ದೀಪಾವಳಿಗೆ ಸ್ಪೆಷಲ್ ಹಾಲುಬಾಯಿಗಳು

ಬುಧವಾರ, 14 ನವೆಂಬರ್ 2018 (15:25 IST)
ಹಬ್ಬಎಂದರೆ ಸಡಗರ..ಅದರಲ್ಲಿಯೂ ದೀಪಾವಳಿಯು ಎಲ್ಲಾ ಕಡೆ ವಿಧ ವಿಧವಾಗಿ ಆಚರಿಸುವ ಹಬ್ಬ. ನಾನಾ ಬಗೆಯ ತಿಂಡಿ ತಿನಿಸುಗಳು, ಉಡುಗೊರೆಗಳು, ಬಂಧು-ಬಾಂಧವರ ಆಗಮನ, ಪಟಾಕಿಗಳು, ಹೀಗೆ ಒಂದೇ ಎರಡೇ.. ಅದರಲ್ಲಿಯೂ ಸಿಹಿತಿಂಡಿಗಳ ಪೈಕಿ ಹಾಲುಬಾಯಿಯನ್ನು ಅತ್ಯಂತ ಸುಲಭವಾಗಿ ತಯಾರಿಸಬಹುದು. ಅವು ತಿನ್ನಲು ರುಚಿಯಾಗಿಯೂ ಇರುತ್ತದೆ. ನೀವೂ ಸಹ ಈ ದೀಪಾವಳಿಗೆ ಹಾಲುಬಾಯಿಯನ್ನು ಮಾಡಿಕೊಂಡು ಸವಿಯಿರಿ.. 
1) ಅಕ್ಕಿ ಹಾಲುಬಾಯಿ
 
ಬೇಕಾಗುವ ಸಾಮಗ್ರಿಗಳು :
 
* ಅಕ್ಕಿ 2 ಕಪ್
* ಬೆಲ್ಲದ ಪುಡಿ 3 ಕಪ್
* ಕಾಯಿತುರಿ 1 ಕಪ್
* ಏಲಕ್ಕಿ ಪುಡಿ 1 ಚಮಚ
* ಉಪ್ಪು 2 ಚಿಟಿಕೆ
 
ತಯಾರಿಸುವ ವಿಧಾನ : 
 
ಮೊದಲು ಅಕ್ಕಿಯನ್ನು ಅರ್ಧ ಗಂಟೆ ನೀರಿನಲ್ಲಿ ನೆನೆಸಿ, ತೊಳೆದು ನೀರನ್ನು ಬಸಿದು ಇಟ್ಟುಕೊಳ್ಳಬೇಕು. ನಂತರ ಕಾಯಿತುರಿ, ಬೆಲ್ಲ, ಉಪ್ಪು ಹಾಕಿ ದೋಸೆ ಹಿಟ್ಟಿಗಿಂತಲೂ ತೆಳ್ಳಗೆ, ನುಣ್ಣಗೆ ರುಬ್ಬಿಕೊಂಡು ಒಂದು ಬಾಣಲೆಯಲ್ಲಿ ಹಾಕಿ ಅದನ್ನು ಸಣ್ಣ ಉರಿಯಲ್ಲಿ ಗೊಟಾಯಿಸುತ್ತಾ ಇರಬೇಕು. ಅದು ಗಟ್ಟಿಯಾಗುತ್ತಾ ಬರುವಾಗ ಏಲಕ್ಕಿ ಪುಡಿಯನ್ನು ಹಾಕಿ ಕೆಳಗಿಳಿಸಬೇಕು. ನಂತರ ತುಪ್ಪ ಸವರಿದ ತಟ್ಟೆಗೆ ಅಥವಾ ಬಾಳೆ ಎಲೆಯ ಮೇಲೆ ಹರಡಿ ಬೇಕಾದ ಆಕಾರಕ್ಕೆ ಕತ್ತರಿಸಿದರೆ ಅಕ್ಕಿ ಹಾಲುಬಾಯಿ ಸವಿಯಲು ಸಿದ್ಧ, 
2) ಚಿರೋಟಿ ರವೆಯ ಹಾಲುಬಾಯಿ 
 
 ತಯಾರಿಸಲು ಬೇಕಾಗುವ ಸಾಮಗ್ರಿಗಳು :
 
* ಚಿರೋಟಿ ರವೆ 1 ಕಪ್
* ಬೆಲ್ಲದ ಪುಡಿ ಒಂದೂವರೆ ಕಪ್
* ತೆಂಗಿನಕಾಯಿ ತುರಿ 1 ಕಪ್
* ತುಪ್ಪ 3/4 ಕಪ್
* ಏಲಕ್ಕಿ ಸ್ವಲ್ಪ
* ಲವಂಗ 
 
ತಯಾರಿಸುವ ವಿಧಾನ :
 
ಮೊದಲು ರವೆಯನ್ನು 1 ಗಂಟೆಗಳ ಕಾಲ ನೆನೆಸಿಡಬೇಕು. ನಂತಕ ಮಿಕ್ಸಿ ಜಾರಿಗೆ ನೆನೆಸಿಕೊಂಡ ರವೆ, ತೆಂಗಿನಕಾಯಿ ತುರಿ, ಏಲಕ್ಕಿ, ಲವಂಗ ಹಾಕಿ ನುಣ್ಣಗೆ ರುಬ್ಬಬೇಕು. ನಂತರ ಬಾಣಲೆಯಲ್ಲಿ ಬೆಲ್ಲವನ್ನು 1/4 ಕಪ್ ನೀರನ್ನು ಹಾಕಿ ಕರಗಿಸಿಕೊಂಡು ಸೋಸಿಕೊಳ್ಳಬೇಕು. ನಂತರ ಅದನ್ನು ಈಗಾಗಲೇ ರುಬ್ಬಿಕೊಂಡ ಮಿಶ್ರಣಕ್ಕೆ ಸೇರಿಸಬೇಕು. ನಂತರ ಹಿಟ್ಟಿಗೆ 4 ಕಪ್ ನೀರನ್ನು ಸೇರಿಸಿ ಕರಗಿಸಿಕೊಂಡ ಬೆಲ್ಲವನ್ನು ಹಾಕಿ ಮಧ್ಯಮ ಉರಿಯಲ್ಲಿ ತಿರುವುತ್ತಾ ಇರಬೇಕು. ಅದು 10 ರಿಂದ 15 ನಿಮಿಷಕ್ಕೆ ತಳ ಬಿಟ್ಟು ಬರುತ್ತದೆ. ಇದನ್ನು ಬೇಕಾದ ಆಕಾರಕ್ಕೆ ಕತ್ತರಿಸಿಕೊಂಡರೆ ರುಚಿಯಾದ ಚಿರೋಟಿ ರವೆಯ ಹಾಲುಬಾಯಿ ಸವಿಯಲು ಸಿದ್ಧ. 
 
3) ರಾಗಿ ಹಾಲುಬಾಯಿ 
 
ತಯಾರಿಸಲು ಬೇಕಾಗುವ ಸಾಮಗ್ರಿಗಳು :
* ರಾಗಿ 1 ಕಪ್
* ತೆಂಗಿನತುರಿ 1 ಕಪ್
* ಬೆಲ್ಲ ಒಂದೂವರೆ ಕಪ್
* ಏಲಕ್ಕಿ ಪುಡಿ 1/2 ಚಮಚ
* ತುಪ್ಪ 1/2 ಕಪ್
* ನೀರು 4 ಕಪ್
* ಚಿಟಿಕೆಯಷ್ಟು ಉಪ್ಪು
 
ತಯಾರಿಸುವ ವಿಧಾನ :
 
ಮೊದಲು ರಾಗಿಯನ್ನು ಬಿಸಿ ನೀರಿನಲ್ಲಿ 4 ಗಂಟೆ ನೆನೆಸಿಡಬೇಕು. ಅದನ್ನು ರಾತ್ರಿ ನೆನೆಸಿ ಬೆಳಿಗ್ಗೆ ರುಬ್ಬಿಕೊಳ್ಳಲೂಬಹುದು. ನಂತರ ಬಟ್ಟೆಯಲ್ಲಿ ಅಥವಾ ಸಣ್ಣ ಕಣ್ಣಿನ ಜರಡಿಯಲ್ಲಿ ಸೋಸಿಕೊಳ್ಳಬೇಕು. ನಂತರ ಅದನ್ನು ಗಟ್ಟಿಯಾಗಿ ಹಿಂಡಿ ಚರಟವನ್ನು ತೆಗೆದು ರಾಗಿ ಹಾಲನ್ನು ಮಾತ್ರ ಉಪಯೋಗಿಸಬೇಕು. ನಂತರ ಮಿಕ್ಸಿಯಲ್ಲಿ ತೆಂಗಿನಕಾಯಿ ತುರಿ, ಏಲಕ್ಕಿ ಪುಡಿ, ನೀರನ್ನು ಹಾಕಿ ನುಣ್ಣಗೆ ರುಬ್ಬಿಕೊಳ್ಳಬೇಕು. ನಂತರ ರುಬ್ಬಿಕೊಂಡ ಮಿಶ್ರಣವನ್ನು ರಾಗಿ ಹಾಲಿಗೆ ಸೇರಿಸಬೇಕು. ನಂತರ ದಪ್ಪ ತಳದ ಪಾತ್ರೆಯನ್ನು ತೆಗೆದುಕೊಂಡು ರಾಗಿ ಹಾಲು, ನುಣ್ಣಗೆ ರುಬ್ಬಿದ ತೆಂಗಿನ ತುರಿ, ಬೆಲ್ಲ, ಉಪ್ಪು ಮತ್ತು ತುಪ್ಪವನ್ನು ಹಾಕಿ ಮಧ್ಯಮ ಉರಿಯಲ್ಲಿ ಒಲೆಯ ಮೇಲಿಟ್ಟು ಕೈಯಾಡಿಸುತ್ತಾ ಇರಬೇಕು. ಇದು ಬಾಣಲೆಯಿಂದ ತಳ ಬಿಟ್ಟು ಬಂದಾಗ ತುಪ್ಪ ಸವರಿದ ತಟ್ಟೆಗೆ ಹಾಕಿ ಸಮತಟ್ಟಾಗಿ ತಟ್ಟಬೇಕು. ನಂತರ ಅದು ಆರಿದ ನಂತರ ಬೇಕಾದ ಆಕಾರಕ್ಕೆ ಕತ್ತರಿಸಿದರೆ ರಾಗಿ ಹಾಲುಬಾಯಿಯು ಸವಿಯಲು ಸಿದ್ಧ. ಈ ಹಾಲುಬಾಯಿಯನ್ನು ತಿನ್ನುವಾಗ ಹಾಲುಬಾಯಿಯ ಮೇಲೆ ತುಪ್ಪವನ್ನು ಹಾಕಿ ತಿಂದರೆ ಇನ್ನೂ ರುಚಿ ಜಾಸ್ತಿ. 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ