ಬದನೆಕಾಯಿ ಗ್ರೇವಿಯನ್ನು ಮಾಡಿ ನೋಡಿ...!!

ನಾಗಶ್ರೀ ಭಟ್

ಗುರುವಾರ, 25 ಜನವರಿ 2018 (16:07 IST)
ಚಿಕ್ಕ ಚಿಕ್ಕ ಬದನೆಕಾಯಿಗಳನ್ನು ಬಳಸಿಕೊಂಡು ಬದನೆಕಾಯಿಯ ಎಣ್ಣಗಾಯಿಯ ಹಾಗೆಯೇ ಗ್ರೇವಿ ಮಾಡಬಹುದು. ಇದು ಅನ್ನ, ರೊಟ್ಟಿ, ದೋಸೆ, ಚಪಾತಿಗಳ ಜೊತೆ ರುಚಿಯಾಗಿರುತ್ತದೆ. ಸ್ವಲ್ಪ ಸಮಯ ಮತ್ತು ಎಲ್ಲಾ ಸಾಮಗ್ರಿಗಳಿದ್ದಾಗ ನೀವೂ ಇದನ್ನೊಮ್ಮೆ ಮಾಡಿ ಸವಿಯಿರಿ. ಬದನೆಕಾಯಿ ಗ್ರೇವಿ ಮಾಡುವ ವಿಧಾನವನ್ನು ತಿಳಿದುಕೊಳ್ಳಲು ಈ ಲೇಖನವನ್ನು ಓದಿ.
 
ಬೇಕಾಗುವ ಸಾಮಗ್ರಿಗಳು:
 
ಚಿಕ್ಕ ಬದನೆಕಾಯಿ - 7-8
ಕಾಯಿತುರಿ - 1/2 ಕಪ್
ಮೆಂತೆ - 1/2 ಚಮಚ
ಜೀರಿಗೆ - 2 ಚಮಚ
ದನಿಯಾ - 2 ಚಮಚ
ಶೇಂಗಾ - 1/4 ಕಪ್
ಬಿಳಿ ಎಳ್ಳು - 1 ಚಮಚ
ಗಸಗಸೆ - 1 ಚಮಚ
ಲವಂಗದ ಎಲೆ - 1
ಸಾಸಿವೆ - 1 ಚಮಚ
ಕರಿಬೇವು - 2 ಎಸಳು
ಹಸಿಮೆಣಸು - 3
ಶುಂಠಿ ಬೆಳ್ಳುಳ್ಳಿ ಪೇಸ್ಟ್ - 2 ಚಮಚ
ಈರುಳ್ಳಿ - 2
ಟೊಮೆಟೋ - 2
ದನಿಯಾ ಪುಡಿ - 1/2 ಚಮಚ
ಜೀರಿಗೆ ಪುಡಿ - 1/2 ಚಮಚ
ಅಚ್ಚಖಾರದ ಪುಡಿ - 1 ಚಮಚ
ಅರಿಶಿಣ - 1/2 ಚಮಚ
ಉಪ್ಪು - ರುಚಿಗೆ
ಎಣ್ಣೆ - ಕರಿಯಲು
ಹುಣಿಸೆಹಣ್ಣು - 1 ನಿಂಬೆ ಗಾತ್ರ
ಮಾಡುವ ವಿಧಾನ:
 
ಬದನೆಕಾಯಿಗಳನ್ನು ಸೀಳಿ ಕಾದ ಎಣ್ಣೆಯಲ್ಲಿ ಕರಿದಿಟ್ಟುಕೊಳ್ಳಿ. ಈರುಳ್ಳಿ ಮತ್ತು ಟೊಮೆಟೋವನ್ನು ಹೆಚ್ಚಿ ಮಿಕ್ಸಿಗೆ ಹಾಕಿ ರುಬ್ಬಿಡಿ. ಹುಣಿಸೆ ಹಣ್ಣನ್ನು ಸ್ವಲ್ಪ ನೀರಲ್ಲಿ ನೆನೆಸಿಟ್ಟು ರಸವನ್ನು ಬೇರ್ಪಡಿಸಿಕೊಳ್ಳಿ. ಒಂದು ಪ್ಯಾನ್ ತೆಗೆದುಕೊಂಡು 2-3 ಚಮಚ ಎಣ್ಣೆಯನ್ನು ಹಾಕಿ ಅದು ಕಾದಾಗ ಮೆಂತೆ, ದನಿಯಾ, ಜೀರಿಗೆ ಮತ್ತು ಶೇಂಗಾವನ್ನು ಹಾಕಿ 2 ನಿಮಿಷ ಹುರಿಯಿರಿ. ನಂತರ ಎಳ್ಳು, ಕಾಯಿತುರಿ ಮತ್ತು ಗಸಗಸೆಯನ್ನು ಸೇರಿಸಿ ಇನ್ನೊಮ್ಮೆ ಹುರಿಯಿರಿ. ಈ ಹುರಿದ ಸಾಮಗ್ರಿಗಳನ್ನು ಮಿಕ್ಸಿ ಜಾರ್‌ಗೆ ಹಾಕಿ ಸ್ವಲ್ಪ ನೀರನ್ನು ಸೇರಿಸಿ ನುಣ್ಣಗೆ ರುಬ್ಬಿಕೊಳ್ಳಿ.
 
ಪ್ಯಾನ್‌ನಲ್ಲಿ 2-3 ಚಮಚ ಎಣ್ಣೆಯನ್ನು ಹಾಕಿ ಅದು ಕಾದಾಗ ಅದಕ್ಕೆ ಲವಂಗದ ಎಲೆ, ಸಾಸಿವೆಯನ್ನು ಹಾಕಿ ಹುರಿದು ನಂತರ ಸಿಗಿದ ಹಸಿಮೆಣಸು ಮತ್ತು ಕರಿಬೇವನ್ನು ಹಾಕಿ ಹುರಿಯಿರಿ. ಶುಂಠಿ ಮತ್ತು ಬೆಳ್ಳುಳ್ಳಿ ಪೇಸ್ಟ್ ಅನ್ನು ಸೇರಿಸಿ ಹುರಿದು ಈಗ ರುಬ್ಬಿದ ಈರುಳ್ಳಿ ಮತ್ತು ಟೊಮೆಟೋವನ್ನು ಸೇರಿಸಿ 2 ನಿಮಿಷ ಚೆನ್ನಾಗಿ ಮಿಕ್ಸ್ ಮಾಡುತ್ತಿರಿ. ನಂತರ ಇದಕ್ಕೆ ಈ ಮೊದಲೇ ರುಬ್ಬಿದ ಮಿಶ್ರಣ, ಅರಿಶಿಣ, ದನಿಯಾ ಪುಡಿ, ಜೀರಿಗೆ ಪುಡಿ, ಅಚ್ಚಖಾರದ ಪುಡಿ, ಹುಣಿಸೆಹಣ್ಣಿನ ರಸ ಮತ್ತು ರುಚಿಗೆ ತಕ್ಕಷ್ಟು ಉಪ್ಪನ್ನು ಸೇರಿಸಿ 1 ನಿಮಿಷ ಚೆನ್ನಾಗಿ ಮಿಕ್ಸ್ ಮಾಡುತ್ತಿರಿ. ನಂತರ ಅದಕ್ಕೆ 1 ಲೋಟ ನೀರನ್ನು ಸೇರಿಸಿ ಇನ್ನೊಮ್ಮೆ ಮಿಕ್ಸ್ ಮಾಡಿ ಅದರಲ್ಲಿ ಕರಿದ ಬದನೆಕಾಯಿಗಳನ್ನು ಹಾಕಿ ಮುಚ್ಚಿ 10-15 ನಿಮಿಷ ಬೇಯಿಸಿದರೆ ಬದನೆಕಾಯಿ ಗ್ರೇವಿ ರೆಡಿ. ನೀವೂ ಒಮ್ಮೆ ಮಾಡಿ ನೋಡಿ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ