊದಲು ಮೂಡಬೇಕು. ಸರಕಾರ ಎಷ್ಟೇ ಆದೇಶಗಳನ್ನು ತರಲಿ, ಜನಸಾಮಾನ್ಯರಿಗೆ ತಮ್ಮ ಭಾಷೆ, ಸಂಸ್ಕೃತಿ ಬಗ್ಗೆ ಅಭಿಮಾನ, ಆಸಕ್ತಿ ಇಲ್ಲದಿದ್ದರೆ ಭಾಷೆ ಬೆಳೆಯುವುದಿಲ್ಲ. ಇದರಲ್ಲಿ ಮಾಧ್ಯಮಗಳ ಪಾತ್ರವೂ ಅತ್ಯಂತ ಮುಖ್ಯ ಎಂದು ನುಡಿದರು.

ಈ ನಿಟ್ಟಿನಲ್ಲಿ ಸರಕಾರದಿಂದಲೇ ಅಧಿಸೂಚನೆ ಹೊರಡಬೇಕು. ಕನ್ನಡದ ಹಿತಕ್ಕೆ ಪರವಾದ ಯಾವುದೇ ಕೆಲಸಕ್ಕೆ ಅಧಿಸೂಚನೆ ಬೇಕು. ಮುಖ್ಯವಾಗಿ ಉದ್ಯೋಗ ಕ್ಷೇತ್ರ. ರೈಲ್ವೇಯಲ್ಲಿ, ಮಾಹಿತಿ ತಂತ್ರಜ್ಞಾನ, ಜೈವಿಕ ತಂತ್ರಜ್ಞಾನ ಕ್ಷೇತ್ರದಲ್ಲಿ ಕನ್ನಡಿಗರಿಗೆ ಉದ್ಯೋಗ ಹೆಚ್ಚು ದೊರೆಯಬೇಕು. ಇದಕ್ಕೆ ರಾಜಕೀಯ ಇಚ್ಛಾಶಕ್ತಿ ಇಲ್ಲ. ಕನ್ನಡ ನೆಲ-ಜಲ,ವಾಯು ಸ್ವೀಕರಿಸಿ, ಎಲ್ಲ ಸವಲತ್ತು ಪಡೆಯುವ ಯಾವುದೇ ಕಂಪನಿಗಳು ಕನ್ನಡಿಗರಿಗೆ ಉದ್ಯೋಗ ನೀಡಲೇಬೇಕು ಎಂದವರು ಆಗ್ರಹಿಸಿದರು.

ಕನ್ನಡ ಶಬ್ದಗಳ ಬಳಕೆ ಬಗ್ಗೆ ಮಾತನಾಡಿದ ಅವರು, ನಾವು ಅಚ್ಚ ಕನ್ನಡದ ಶಬ್ದಗಳನ್ನು ಬಳಸಿದಲ್ಲಿ ಜನರಿಗೆ ತಿಳಿಯುವುದು ಕಷ್ಟಕರ. ಹೀಗಾಗಿ ಆಡುಭಾಷೆಯಲ್ಲಿ ಬಹುತೇಕ ಪದಗಳು ಇಂಗ್ಲಿಷ್, ಉರ್ದು, ಪೋರ್ಚುಗೀಸ್ ಭಾಷೆಗಳಿಂದ ಕನ್ನಡಕ್ಕೆ ಆಗಮಿಸಿವೆ. ಬಸ್ಸು, ಕಾರು, ಬೈಕು ಮುಂತಾಗಿ ಇಂಗ್ಲಿಷ್ ಪದಗಳಿಗೆ 'ಉ'ಕಾರ ಸೇರಿಸಿದರೆ ಅದು ಕನ್ನಡ ಪದವೇ ಆದಂತಾಯಿತು. ಈ ಪದಗಳು ನಮ್ಮ ಕನ್ನಡದ ಜೊತೆಗೆ ಸೇರಿಕೊಂಡು ಭಾಷೆ ಸಮೃದ್ಧಿಯಾಗಿದೆ ಎಂದವರು ನುಡಿದರು.

ಕ್ಷಣಿಕ ಲಾಭದ ಭಾವಗೀತೆಗಳಿಗೆ ಉಳಿಗಾಲವಿಲ್ಲ:
ಹಿಂದಿನಷ್ಟು ಮಧುರವಾದ ಭಾವಗೀತೆಗಳು ಇತ್ತೀಚೆಗೆ ಮರೆಯಾಗುತ್ತಿರುವ ಬಗ್ಗೆ ಕಳವಳ ವ್ಯಕ್ತಪಡಿಸಿದ ಅವರು, ಕ್ಷಣಿಕ ಲಾಭಕ್ಕಾಗಿ ಕವಿಗಳು ಅನ್ನಿಸಿಕೊಂಡವರು ಡಬಲ್ ಮೀನಿಂಗ್ ಇರುವ ಹಾಡುಗಳನ್ನು, ವಿಚಿತ್ರ ಸಂಗೀತದೊಂದಿಗೆ ಸೇರಿಸಿ ಮಾರುಕಟ್ಟೆಗಿಳಿಸುತ್ತಾರೆ. ಹೀಗಾಗಿ ಅವುಗಳ ಆಯುಸ್ಸು ಕೂಡ ಕ್ಷಣಿಕವೇ ಆಗಿರುತ್ತದೆ ಎಂದು ಅಭಿಪ್ರಾಯಪಟ್ಟ ಅವರು, ಕನ್ನಡ ಮೊದಲ ಭಾವಗೀತೆಗಳ ಕ್ಯಾಸೆಟ್ ಹೆಗ್ಗಳಿಕೆಯ ನಿತ್ಯೋತ್ಸವದ ಕುರಿತು ಹೇಳುತ್ತಾ, ಇದು ಕಾಲದಿಂದಲೇ ಪರೀಕ್ಷಿತವಾದದ್ದು. ಅನಂತಸ್ವಾಮಿಯವರು ಜೋಗದ ಸಿರಿ ಬೆಳಕಿನಲ್ಲಿ, ಎಲ್ಲೋ ಜೋಗಪ್ಪ ಮುಂತಾದ ಈ ಹಾಡುಗಳನ್ನು ಕ್ಯಾಸೆಟ್ ಬರುವ 10 ವರ್ಷಕ್ಕೂ ಮುಂಚೆ ಅಲ್ಲಲ್ಲಿ ಹಾಡುತ್ತಿದ್ದರು. ಅದು ಜನಮಾನಸದಲ್ಲಿ ಉಳಿಯಿತು. ಹೀಗಾಗಿ ಅದು ಇಂದಿಗೂ ಬೇಡಿಕೆ ಉಳಿಸಿಕೊಂಡಿದೆ ಎಂದು ಹೇಳಿದರು.

ಜನರಲ್ಲಿ ಉತ್ತಮ ಅಭಿರುಚಿ ಸೃಷ್ಟಿಸಬೇಕಾದವರು ಕವಿಗಳು, ಸಾಹಿತಿಗಳು. ನಾವೇನೇ ಪ್ರಚಾರಕ್ಕಾಗಿ ಏನೇನೋ ಸಾಹಿತ್ಯ ಬರೆದು ಮಾರುಕಟ್ಟೆ ತಂತ್ರ ಅನುಸರಿಸಿದರೆ ಅದಕ್ಕೆ ಕ್ಷಣಿಕ ಬೆಂಬಲವಷ್ಟೇ ದೊರೆಯಬಹುದು, ಆದರೆ ಒಳ್ಳೆಯ ಭಾವಗೀತೆಗಳಿಗೆ ಯಾವತ್ತೂ ಬೇಡಿಕೆ ಇರುತ್ತದೆ ಎಂದು ನಿಸಾರ್ ಅಹ್ಮದ್ ನುಡಿದರು.