ಸಿಹಿ ಪರೋಟಾ ಸವಿದು ನೋಡಿ..!!

ನಾಗಶ್ರೀ ಭಟ್

ಮಂಗಳವಾರ, 13 ಫೆಬ್ರವರಿ 2018 (16:17 IST)
ದಿನವೂ ಒಂದೇ ರೀತಿಯ ಚಪಾತಿ, ಪರೋಟಾ, ದೋಸೆಗಳನ್ನು ತಿಂದು ಬೇಸರವಾದರೆ ಅಥವಾ ಬೆಳಿಗ್ಗೆಯೇ ಸಿಹಿಯನ್ನು ತಿನ್ನಬೇಕೆನಿಸಿದರೆ ಈ ಸಿಹಿ ಪರೋಟಾವನ್ನು ಮಾಡಿನೋಡಿ. ಇದರಲ್ಲಿ ಅತಿಯಾದ ಸಿಹಿಯೂ ಇರುವುದಿಲ್ಲ. ಪಿಸ್ತಾ, ಬಾದಾಮಿ, ಗೋಡಂಬಿಗಳನ್ನು ಬಳಸುವುದರಿಂದ ರುಚಿಯಾಗಿಯೂ ಇರುತ್ತದೆ ಮತ್ತು ಹೆಚ್ಚಿನ ಪೌಷ್ಟಿಕಾಂಶಗಳೂ ಲಭ್ಯವಿರುತ್ತವೆ. ಆದ್ದರಿಂದ ಅಪರೂಪಕ್ಕೊಮ್ಮೆ ಈ ಸಿಹಿ ಪರೋಟಾವನ್ನು ಮಾಡಿ ಸವಿಯಬಹುದು. ಈ ಸಿಹಿ ಪರೋಟಾವನ್ನು ಮಾಡುವ ಸರಳ ವಿಧಾನವನ್ನು ತಿಳಿದುಕೊಳ್ಳಲು ಈ ಲೇಖನವನ್ನು ಓದಿ.
ಬೇಕಾಗುವ ಸಾಮಗ್ರಿಗಳು:
 
ಪಿಸ್ತಾ - 2/6 ಕಪ್
ಗೋಡಂಬಿ - 2/6 ಕಪ್
ಬಾದಾಮಿ - 2/6
ಏಲಕ್ಕಿ - 3-4
ಕಾಯಿತುರಿ - 1/4 ಕಪ್
ಸಕ್ಕರೆ - 1/2 ಕಪ್
ಗೋಧಿ ಹಿಟ್ಟು - 2 ಕಪ್
ತುಪ್ಪ - ಸ್ವಲ್ಪ
ಉಪ್ಪು - ರುಚಿಗೆ
 
ಮಾಡುವ ವಿಧಾನ:
 
ಮೊದಲಿಗೆ ಗೋಧಿಹಿಟ್ಟನ್ನು ಒಂದು ಬೌಲ್‌ಗೆ ಹಾಕಿ ಅದಕ್ಕೆ ರುಚಿಗೆತಕ್ಕಷ್ಟು ಉಪ್ಪು, 2 ಚಮಚ ಸಕ್ಕರೆ, 1 ಚಮಚ ತುಪ್ಪ ಮತ್ತು ಅಗತ್ಯವಿರುವಷ್ಟು ನೀರನ್ನು ಹಾಕಿ ಚಪಾತಿ ಹಿಟ್ಟಿನ ಹದಕ್ಕೆ ಬರುವಂತೆ ಚೆನ್ನಾಗಿ ಕಲಸಿ. ಕಲಸಿದ ಹಿಟ್ಟನ್ನು 1 ಗಂಟೆ ಹಾಗೆಯೇ ಬಿಡಿ.
 
ಪಿಸ್ತಾ, ಬಾದಾಮಿ, ಗೋಡಂಬಿ, ಕಾಯಿತುರಿ, ಏಲಕ್ಕಿ ಮತ್ತು ಸಕ್ಕರೆಯನ್ನು ಮಿಕ್ಸಿಜಾರ್‌ನಲ್ಲಿ ಹಾಕಿ ತರಿತರಿಯಾಗಿ ರುಬ್ಬಿಕೊಳ್ಳಿ. ಕಲಸಿಟ್ಟ ಗೋಧಿಹಿಟ್ಟನ್ನು ಇನ್ನೊಮ್ಮೆ ಚೆನ್ನಾಗಿ ನಾದಿಕೊಂಡು ಮಧ್ಯಮಗಾತ್ರದ ಉಂಡೆಗಳನ್ನಾಗಿ ಮಾಡಿಕೊಳ್ಳಿ. ನಂತರ ಒಂದೊಂದೇ ಉಂಡೆಗಯನ್ನು ತೆಗೆದುಕೊಂಡು ಸ್ವಲ್ಪ ಲಟ್ಟಿಸಿ ಅದರ ಮಧ್ಯ 2 ಚಮಚ ರುಬ್ಬಿದ ಮಿಶ್ರಣವನ್ನು ಹಾಕಿ ತುಂಬಿಕೊಳ್ಳಿ. ಹೀಗೆ ಹೂರಣವನ್ನು ತುಂಬಿದ ಉಂಡೆಗಳನ್ನು ಸ್ವಲ್ಪ ಗೋಧಿಹಿಟ್ಟಿನಲ್ಲಿ ಹೊರಳಿಸಿ ಚಪಾತಿಯಂತೆ ಲಟ್ಟಿಸಿ. ನಂತರ ಅವುಗಳನ್ನು ಒಂದೊಂದಾಗಿ ಕಾದ ತವಾದ ಮೇಲೆ ಹಾಕಿ 1 ಚಮಚ ತುಪ್ಪವನ್ನು ಸವರಿ ಎರಡೂ ಕಡೆ ಕೆಂಪಗಾಗುವವರೆಗೆ ಚೆನ್ನಾಗಿ ಬೇಯಿಸಿದರೆ ಸಿಯಾದ ಪರೋಟಾ ರೆಡಿ. ನೀವೂ ಒಮ್ಮೆ ಮಾಡಿ ಸವಿಯಿರಿ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ