ಆಳ್ವಾಸ್ ನುಡಿಸಿರಿಗೆ ಕಣವಿ ಸಾರಥ್ಯ

ಶುಕ್ರವಾರ, 21 ನವೆಂಬರ್ 2008 (18:58 IST)
ದಕ್ಷಿಣ ಕನ್ನಡ ಜಿಲ್ಲೆ ಮೂಡುಬಿದಿರೆಯ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ ಕನ್ನಡ ನಾಡು-ನುಡಿಯ ರಾಷ್ಟ್ರೀಯ ಸಮ್ಮೇಳನ ಆಳ್ವಾಸ್ ನುಡಿಸಿರಿ-2008ನ್ನು ನವೆಂಬರ್ 28ರಿಂದ 30ರವರೆಗೆ 3 ದಿನಗಳ ಕಾಲ ನಡೆಯುವ ನಿಟ್ಟಿನಲ್ಲಿ ಮೂಡುಬಿದಿರೆಯ ವಿದ್ಯಾಗಿರಿ ಸಜ್ಜಾಗುತ್ತಿದೆ.

ಕನ್ನಡ ಮನಸ್ಸು-ಶಕ್ತಿ ಮತ್ತು ವ್ಯಾಪ್ತಿ ಈ ವರ್ಷದ ಸಮ್ಮೇಳನದ ಪರಿಕಲ್ಪನೆಯಾಗಿದ್ದು, ಕವಿ ಡಾ. ಚೆನ್ನವೀರ ಕಣವಿ ಸಮ್ಮೇಳನಾಧ್ಯಕ್ಷತೆ ವಹಿಸಲಿದ್ದಾರೆ. ಅತಿಥಿಗಳಾಗಿ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಡಾ. ನಲ್ಲೂರು ಪ್ರಸಾದ್, ಶಾಸಕ ಕೆ.ಅಭಯಚಂದ್ರ ಜೈನ್ ಹಾಗೂ ಮಾಜಿ ಸಚಿವ ಕೆ.ಅಮರನಾಥ ಶೆಟ್ಟಿ ಭಾಗವಹಿಸಲಿದ್ದಾರೆ.

ಸಮ್ಮೇಳನವನ್ನು ಹಿರಿಯ ಸಾಹಿತಿ ಡಾ.ಕೆ.ಎಸ್.ನಿಸಾರ್ ಅಹಮ್ಮದ್ ಉದ್ಘಾಟಿಸಲಿದ್ದಾರೆ. ಸಮ್ಮೇಳನದಲ್ಲಿ ಒಟ್ಟು ನಾಲ್ಕು ವೇದಿಕೆಗಳಿದ್ದು, 4 ವಿಚಾರಗೋಷ್ಠಿಗಳು ನಡೆಯಲಿದೆ. ಪ್ರತಿದಿನ ಸಂಜೆ ಮಾತಿನ ಮಂಟಪ ಎಂಬ ವಿಶೇಷ ಹಾಸ್ಯ ಕಾರ್ಯಕ್ರಮ ಹಾಗೂ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ ಎಂದರು.

ನ.30ರಂದು ನಡೆಯುವ ಸಮಾರೋಪ ಸಮಾರಂಭದಲ್ಲಿ ದರೋಜಿ ಈರಮ್ಮ, ಗೊ.ರು.ಚನ್ನಬಸಪ್ಪ, ಸಾಹಿತಿ ಸಾ.ಶಿ.ಮರುಳಯ್ಯ ಸಿನಿಮಾ ಕ್ಷೇತ್ರದ ನಾಗತಿಹಳ್ಳಿ ಚಂದ್ರಶೇಖರ್ ಸೇರಿದಂತೆ ಒಟ್ಟು 10 ಮಂದಿಗೆ ಆಳ್ವಾಸ್ ನುಡಿಸಿರಿ ಪ್ರಶಸ್ತಿ ಪ್ರಧಾನ ಮಾಡಲಾಗುವುದು ಎಂದು ಆಳ್ವಾಸ್ ನುಡಿಸಿರಿ ಸಮಿತಿ ತಿಳಿಸಿದೆ.

ವೆಬ್ದುನಿಯಾವನ್ನು ಓದಿ