ವೆಜಿಟೆಬಲ್ ಬೋಂಡಾ ಮಾಡಿ ಸವಿಯಿರಿ...

ಅತಿಥಾ

ಸೋಮವಾರ, 8 ಜನವರಿ 2018 (17:33 IST)
ಸಾಯಂಕಾಲದ ಟೀ ಜೊತೆಗೆ ಅಥವಾ ಅನಿರೀಕ್ಷಿತವಾಗಿ ಅತಿಥಿಗಳು ಮನೆಗೆ ಬಂದಾಗ ಏನಾದರೂ ವಿಶೇಷವಾದ ಅಥವಾ ರುಚಿಯಾದ ತಿಂಡಿಯನ್ನು ಶೀಘ್ರವಾಗಿ ಮಾಡಬೇಕು ಅಂದುಕೊಂಡರೆ ವೆಜಿಟೆಬಲ್ ಬೋಂಡಾ ಒಳ್ಳೆಯ ಆಯ್ಕೆ.

ಇದರಲ್ಲಿ ಹಲವು ತರಕಾರಿಗಳನ್ನು ಬಳಸಿಕೊಳ್ಳುವುದರಿಂದ ಆರೋಗ್ಯಕ್ಕು ಉತ್ತಮ. ಕೊಬ್ಬರಿ ಚಟ್ನಿಯೊಂದಿಗೆ ಸವಿಯಲು ಇದು ರುಚಿಯಾಗಿರುತ್ತದೆ. ನಿಮಗೂ ವೆಜಿಟೆಬಲ್ ಬೋಂಡಾ ಮಾಡುವ ವಿಧಾನವನ್ನು ತಿಳಿದುಕೊಳ್ಳುವ ಆಸಕ್ತಿಯಿದ್ದರೆ ಈ ಲೇಖನವನ್ನು ಓದಿ.
 
ಬೇಕಾಗುವ ಸಾಮಗ್ರಿಗಳು:
 
ಹೆಚ್ಚಿದ ಬಟಾಟೆ - 1/2 ಕಪ್
ಹೆಚ್ಚಿದ ಕ್ಯಾರೆಟ್ - 1/2 ಕಪ್
ಹೆಚ್ಚಿದ ಬೀನ್ಸ್ - 1/2 ಕಪ್
ಹೆಚ್ಚಿದ ಬಿಟ್ರೂಟ್ - 1/2 ಕಪ್
ಹಸಿರು ಬಟಾಣಿ - 1/2 ಕಪ್
ಸಾಸಿವೆ - 1 ಚಮಚ
ಜೀರಿಗೆ - 1 ಚಮಚ
ಉದ್ದಿನ ಬೇಳೆ - 1 ಚಮಚ
ಕರಿಬೇವು - ಸ್ವಲ್ಪ
ಶುಂಠಿ - 1 ಇಂಚು
ಬೆಳ್ಳುಳ್ಳಿ - 7-8 ಎಸಳು
ಹಸಿಮೆಣಸು - 2
ಈರುಳ್ಳಿ - 1
ಚಾಟ್ ಮಸಾಲಾ - 1 ಚಮಚ
ಗರಂ ಮಸಾಲಾ - 1 ಚಮಚ
ಅರಿಶಿಣ - 11/2 ಚಮಚ
ಅಚ್ಚಖಾರದ ಪುಡಿ - 2 ಚಮಚ
ಕೊತ್ತಂಬರಿ ಸೊಪ್ಪು - ಸ್ವಲ್ಪ
ಉಪ್ಪು - ರುಚಿಗೆ
ಎಣ್ಣೆ - ಕರಿಯಲು
ಕಡಲೆ ಹಿಟ್ಟು - 1 1/2 ಕಪ್
ಅಕ್ಕಿ ಹಿಟ್ಟು - 1/4 ಕಪ್
ಇಂಗು - 1/4 ಚಮಚ
ಚಾಟ್ ಮಸಾಲಾ - 1/4 ಚಮಚ
 
ಮಾಡುವ ವಿಧಾನ:
 
ಹೆಚ್ಚಿರುವ ಬಟಾಟೆ, ಬಿಟ್ರೂಟ್, ಬೀನ್ಸ್, ಕ್ಯಾರೆಟ್ ಮತ್ತು ಹಸಿರು ಬಟಾಣಿಯನ್ನು ಸೇರಿಸಿ ಕುಕ್ಕರ್‌ನಲ್ಲಿ ಚೆನ್ನಾಗಿ ಬೇಯಿಸಿಕೊಳ್ಳಿ. ಈರುಳ್ಳಿ, ಶುಂಠಿ, ಹಸಿಮೆಣಸು, ಕೊತ್ತಂಬರಿ ಸೊಪ್ಪು ಮತ್ತು ಬೆಳ್ಳುಳ್ಳಿಯನ್ನು ಚಿಕ್ಕದಾಗಿ ಹೆಚ್ಚಿಟ್ಟುಕೊಳ್ಳಿ. ಒಂದು ಪ್ಯಾನ್ ಅನ್ನು ಸ್ಟೌ ಮೇಲಿಟ್ಟು 2-3 ಚಮಚ ಎಣ್ಣೆಯನ್ನು ಹಾಕಿ ಅದು ಬಿಸಿಯಾದಾಗ ಉದ್ದಿನಬೇಳೆ, ಸಾಸಿವೆ, ಜೀರಿಗೆ ಮತ್ತು ಕರಿಬೇವನ್ನು ಹಾಕಿ ಸ್ವಲ್ಪ ಹುರಿಯಿರಿ. ಅದಕ್ಕೆ ಹೆಚ್ಚಿದ ಈರುಳ್ಳಿ, ಶುಂಠಿ, ಹಸಿಮೆಣಸು ಮತ್ತು ಬೆಳ್ಳುಳ್ಳಿಯನ್ನು ಹಾಕಿ ಚೆನ್ನಾಗಿ ಹುರಿದು ಅದಕ್ಕೆ ಗರಂ ಮಸಾಲಾ, 1/2 ಚಮಚ ಚಾಟ್ ಮಸಾಲಾ, ಅರಿಶಿಣ ಮತ್ತು 1 ಚಮಚ ಅಚ್ಚಖಾರದಪುಡಿಯನ್ನು ಸೇರಿಸಿ ಮಿಕ್ಸ್ ಮಾಡಿ. ಈ ಮೊದಲೇ ಬೇಯಿಸಿಟ್ಟಿರುವ ತರಕಾರಿಗಳು, ಕೊತ್ತಂಬರಿ ಸೊಪ್ಪು ಮತ್ತು ಅಗತ್ಯವಿರುವಷ್ಟು ಉಪ್ಪನ್ನು ಮೇಲಿನ ಮಸಾಲೆಗೆ ಸೇರಿಸಿ ಮಿಕ್ಸ್ ಮಾಡಿದ ನಂತರ ಅದನ್ನು ಚೆನ್ನಾಗಿ ಸ್ಮ್ಯಾಶ್ ಮಾಡಿ ಸ್ಟೌ ಆಫ್ ಮಾಡಿ. ಸ್ವಲ್ಪ ತಣ್ಣಗಾದ ನಂತರ ಈ ಮಿಶ್ರಣವನ್ನು ಚಿಕ್ಕ ಚಿಕ್ಕ ಉಂಡೆಗಳನ್ನಾಗಿ ಮಾಡಿಟ್ಟುಕೊಳ್ಳಿ.
 
ಕಡಲೆ ಹಿಟ್ಟು, ಅಕ್ಕಿ ಹಿಟ್ಟು, 1/2 ಚಮಚ ಅಚ್ಚಖಾರದ ಪುಡಿ, ಇಂಗು, 1/2 ಚಮಚ ಅರಿಶಿಣ, 1/4 ಚಮಚ ಚಾಟ್ ಮಸಾಲಾ, ರುಚಿಗೆ ತಕ್ಕಷ್ಟು ಉಪ್ಪು ಮತ್ತು ಅಗತ್ಯವಿರುವಷ್ಟು ನೀರನ್ನು ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ ಹಿಟ್ಟನ್ನು ರೆಡಿ ಮಾಡಿಕೊಳ್ಳಿ. ನಂತರ ಒಂದು ಪ್ಯಾನ್‌ನಲ್ಲಿ ಅಗತ್ಯವಿರುವಷ್ಟು ಎಣ್ಣೆಯನ್ನು ಹಾಕಿ ಸ್ಟೌ ಮೇಲಿಟ್ಟು ಅದು ಬಿಸಿಯಾದಾಗ ಉಂಡೆಗಳನ್ನು ಹಿಟ್ಟಿನಲ್ಲಿ ಡಿಪ್ ಮಾಡಿ ಕರಿದರೆ ವೆಜಿಟೆಬಲ್ ಬೋಂಡಾ ರೆಡಿಯಾಗುತ್ತದೆ. ಇದು ಕೊತ್ತಂಬರಿ ಸೊಪ್ಪು ಅಥವಾ ಪುದಿನಾ ಸೊಪ್ಪಿನ ಚಟ್ನಿ ಹಾಗೂ ಟೊಮೆಟೋ ಸಾಸ್‌ನೊಂದಿಗೆ ರುಚಿಯಾಗಿರುತ್ತದೆ. ನಿವೂ ಒಮ್ಮೆ ಮಾಡಿ ಸವಿಯಿರಿ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ