ಆಂಧ್ರ ಶೈಲಿಯಲ್ಲಿ ಚಿಕನ್ ಕರಿ

ಶುಕ್ರವಾರ, 14 ಸೆಪ್ಟಂಬರ್ 2018 (14:19 IST)
ಅಗತ್ಯವಿರುವ ಸಾಮಾಗ್ರಿಗಳು: 
 
ಕೋಳಿ ಮಾಂಸ - 1 ಕೆಜಿ
2 ಮಧ್ಯಮ ಗಾತ್ರದ ಈರುಳ್ಳಿ ಚಿಕ್ಕದಾಗಿ ಹೆಚ್ಚಿದ್ದು
2 ಮಧ್ಯಮ ಗಾತ್ರದ ಟೊಮೇಟೊ, ಚಿಕ್ಕದಾಗಿ ಹೆಚ್ಚಿದ್ದು
¼ ಕಪ್ ಕೊತ್ತಂಬರಿ ಸೊಪ್ಪಿ, ಚಿಕ್ಕದಾಗಿ ಹೆಚ್ಚಿದ್ದು
ಹಸಿರು ಮೆಣಸಿನ ಕಾಯಿ, ಉದ್ದಕ್ಕೆ ಸೀಳಿದ್ದು
ಸಾಸಿವೆ- 1 ಚಮಚ 
ಗೋಡಂಬಿ - ಸ್ವಲ್ಪ
3 ದೊಡ್ಡ ಚಮಚ ಹಸಿಶುಂಠಿ ಮತ್ತು ಬೆಳ್ಳುಳ್ಳಿಯ ಪೇಸ್ಟ್
3 ದೊಡ್ಡ ಚಮಚ ಕೆಂಪುಮೆಣಸಿನ ಪುಡಿ
2 ಲವಂಗ
1 ಏಲಕ್ಕಿ
3 ದೊಡ್ಡಚಮಚ ಮೊಸರು 
¼ ಚಿಕ್ಕ ಚಮಚ ಅರಿಶಿಣ ಪುಡಿ
1 ಚಿಕ್ಕ ಚಮಚ ಗರಂ ಮಸಾಲಾ ಪುಡಿ
5 ದೊಡ್ಡಚಮಚ ಎಣ್ಣೆ 
1 ಕಪ್ ನೀರು
ಉಪ್ಪು
 
ಮಾಡುವ ವಿಧಾನ: 
 
- ಮೊದಲು ಕೋಳಿಯನ್ನು ಚೆನ್ನಾಗಿ ತೊಳೆದು ನಿಮಗೆ ಸೂಕ್ತವೆನಿಸಿದ ಗಾತ್ರದಲ್ಲಿ ತುಂಡು ಮಾಡಿಕೊಳ್ಳಿ. ಒಂದು ಪಾತ್ರೆಯಲ್ಲಿ ಈ ತುಂಡುಗಳನ್ನು ಹಾಕಿ ಮೇಲಿನಿಂದ ಮೊಸರು, ಹಸಿಶುಂಠಿ ಮತ್ತು ಬೆಳ್ಳುಳ್ಳಿಯ ಪೇಸ್ಟ್, ಅರಿಶಿನ, ಉಪ್ಪು, ಕೆಂಪು ಮೆಣಸಿನ ಪುಡಿ ಹಾಕಿ ಚೆನ್ನಾಗಿ ಕಲಕಿ. ಎಲ್ಲಾ ತುಂಡುಗಳು ಈ ಮಿಶ್ರಣದಿಂದ ಆವೃತವಾಗಬೇಕು. ಈ ಪಾತ್ರೆಯನ್ನು ಸುಮಾರು ಒಂದು ಗಂಟೆ ಕಾಲ ಮುಚ್ಚಿಡಿ.
 
- ಒಂದು ಬಾಣಲೆಯನ್ನು ಚಿಕ್ಕ ಉರಿಯ ಮೇಲಿರಿಸಿ ಸಾಸಿವೆ ಹಾಕಿ ಕಂದುಬಣ್ಣಬರುವವರೆಗೆ ಹುರಿಯಿರಿ.
 
- ಹುರಿದ ಸಾಸಿವೆಯನ್ನು ಮಿಕ್ಸಿಯಲ್ಲಿ ಒಣದಾಗಿಯೇ ಇರುವಂತೆ ಪುಡಿಮಾಡಿಕೊಳ್ಳಿ. ಈಗ ಗೋಡಂಬಿಯನ್ನು ಸೇರಿಸಿ ನುಣ್ಣನೆ ಪುಡಿಮಾಡಿ. 
- ಒಂದು ದೊಡ್ಡ ಬಾಣಲೆ ಅಥವಾ ದಪ್ಪತಳದ ಪಾತ್ರೆಯಲ್ಲಿ ಎಣ್ಣೆ ಬಿಸಿಮಾಡಿ ಲವಂಗ, ಏಲಕ್ಕೆ , ಈರುಳ್ಳಿ ಸೇರಿಸಿ ಮಧ್ಯಮ ಉರಿಯಲ್ಲಿ ಚಿನ್ನದ ಬಣ್ಣ ಬರುವಷ್ಟು ಹುರಿಯಿರಿ. 
 
-ಬಳಿಕ ಟೊಮೇಟೋ ಸೇರಿಸಿ ಈರುಳ್ಳಿಯೊಡನೆ ಪೂರ್ಣವಾಗಿ ಬೇಯುವಷ್ಟು ಹುರಿಯಿರಿ.
 
- ಈಗ ಹಸಿಮೆಣಸು, ಗೋಡಂಬಿ ಮತ್ತು ಸಾಸಿವೆ ಪುಡಿ ಸೇರಿಸಿ ಹುರಿಯುವುದನ್ನು ಎಣ್ಣೆ ಬೇರ್ಪಡುವವರೆಗೆ ಮುಂದುವರೆಸಿ.
 
- ಈಗ ಮುಚ್ಚಿಟ್ಟಿದ್ದ ಪಾತ್ರೆಯಿಂದ ಕೋಳಿಯ ತುಂಡುಗಳನ್ನು ಸೇರಿಸಿ ಸುಮಾರು ಐದು ನಿಮಿಷಗಳ ವರೆಗೆ ಹುರಿಯಿರಿ. ನಡುನಡುವೆ ಸೌಟಿನಿಂದ ತಳಹಿಡಿಯದಂತೆ ಅಲುಗಾಡಿಸುತ್ತಿರಿ. 
 
- ಈಗ ಒಂದು ಕಪ್ ನೀರು ಹಾಕಿ ಚೆನ್ನಾಗಿ ಕಲಕಿ ಪಾತ್ರೆಯನ್ನು ಗಟ್ಟಿಯಾಗಿ ಮುಚ್ಚಿ ಸುಮಾರು ಹತ್ತು ನಿಮಿಷಗಳ ಕಾಲ ಮಧ್ಯಮ ಉರಿಯಲ್ಲಿಯೇ ಬೇಯಲು ಬಿಡಿ. 
 
- ಕೋಳಿಯ ತುಂಡುಗಳು ಬೆಂದಿದೆ ಎಂದು ಪ್ರಮಾಣಿಸಿಕೊಂಡ ಬಳಿಕ ಗರಂ ಮಸಾಲಾ ಪುಡಿ ಮತ್ತು ಕೊತ್ತಂಬರಿ ಸೊಪ್ಪನ್ನು ಹಾಕಿ ಪಾತ್ರೆಯನ್ನು ಒಲೆಯಿಂದ ಕೆಳಗಿಳಿಸಿ. ಪಾತ್ರೆಯ ಮುಚ್ಚಳ ಮುಚ್ಚಿದ್ದಂತೆ ಕೊಂಚ ಕಾಲ ಇಡಿ. 
 
- ಈ ಸಾರನ್ನು ಅನ್ನ, ಚಪಾತಿ, ರೋಟಿ ಕುಲ್ಛಾ ಮೊದಲಾದವುಗಳ ಜೊತೆಗೆ ಸೇವಿಸಲು ರುಚಿಯಾಗಿರುತ್ತದೆ.
 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ