ವಿಶ್ವಕಪ್: ಬಹುತೇಕ ಕ್ವಾರ್ಟರ್‌ಫೈನಲ್ ಪ್ರವೇಶಿಸುವ ತಂಡಗಳ ಲೆಕ್ಕಾಚಾರ
ಶನಿವಾರ, 7 ಮಾರ್ಚ್ 2015 (16:29 IST)
ವಿಶ್ವಕಪ್'ನ ಲೀಗ್ ಹಂತ ಕೊನೆಯ ಘಟ್ಟ ತಲುಪುತ್ತಿದೆ. ಇನ್ನೆರಡು ಸುತ್ತಿನ ಪಂದ್ಯಗಳು ಬಾಕಿ ಇದ್ದು, ನಾಕೌಟ್ ಹಂತದ ಲೆಕ್ಕಾಚಾರಗಳು ದಟ್ಟವಾಗುತ್ತಿವೆ. ಎ ಗುಂಪಿನಿಂದ ನ್ಯೂಜಿಲೆಂಡ್ ಮತ್ತು ಬಿ ಗುಂಪಿನಿಂದ ಭಾರತ ಮಾತ್ರ ಕ್ವಾರ್ಟರ್'ಫೈನಲ್ ಪ್ರವೇಶವನ್ನ ಖಚಿತಪಡಿಸಿಕೊಂಡಿವೆ. ಇನ್ನುಳಿದ 6 ಸ್ಥಾನಗಳಿಗೆ ತುರುಸಿ ಪೈಪೋಟಿ ನಡೆಯುತ್ತಿದೆ. ಿಂದು ನಡೆಯುವ ಪ್ರತಿಯೊಂದು ಪಂದ್ಯ ಕೂಡ ಬಹಳ ಮುಖ್ಯವೆನಿಸಿದೆ. ಈ ಹಿನ್ನೆಲೆಯಲ್ಲಿ ಬಿ ಗುಂಪಿನ ಲೆಕ್ಕಾಚಾರಗಳು ಇಲ್ಲಿವೆ.
ವಿಶ್ವಕಪ್ ಬಿ ಗುಂಪು
1) ಭಾರತ:
ಟೀಮ್ ಇಂಡಿಯಾ ಈಗಾಗಲೇ ಸತತ 4 ಪಂದ್ಯಗಳನ್ನ ಗೆದ್ದು ಕ್ವಾರ್ಟರ್'ಫೈನಲ್ ಪ್ರವೇಶವನ್ನ ಖಚಿತಪಡಿಸಿಕೊಂಡಾಗಿದೆ. ಭಾರತದ ಮುಂದಿನೆರಡೂ ಪಂದ್ಯಗಳ ಸುಲಭದ್ದಾಗಿದ್ದು, ಎದುರಾಳಿಗಳಾಗಿ ಐರ್ಲೆಂಡ್ ಮತ್ತು ಜಿಂಬಾಬ್ವೆ ತಂಡಗಳಿವೆ. ಹೀಗಾಗಿ, ಭಾರತ ತನ್ನ ಗುಂಪಿನಲ್ಲಿ ಅಗ್ರಸ್ಥಾನ ಪಡೆಯುವ ನಿರೀಕ್ಷೆ ಇದೆ.
2) ದಕ್ಷಿಣ ಆಫ್ರಿಕಾ:
ಹರಿಣಗಳ ತಂಡ 4 ಪಂದ್ಯಗಳನ್ನಾಡಿ 6 ಪಾಯಿಂಟ್ ಹೊಂದಿದ್ದಾರೆ. ಯುಎಇ ವಿರುದ್ಧದ ಪಂದ್ಯ ಬಾಕಿ ಇವೆ. ಇನ್ನೊಂದು ಪಂದ್ಯ ಗೆದ್ದರೂ ದಕ್ಷಿಣ ಆಫ್ರಿಕಾ ಎಂಟರ ಘಟ್ಟ ಪ್ರವೇಶಿಸುವುದು ಖಚಿತ. ಯುಎಇ ವಿರುದ್ಧ ಸೌಥ್ ಆಫ್ರಿಕಾ ಗೆಲ್ಲುವುದು ಕಷ್ಟವಲ್ಲ. ಹೀಗಾಗಿ, ಆ ತಂಡ ನಾಕೌಟ್ ಪ್ರವೇಶಿಸುವ ಸಾಧ್ಯತೆ ಶೇ. 80ರಷ್ಟಿದೆ.
3) ಪಾಕಿಸ್ತಾನ:
ನಾಲ್ಕು ಪಂದ್ಯಗಳ ಪೈಕಿ ಮೂರರಲ್ಲಿ ಗೆದ್ದು 6 ಪಾಯಿಂಟ್ ಹೊಂದಿದೆ. ಐರ್ಲೆಂಡ್ ವಿರುದ್ಧ ಪಂದ್ಯ ಬಾಕಿ ಇದೆ. ಒಂದು ಪಂದ್ಯ ಮಾತ್ರ ಗೆದ್ದರೆ ಆಗ ಬೇರೆಯವರ ಗೆಲುವು-ಸೋಲಿನ ಲೆಕ್ಕಾಚಾರವನ್ನ ಅವಲಂಬಿಸಬೇಕಾಗುತ್ತದೆ. ಐರ್ಲೆಂಡ್ ವಿರುದ್ಧ ಪಾಕಿಸ್ತಾನ ಗೆಲ್ಲುವ ಸಾಧ್ಯತೆ ಇದೆ. ಹೀಗಾಗಿ, ಪಾಕಿಸ್ತಾನ ಮುಂದಿನ ಹಂತ ಪ್ರವೇಶಿಸುವ ಸಾಧ್ಯತೆ ಶೇ. 60ರಷ್ಟಿದೆ.
4) ವೆಸ್ಟ್ ಇಂಡೀಸ್:
ವೆಸ್ಟ್ ಇಂಡೀಸ್ 5 ಪಂದ್ಯಗಳನ್ನಾಡಿ ಕೇವಲ 4 ಅಂಕ ಗಳಿಸಿದೆ. ಯುಎಇ ವಿರುದ್ಧದ ಪಂದ್ಯವಷ್ಟೇ ಬಾಕಿ ಇದೆ. ಆ ಪಂದ್ಯವನ್ನ ಗೆದ್ದರೆ 6 ಪಾಯಿಂಟ್ ಆಗಬಹುದು. ಆಗಲೂ, ಬೇರೆ ತಂಡಗಳ ಅಂಕಗಳ ಲೆಕ್ಕಾಚಾರದ ಮೇಲೆ ಭವಿಷ್ಯ ನಿಂತಿರುತ್ತದೆ. ಒಂದು ವೇಳೆ ಸೋತರೆ ಟೂರ್ನಿಯಿಂದ ಔಟ್. ವೆಸ್ಟ್ ಇಂಡೀಸ್'ಗೆ ಇರುವ ಅವಕಾಶ ಫಿಫ್ಟಿ-ಫಿಫ್ಟಿ ಎನ್ನಲಡ್ಡಿಯಿಲ್ಲ.
5) ಐರ್ಲೆಂಡ್:
ಎಂತಹ ತಂಡವನ್ನಾದರೂ ಸೋಲಿಸಬಲ್ಲಷ್ಟು ಪ್ರಬಲರಾಗಿರುವ ಐರ್ಲೆಂಡ್ ತಂಡ 3 ಪಂದ್ಯಗಳಿಂದ 4 ಪಾಯಿಂಟ್ ಹೊಂದಿದೆ. ಜಿಂಬಾಬ್ವೆ, ಭಾರತ ಮತ್ತು ಪಾಕಿಸ್ತಾನ ವಿರುದ್ಧ 3 ಪಂದ್ಯಗಳು ಬಾಕಿ ಇವೆ. ಇವುಗಳ ಪೈಕಿ 2 ಪಂದ್ಯಗಳಲ್ಲಿ ಗೆದ್ದದ್ದೇ ಆದಲ್ಲಿ ಐರ್ಲೆಂಡ್ ನಾಕೌಟ್ ಪ್ರವೇಶಿಸುವುದು ಖಚಿತ. ಜಿಂಬಾಬ್ವೆ ವಿರುದ್ಧ ಐರ್ಲೆಂಡ್ ಗೆಲ್ಲಬಹುದಾದರೂ ಉಳಿದೆರಡು ಪಂದ್ಯಗಳು ಕಷ್ಟವೇ. ಜೊತೆಗೆ ಅದರ ರನ್'ರೇಟ್ ಕೂಡ ತುಸು ಕಡಿಮೆಯೇ. ಈ ಹಿನ್ನೆಲೆಯಲ್ಲಿ ಐರ್ಲೆಂಡ್'ಗೆ ಶೇ. 60ರಷ್ಟು ಮಾರ್ಕ್ಸ್ ಕೊಡಬಹುದು.
6) ಜಿಂಬಾಬ್ವೆ:
ಜಿಂಬಾಬ್ವೆ ಆಡಿದ 4 ಪಂದ್ಯಗಳಿಂದ 2 ಪಾಯಿಂಟ್ ಕಲೆಹಾಕಿದೆ. ಐರ್ಲೆಂಡ್ ಮತ್ತು ಭಾರತ ವಿರುದ್ಧದ ಪಂದ್ಯಗಳಷ್ಟೇ ಬಾಕಿ ಇವೆ. ಕ್ವಾರ್ಟರ್'ಫೈನಲ್ ಪ್ರವೇಶಿಸುವ ಆಸೆ ಜೀವಂತವಾಗಿರಿಸಿಕೊಳ್ಳಬೇಕಾದರೆ ಎರಡೂ ಪಂದ್ಯಗಳನ್ನ ಜಿಂಬಾಬ್ವೆ ಗೆಲ್ಲಲೇಬೇಕಾಗುತ್ತದೆ. ಈ ಹಿನ್ನೆಲೆಯಲ್ಲಿ ಮುಂದಿನ ಹಂತ ಪ್ರವೇಶಿಸಲು ಜಿಂಬಾಬ್ವೆಗಿರುವ ಸಾಧ್ಯತೆ ಕೇವಲ ಶೇ. 30 ಎನ್ನಬಹುದು.
7) ಯುಎಇ:
ಈ ಟೂರ್ನಿಯಲ್ಲೇ ಅತಿ ದುರ್ಬಲ ತಂಡ ಎನಿಸಿರುವ ಸಂಯುಕ್ತ ಅರಬ್ ಸಂಸ್ಥಾನ ಆಡಿದ ಎಲ್ಲಾ ನಾಲ್ಕು ಪಂದ್ಯಗಳನ್ನ ಸೋತಿದೆ. ದಕ್ಷಿಣ ಆಫ್ರಿಕಾ ಮತ್ತು ವೆಸ್ಟ್ ಇಂಡೀಸ್ ವಿರುದ್ಧದ ಪಂದ್ಯಗಳಷ್ಟೇ ಬಾಕಿ ಇದೆ. ಅವುಗಳನ್ನ ಗೆದ್ದರೂ ಯುಎಇ ಮುಂದಿನ ಹಂತ ಪ್ರವೇಶಿಸುವ ಸಾಧ್ಯತೆ ಕಡಿಮೆಯೇ. ಹೀಗಾಗಿ ಯುಎಇ ಕ್ವಾರ್ಟರ್'ಫೈನಲ್ ಸಾಧ್ಯತೆ ಶೇ.2 ಮಾತ್ರ ಎನ್ನಬಹುದು.