ರುಚಿಯಾದ ಖರ್ಜೂರದ ಲಡ್ಡುಗಳು...!!

ಗುರುವಾರ, 23 ಆಗಸ್ಟ್ 2018 (18:19 IST)
ನೀವು ಶೀಘ್ರವಾಗಿ ಮತ್ತು ಕೆಲವೇ ಸಾಮಗ್ರಿಗಳೊಂದಿಗೆ ಮಾಡಬಹುದಾದ ಸಿಹಿ ಖರ್ಜೂರದ ಲಡ್ಡು. ಖರ್ಜೂರ ಆರೋಗ್ಯಕರವಾಗಿ ದೇಹದ ತೂಕವನ್ನು ಹೆಚ್ಚಿಸುತ್ತದೆ ಮತ್ತು ಇದು ಹಲವಾರು ವ್ಯಾಧಿಗಳನ್ನು ತಡೆಯುತ್ತದೆ. ಇದು ಕ್ಯಾಲ್ಶಿಯಂ, ಪೊಟಾಶಿಯಂ ಮತ್ತು ಸಲ್ಫರ್ ಸೇರಿದಂತೆ ಅನೇಕ ಅಂಶಗಳನ್ನು ಹೊಂದಿದ್ದು ಆರೋಗ್ಯಕ್ಕೆ ಬಹಳ ಉತ್ತಮವಾದುದಾಗಿದೆ.

ನಾವು ಖರ್ಜೂರದ ಲಡ್ಡುವಿನಲ್ಲಿ ಬಾದಾಮಿ, ಗೋಡಂಬಿ, ಪಿಸ್ತಾಗಳನ್ನು ಸೇರಿಸುವುದರಿಂದ ಅದು ಆರೋಗ್ಯಕ್ಕೆ ಬಹಳ ಉತ್ತಮವಾದುದು ಹಾಗೂ ಚಿಕ್ಕ ಮಕ್ಕಳಿಗೆ ಚಾಕಲೇಟ್‌ಗಳ ಬದಲು ಬಹಳ ಸೂಕ್ತವಾದ ತಿಂಡಿ. ಖರ್ಜೂರದ ಲಡ್ಡು ಮಾಡುವುದು ಹೇಗೆ ಎಂಬುದನ್ನು ತಿಳಿದುಕೊಳ್ಳಲು ನೀವು ಬಯಸುವುದಾದರೆ ಈ ಲೇಖನವನ್ನು ಓದಿ.
 
ಬೇಕಾಗುವ ಸಾಮಗ್ರಿಗಳು:
 
ಖರ್ಜೂರ - 2 ಕಪ್
ತುಪ್ಪ - 3-4 ಚಮಚ
ಗೋಡಂಬಿ - 1/4 ಕಪ್
ಬಾದಾಮಿ - 1/4 ಕಪ್
ಪಿಸ್ತಾ - 1/4 ಕಪ್
ಒಣ ದ್ರಾಕ್ಷಿ - 5-6 ಚಮಚ
ಕೊಬ್ಬರಿ - 5-6 ಚಮಚ
ಕೊಬ್ಬರಿ ತುರಿ - ಸ್ಪಲ್ಪ
 
ಮಾಡುವ ವಿಧಾನ:
 
* ಖರ್ಜೂರದ ಬೀಜವನ್ನು ತೆಗೆದು ತರಿತರಿಯಾಗಿ ರುಬ್ಬಿಕೊಳ್ಳಿ.
 
* ಬಾದಾಮಿ, ಗೋಡಂಬಿ, ಪಿಸ್ತಾ ಮತ್ತು ಕೊಬ್ಬರಿಯನ್ನು ಚಿಕ್ಕ ಚಿಕ್ಕ ಚೂರುಗಳನ್ನಾಗಿ ಮಾಡಿಕೊಳ್ಳಿ.
 
* ಒಂದು ಬಾಣಲೆಗೆ 3-4 ಚಮಚ ತುಪ್ಪವನ್ನು ಹಾಕಿ ಅದು ಬಿಸಿಯಾದಾಗ ಬಾದಾಮಿ, ಪಿಸ್ತಾ, ಗೋಡಂಬಿ ಮತ್ತು ಕೊಬ್ಬರಿ ಚೂರುಗಳನ್ನು ಹಾಕಿ ಹುರಿಯಿರಿ. ಅದು ಚೆನ್ನಾಗಿ ಹುರಿದು ಹೊಂಬಣ್ಣ ಬಂದಾಗ ಅದಕ್ಕೆ ಖರ್ಜೂರವನ್ನು ಸೇರಿಸಿ ಚೆನ್ನಾಗಿ ಮಿಕ್ಸ್ ಮಾಡಿ.
 
* ಹೀಗೆ ಖರ್ಜೂರವನ್ನು ಚೆನ್ನಾಗಿ ಮಿಕ್ಸ್ ಮಾಡಿದ ನಂತರ ಸ್ಟೌ ಆಫ್ ಮಾಡಿ. ಐದು ನಿಮಿಷ ಬಿಟ್ಟು ಅದನ್ನು ಚಿಕ್ಕ ಚಿಕ್ಕ ಉಂಡೆಗಳನ್ನಾಗಿ ಮಾಡಿ ಕೊಬ್ಬರಿ ತುರಿಯಲ್ಲಿ ಹೊರಳಿಸಿದರೆ ರುಚಿಯಾದ ಖರ್ಜೂರದ ಲಡ್ಡುಗಳು ರೆಡಿ.
 
ಹೀಗೆ ಸರಳವಾಗಿ ಮತ್ತು ಶೀಘ್ರವಾಗಿ ಮಾಡಬಹುದಾದ ಖರ್ಜೂರದ ಲಡ್ಡುಗಳನ್ನು ನೀವೂ ಒಮ್ಮೆ ಮಾಡಿ ನೋಡಿ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ