ಕನ್ನಡಮ್ಮನ ಐಸಿರಿ 'ನುಡಿಸಿರಿ'ಗೆ ಸಜ್ಜಾಗಿದೆ ಮೂಡುಬಿದಿರೆ

ಮಂಗಳವಾರ, 25 ನವೆಂಬರ್ 2008 (19:21 IST)
ಅವಿನಾಶ್ ಬಿ.
WD
ಇಲ್ಲಿ ರಾಜಕಾರಣಿಗಳ ಬಾಯಿ ಹರಿಯುವುದಿಲ್ಲ, ಕನ್ನಡ ಸಾಹಿತ್ಯಾಸಕ್ತರ ಹೊಳೆ ಹರಿಯುತ್ತದೆ, ಸಾಹಿತಿಗಳ, ಕಲಾವಿದರ ಮುಖದಲ್ಲಿ ತೇಜಸ್ಸಿನ ಕಳೆಯ ಹೊಳೆ ಹೊಳೆಯುತ್ತದೆ. ಇಲ್ಲಿ ರಾಜಕಾರಣಿಗಳೇ ಉತ್ಸವಮೂರ್ತಿಗಳಾಗಿರುವುದಿಲ್ಲ, ಆದರೋ ನೈಜ ಸಾಹಿತ್ಯಾಭಿಮಾನಿಗಳು, ಕನ್ನಡಾಭಿಮಾನಿಗಳು ತಾವೇ ಮೈಮರೆತಂತೆ ಕನ್ನಡಮ್ಮನ ಜಾತ್ರೆಯಲ್ಲಿ ಮಿಂದೇಳುತ್ತಾರೆ. ಅದು ಮಾಡುತ್ತೇವೆ-ಇದು ಮಾಡುತ್ತೇವೆ ಎಂಬ ಕಪಟ ಭರವಸೆಗಳಿರುವುದಿಲ್ಲ, ಬದಲಾಗಿ ಏನು ಮಾಡಿದರೆ ಒಳಿತಾದೀತು ಎಂಬ ಸನ್ಮನಸಿನ ತುಮುಲಗಳಿರುತ್ತವೆ. ಕನ್ನಡ ನುಡಿಯ ಐಸಿರಿಯು ಇಲ್ಲಿ ಮೇಳೈಸುತ್ತದೆ, ಪೊಳ್ಳು ಭರವಸೆ ನೀಡುವ ರಾಜಕಾರಣಿಗಳಿಲ್ಲಿ ಬಂದರೆ ಇರಿಸುಮುರಿಸು ಖಂಡಿತ. ಅಂಥಹ ಸಮಯ ಪಾಲನೆ, ಸಮಯವೇ ದೇವರು ಎಂಬ ಧ್ಯೇಯ ಮಂತ್ರ. ಇಂತಹ ಕನ್ನಡ ನಾಡು-ನುಡಿಯ, ಸಂಸ್ಕೃತಿಯ ಐಸಿರಿಯೊಂದಕ್ಕೆ ಸಾಕ್ಷಿಯಾಗುತ್ತಿದೆ ಬಸದಿಗಳ ಬೀಡು, ಜೈನ ಕಾಶಿ ಮೂಡುಬಿದಿರೆ.

ಇಲ್ಲಿನ ವಿದ್ಯಾಗಿರಿಯಲ್ಲಿ ಕೆ.ವಿ.ಸುಬ್ಬಣ್ಣ ಬಯಲು ರಂಗ ಮಂದಿರ, ರತ್ನಾಕರವರ್ಣಿ ವೇದಿಕೆ, ಕು.ಶಿ.ಹರಿದಾಸ ಭಟ್ಟ ವೇದಿಕೆ ಮತ್ತು ಶಿವರಾಮ ಕಾರಂತ ವೇದಿಕೆಗಳು ಸಂಭ್ರಮ,ಸಡಗರದ ಅಲಂಕಾರದೊಂದಿಗೆ ಕನ್ನಡಮ್ಮನ ಜಾತ್ರೆಗೆ ಆಗಮಿಸುವ ಕನ್ನಡ ಭಕ್ತರನ್ನು ಆಕರ್ಷಿಸುತ್ತಿವೆ. ಜಾನಪದ ವೈಭವ ಸಾರುವ ಅಲಂಕಾರಗಳು, ಚಿತ್ರಗಳು, ಪ್ರತಿಕೃತಿಗಳು ಸಮ್ಮೇಳನ ನಡೆಯುವ ವೇದಿಕೆಯ ಸುತ್ತ ಮುತ್ತ ಕಣ್ಮನ ಸೆಳೆಯುತ್ತವೆ.

'ಕನ್ನಡ ಮನಸುಗಳು-ಶಕ್ತಿ ಮತ್ತು ವ್ಯಾಪ್ತಿ' ಎಷ್ಟಿದೆ, ವಿಸ್ತಾರವಾಗಬೇಕಿದ್ದರೆ ಏನು ಎಷ್ಟಾಗಬೇಕು ಎಂಬಿತ್ಯಾದಿಯಾಗಿ ಕನ್ನಡ ಮನಸುಗಳೆಲ್ಲಾ ಒಟ್ಟು ಸೇರಿ, ಚಿಂತನೆಯ ಧಾರೆಯನ್ನು ಹರಿಯಬಿಟ್ಟು, ಇಂತಾಗುವಂತಾಗಲು ಏನು ಮಾಡಬೇಕೆಂಬ ಕುರಿತ ರೂಪುರೇಷೆಗಳಿಗೆ ವಿದ್ಯಾಗಿರಿ ಸಜ್ಜಾಗಿದೆ.

ನಿರಂತರವಾಗಿ ಐದನೇ ವರ್ಷ ನಡೆಯುತ್ತಿರುವ ಈ ನುಡಿ ಜಾತ್ರೆ, ಮರಗಟ್ಟುವ ಮಾರ್ಗಶಿರ ಚಳಿಯ ನಡುವೆಯೂ ಅಚ್ಚಳಿಯದ ನೆನಪುಗಳನ್ನು ಕಟ್ಟಿಕೊಡಲು ಸಜ್ಜಾಗುತ್ತಿದೆ. ಇದರ ಹಿಂದಿರುವ ರೂವಾರಿ ಮೂಡುಬಿದಿರೆಯ ಡಾ.ಮೋಹನ್ ಆಳ್ವ. ಅದ್ಭುತ ಇಚ್ಛಾಶಕ್ತಿ, ಸಂಘಟನಾ ಚಾತುರ್ಯ ಹೊಂದಿರುವ ಡಾ.ಆಳ್ವರು ತಮ್ಮ ಆಳ್ವಾಸ್ ಎಜುಕೇಶನ್ ಫೌಂಡೇಶನ್ ನೇತೃತ್ವದಲ್ಲಿ ಪ್ರತಿವರ್ಷ ಈ ಸಾಹಿತ್ಯ ಜಾತ್ರೆಯನ್ನು ಚಾಚೂ ತಪ್ಪದೆ ನಡೆಸಿಕೊಂಡು ಬರುತ್ತಿದ್ದು, ಇದು ಅವರದು ನಿರಂತರ ಐದನೇ ವರ್ಷದ ಕನ್ನಡ ಸೇವೆ. ಶಿಕ್ಷಣ ಸಂಸ್ಥೆಯೊಂದು ಈ ರಾಷ್ಟ್ರಮಟ್ಟದಲ್ಲಿ, ಅಂತಾರಾಷ್ಟ್ರೀಯ ಮಟ್ಟದಲ್ಲಿ ಹೆಸರು ಮಾಡುತ್ತಿರುವ ಸಮ್ಮೇಳನವೊಂದನ್ನು ನಿರಂತರವಾಗಿ ಆಯೋಜಿಸುತ್ತಿರುವುದು, ಈ ಮೂಲಕ ಕನ್ನಡದ ಕೈಂಕರ್ಯವನ್ನು ಕೈಗೊಳ್ಳುತ್ತಿರುವುದು ಅಪರೂಪ ಮತ್ತು ಕನ್ನಡದ ಮಟ್ಟಿಗೆ ಅದೃಷ್ಟವೂ ಹೌದು.

2004ರಲ್ಲಿ ಆರಂಭವಾಯಿತು ಈ ನುಡಿಸಿರಿ ಎಂಬ ನುಡಿ ಜಾತ್ರೆಯ ಸರಣಿ. ಈ ಬಾರಿ ನವೆಂಬರ್ 28, 29 ಹಾಗೂ 30ರಂದು ನಡೆಯುತ್ತಿರುವ ಈ ಸಮ್ಮೇಳನದ ಮೂರು ದಿನ ಕನ್ನಡ ಮನಸ್ಸುಗಳಿಗೆ ಭರ್ಜರಿ ರಸದೌತಣ. ಮಹಾಕವಿ ರತ್ನಾಕರವರ್ಣಿಯ ನೆಲೆವೀಡಾದ ಮೂಡುಬಿದಿರೆಯು ಈ ಮೂರು ದಿನಗಳಲ್ಲಿ ರಾಜ್ಯಾದ್ಯಂತ ಅಕ್ಷರಶಃ ಪ್ರಜ್ವಲಿಸುತ್ತಿರುತ್ತದೆ. ನಾಡೋಜ ಡಾ.ಕೆ.ಎಸ್ ನಿಸಾರ್ ಅಹ್ಮದ್ ಉದ್ಘಾಟಿಸಲಿರುವ ಈ ಸಾಹಿತ್ಯ ಪರಿಷೆಗೆ ಅಧ್ಯಕ್ಷತೆಯ ಮೆರುಗು ನೀಡುವವರು ಮತ್ತೊಬ್ಬ ನಾಡೋಜ ಡಾ.ಚೆನ್ನವೀರ ಕಣವಿ.

ಸಾಹಿತ್ಯ ಸಮ್ಮೇಳನಗಳು ಅರ್ಥ ಕಳೆದುಕೊಂಡು, ಯಾವುದೋ ರಾಜಕೀಯಕ್ಕೆ ತನ್ನನ್ನು ಒಡ್ಡಿಕೊಂಡು, ಹಾದಿ ತಪ್ಪುತ್ತಿವೆ ಎಂಬ ಮಾತುಗಳು ಕೇಳುತ್ತಿರುವ ಹಂತದಲ್ಲಿ ತಮ್ಮ ಸಾಟಿಯಿಲ್ಲದ ಇಚ್ಛಾಶಕ್ತಿಯಿಂದ "ನುಡಿ ಸಿರಿ" ಎಂಬ ಸಿರಿನುಡಿ ಜಾತ್ರೆಯ ಮುಂದಾಳುತ್ವ ವಹಿಸಿರುವ ಮೋಹನ್ ಆಳ್ವರ ಪರಿಶ್ರಮದ ಫಲವಾಗಿ, ಕನ್ನಡದ ಕೈಂಕರ್ಯದಲ್ಲಿ ತೊಡಗಿಕೊಂಡಿರುವ ಅದೆಷ್ಟೋ ಮಂದಿ ಸಾಹಿತಿಗಳು, ಕಲಾವಿದರು ಇಲ್ಲಿಗೆ ಬಂದು ಮನಸ್ಸು ತಂಪು ತಂಪು ಮಾಡಿಕೊಂಡು ಬೆಚ್ಚಗಿನ ಸವಿನೆನಪುಗಳ ಅನುಭವದೊಂದಿಗೆ ಉತ್ಸಾಹಿತರಾಗಿ, ಮುದಗೊಂಡು, ಮತ್ತಷ್ಟು ಕ್ರಿಯಾಶೀಲತೆ ತೋರ್ಪಡಿಸಲು ಶಪಥ ಮಾಡಿಕೊಳ್ಳುವುದು ಸುಳ್ಳಲ್ಲ.

ಇಂಥ ಆತ್ಮೀಯ ವಾತಾವರಣದಲ್ಲಿ ನಡೆಯುವ ಸಂಭ್ರಮದ ಪರಿಷೆಯ ಸಾದ್ಯಂತ ವರದಿಗಳು ನಿಮ್ಮ ವೆಬ್‌ದುನಿಯಾದಲ್ಲಿ ಮೂಡಿಬರಲಿವೆ. ನಿರೀಕ್ಷಿಸಿ.