ಸ್ವಾದಿಷ್ಠ ಬ್ರೆಡ್ ಉಪ್ಪಿಟ್ಟು

ಗುರುವಾರ, 27 ಸೆಪ್ಟಂಬರ್ 2018 (16:19 IST)
ಬ್ರೆಡ್‌ನಿಂದ ಹಲವಾರು ತಿನಿಸುಗಳನ್ನು ಮಾಡಬಹುದು ಅದರಲ್ಲಿ ಬ್ರೆಡ್ ಉಪ್ಪಿಟ್ಟು ಒಂದು ಇದನ್ನು ಮಾಡುವುದು ತುಂಬಾ ಸರಳ ಮತ್ತು ಬೇಗ ಹಾಗಾಗೀ ಇದು ಬ್ಯಾಚುಲರ್ ಹುಡುಗರ ಮೆಚ್ಚಿನ ತಿಂಡಿ ಎಂದೇ ಹೇಳಬಹುದು.
ಬೇಕಾಗುವ ಸಾಮಗ್ರಿ:
8 ಬ್ರೆಡ್ ಸ್ಲೈಸ್, 
4 ಚಮಚ ಎಣ್ಣೆ,
ಅರ್ಧ ಚಮಚ ಸಾಸಿವೆ
ಕರಿಬೇವು
ಒಂದು ಈರುಳ್ಳಿ
ಒಂದು ಹಸಿಮೆಣಸಿನಕಾಯಿ
ಅರ್ಧ ಚಮಚ ಶುಂಠಿ ಪೇಸ್ಟ್
ಎರಡು ಟೊಮೆಟೋ
ಅರ್ಧ ಚಮಚ ಅರಿಶಿನ ಪುಡಿ
ಒಂದು ಚಮಚ ಅಚ್ಚಖಾರದ ಪುಡಿ
ಅರ್ಧ ಚಮಚ ಸಕ್ಕರೆ
ಉಪ್ಪು
ಅರ್ಧ ಕ್ಯಾಪ್ಸಿಕಂ
4 ಚಮಚ ನೀರು
ಮೂರು ಚಮಚದಷ್ಟು ಹೆಚ್ಚಿದ ಕೊತ್ತಂಬರಿ ಸೊಪ್ಪು.
 
ಮಾಡುವ ವಿಧಾನ:
 
ಬ್ರೆಡ್ ಅನ್ನು ತವಾ ಅಥವಾ ರೋಸ್ಟರ್‌ನಲ್ಲಿ ಹೊಂಬಣ್ಣ ಬರುವವರೆಗೆ ರೋಸ್ಟ್ ಮಾಡಿಕೊಳ್ಳಿ ನಂತರ ಅದನ್ನು ಚಿಕ್ಕ ಚಿಕ್ಕ ತುಂಡುಗಳಾಗಿ ಕತ್ತರಿಸಿ ಪಕ್ಕಕ್ಕಿಡಿ. ಒಂದು ಬಾಣಲೆಯನ್ನು ತೆಗೆದುಕೊಳ್ಳಿ ಅದಕ್ಕೆಎಣ್ಣೆಯನ್ನು ಹಾಕಿ ಬಿಸಿ ಮಾಡಿ. ಅದಕ್ಕೆ ಸಾಸಿವೆ ಮತ್ತು ಕರಿಬೇವು ಹಾಕಿ ಒಗ್ಗರಣೆ ಕೊಡಿ ತದನಂತರ ಹೆಚ್ಚಿದ ಈರುಳ್ಳಿ, ಶುಂಠಿ ಪೇಸ್ಟ್ ಮತ್ತು ಹಸಿಮೆಣಸಿನಕಾಯಿ ಹಾಕಿ. ಅದು ಸ್ವಲ್ಪ ಹುರಿದ ಬಳಿಕ ಟೊಮೆಟೋ ಹಾಕಿ. ಟೊಮೆಟೋ ಮೆತ್ತಗಾಗುವವರೆಗೆ ಹುರಿಯಿರಿ. ನಂತರ ಅರಿಶಿನ, ಅಚ್ಚಖಾರದಪುಡಿ, ಸಕ್ಕರೆ, ರುಚಿಗೆ ತಕ್ಕಷ್ಟು ಉಪ್ಪನ್ನು ಬೆರೆಸಿ. ನಂತರ ಹೆಚ್ಚಿದ ಕ್ಯಾಪ್ಸಿಕಂ ಹಾಕಿ. ಕ್ಯಾಪ್ಸಿಕಂ ಅನ್ನು ಅತಿಯಾಗಿ ಬೇಯಿಸಬೇಡಿ. 3 ಚಮಚದಷ್ಟು ನೀರು ಹಾಕಿ ಎಲ್ಲವನ್ನೂ ಮತ್ತೊಮ್ಮೆ ಮಿಕ್ಸ್ ಮಾಡಿ. ನಂತರ ರೋಸ್ಟ್ ಮಾಡಿಟ್ಟ ಬ್ರೆಡ್ ತುಣುಕುಗಳನ್ನು ಹಾಕಿ ನಿಧಾನವಾಗಿ ಕೈಯ್ಯಾಡಿಸಿ. ಸಣ್ಣ ಉರಿಯಲ್ಲಿ 2-3 ನಿಮಿಷ ಬೇಯಿಸಿ ಅದಕ್ಕೆ ಕೊತ್ತಂಬರಿ ಸೊಪ್ಪಿನಿಂದ ಅಲಂಕರಿಸಿದರೆ ರುಚಿಕರವಾದ ಬ್ರೆಡ್ ಉಪ್ಪಿಟ್ಟು ರೆಡಿ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ