ರುಚಿ ರುಚಿಯಾದ ಆಮ್ಲೇಟ್ ಗ್ರೇವಿ

ಗುರುವಾರ, 27 ಸೆಪ್ಟಂಬರ್ 2018 (19:07 IST)
ನಾವು ದಿನನಿತ್ಯ ಬಳಸುವ ಆಹಾರಗಳಲ್ಲಿ ಸಾಮಾನ್ಯವಾಗಿ ಮೊಟ್ಟೆಯು ಒಂದು. ಮೊಟ್ಟೆಯಿಂದ ಹಲವು ರೀತಿಯ ಪುಡ್‌ ಅನ್ನು ತಯಾರಿಸಬಹುದು ಅದರಲ್ಲೂ ಮೊಟ್ಟೆ ಪ್ರಿಯರಿಗೆ ಈ ಆಮ್ಲೇಟ್ ಗ್ರೇವಿ ತುಂಬಾ ರುಚಿಸುವುದರಲ್ಲಿ ಎರಡು ಮಾತಿಲ್ಲ ಅದನ್ನು ಹೇಗೆ ಮಾಡುವುದು ಎಂಬುದು ಇಲ್ಲಿದೆ ನೀವೂ ಒಮ್ಮೆ ಟ್ರೈ ಮಾಡಿ
ಬೇಕಾಗುವ ಸಾಮಗ್ರಿಗಳು:
* ಮೊಟ್ಟೆ 4
* ಎಣ್ಣೆ 3 ಚಮಚ
* ಈರುಳ್ಳಿ 2
* ಖಾರದ ಪುಡಿ 1 ರಿಂದ 1.5 ಚಮಚ
* ಹಸಿಮೆಣಸಿನಕಾಯಿ 2
* ಶುಂಠಿ-ಬೆಳ್ಳುಳ್ಳಿ ಪೇಸ್ಟ್ 1 ಚಮಚ
* ಅರಿಶಿನ ಪುಡಿ 1/2 ಚಮಚ
* ಕೊತ್ತಂಬರಿ ಪುಡಿ 2 ಚಮಚ
* ಜೀರಿಗೆ ಪುಡಿ 1 ಚಮಚ
* ಟೊಮೆಟೊ ಪೇಸ್ಟ್ 1/2 ಕಪ್ (ಅಂದರೆ 2 ರಿಂದ 3 ಟೊಮೆಟೊ)
* ತೆಂಗಿನ ಹಾಲು 1 ಕಪ್
* ಗರಂ ಮಸಾಲಾ 1/2 ಚಮಚ
* ಕೊತ್ತಂಬರಿ ಸೊಪ್ಪು ಸ್ವಲ್ಪ
* ಸಾಸಿವೆ
* ಕರಿಬೇವಿನ ಎಲೆ
* ರುಚಿಗೆ ತಕ್ಕಷ್ಟು ಉಪ್ಪು
 
ತಯಾರಿಸುವ ವಿಧಾನ:
ಮೊದಲು ಒಂದು ಬಟ್ಟಲಲ್ಲಿ ಮೊಟ್ಟೆಯನ್ನು ಒಡೆದು ಹಾಕಿ ಅದಕ್ಕೆ 1 ಈರುಳ್ಳಿ, ಹಸಿಮೆಣಸಿನಕಾಯಿ ಮತ್ತು ಸ್ವಲ್ಪ ಉಪ್ಪು ಹಾಕಿ ಚೆನ್ನಾಗಿ ಕದಡಿ ಆಮ್ಲೇಟ್ ಮಾಡಬೇಕು. ನಂತರ ಅದನ್ನು ಚಿಕ್ಕ ಚಿಕ್ಕ ತುಂಡುಗಳಾಗಿ ಕತ್ತರಿಸಿಡಬೇಕು. ನಂತರ ಒಂದು ಪ್ಯಾನ್‌ನಲ್ಲಿ 2 ಚಮಚ ಎಣ್ಣೆ ಹಾಕಿ ಅದು ಬಿಸಿಯಾದಾಗ ಸಾಸಿವೆ ಮತ್ತು ಕರಿಬೇವಿನ ಎಲೆ ಮತ್ತು ಈರುಳ್ಳಿ ಹಾಕಿ ಕಂದು ಬಣ್ಣ ಬರುವವರೆಗೆ ಫ್ರೈ ಮಾಡಬೇಕು. ನಂತರ ಈರುಳ್ಳಿ ಬೆಳ್ಳುಳ್ಳಿ ಪೇಸ್ಟ್ ಹಾಕಿ 1 ನಿಮಿಷ ಫ್ರೈ ಮಾಡಬೇಕು.

ನಂತರ ಅರ್ಧ ಕಪ್ ಟೊಮೆಟೊ ಪೇಸ್ಟ್ ಹಾಕಿ 5 ನಿಮಿಷ ಸೌಟಿನಿಂದ ಆಡಿಸುತ್ತಾ ಅದನ್ನು ಬಿಸಿ ಮಾಡಬೇಕು. ನಂತರ ಜೀರಿಗೆಪುಡಿ, ಕೊತ್ತಂಬರಿ ಪುಡಿ, ಗರಂ ಮಸಾಲಾ, ಅರಿಶಿನ ಪುಡಿ, ಖಾರದ ಪುಡಿ ಹಾಕಿ 2 ನಿಮಿಷ ಫ್ರೈ ಮಾಡಬೇಕು. ನಂತರ ತೆಂಗಿನ ಹಾಲು ಮತ್ತು ರುಚಿಗೆ ತಕ್ಕಷ್ಟು ಉಪ್ಪನ್ನು ಹಾಕಿ ಅದು ಗಟ್ಟಿ ಗ್ರೇವಿಯಾಗುವವರೆಗೂ ಕುದಿಸಬೇಕು.

ನಂತರ ಮೊದಲೇ ಕತ್ತರಿಸಿಟ್ಟ ಆಮ್ಲೆಟ್ ಹಾಕಿ ಮಿಕ್ಸ್ ಮಾಡಬೇಕು. ಇದಕ್ಕೆ ಕೊತ್ತಂಬರಿ ಸೊಪ್ಪಿನಿಂದ ಅಲಂಕಾರ ಮಾಡಿದರೆ ರುಚಿ ರುಚಿಯಾದ ಆಮ್ಲೇಟ್ ಗ್ರೇವಿ ಸವಿಯಲು ಸಿದ್ಧ ಇದು ಅನ್ನ, ರೊಟ್ಟಿ, ಚಪಾತಿಯ ಜೊತೆ ತಿನ್ನಲು ಬಹಳ ರುಚಿಯಾಗಿರುತ್ತದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ