ಇತ್ತೀಚಿನ ವಿದ್ಯಮಾನದಲ್ಲಿ ಆರೋಗ್ಯವನ್ನು ಕಾಪಾಡಿಕೊಳ್ಳುವುದು ಬಹಳ ಕಷ್ಟಕರವಾಗಿದೆ. ಮನುಷ್ಯ ಪ್ರತಿದಿನ ಒಂದಲ್ಲಾ ಒಂದು ರೋಗಗಳಿಗೆ ತುತ್ತಾಗುತ್ತಿದ್ದಾನೆ. ಅದರಲ್ಲಿಯೂ ಬೇಸಿಗೆ ಕಾಲದಲ್ಲಿ ಆರೋಗ್ಯವನ್ನು ಬಹಳ ಕಾಳಜಿಯಿಂದ ನೋಡಿಕೊಳ್ಳಬೇಕಾಗುತ್ತದೆ. ದೇಹವು ನಿರ್ಜಲೀಕರಣಕ್ಕೆ ತುತ್ತಾಗುತ್ತದೆ. ಆದರೆ ಕೆಲವು ಹಣ್ಣುಗಳನ್ನು ನಿಯಮಿತವಾಗಿ ಸೇವಿಸಿದರೆ ಆರೋಗ್ಯಕ್ಕೆ ಒಳ್ಳೆಯದು. ಅಂತಹ ಹಣ್ಣುಗಳು ಯಾವುವು ಎಂಬುದನ್ನು ನೋಡೋಣ..
1. ದ್ರಾಕ್ಷಿ : ಬಾಯಾರಿಕೆಯ ದಾಹವನ್ನು ನೀಗಿಸುವಲ್ಲಿ ದ್ರಾಕ್ಷಿಯು ಅತ್ಯಂತ ಸಹಕಾರಿಯಾಗಿದೆ. ದ್ರಾಕ್ಷಿಯ ಬೀಜವು ಕ್ಯಾನ್ಸರ್ ತಡೆಗಟ್ಟುವ ಉತ್ತಮ ಮದ್ದಾಗಿದೆ. ಇದು ರಕ್ತವನ್ನು ಶುದ್ದೀಕರಿಸಿ ಕ್ಯಾನ್ಸರ್ ಮತ್ತು ಹೃದಯ ಸಂಬಂಧಿ ರೋಗಗಳ ವಿರುದ್ಧ ಹೋರಾಡುವುದಲ್ಲದೇ ಜೀರ್ಣಕ್ರಿಯೆಯು ಸರಿಯಾಗಿ ನಡೆಯುವಂತೆ ಮಾಡುತ್ತದೆ.
2. ಮಾವಿನಹಣ್ಣು : ಮಾವಿನಹಣ್ಣನ್ನು ನಾವು ಬೇಸಿಗೆ ಕಾಲದಲ್ಲಿಯೇ ಹೆಚ್ಚಾಗಿ ಬಳಸುತ್ತೇವೆ. ಈ ಹಣ್ಣಿನಲ್ಲಿರುವ ಕಬ್ಬಿಣದಂಶ ಹಾಗೂ ಸೆಲೆನಿಯಮ್ ಅಂಶವು ದೇಹವು ನಿರ್ಜಲೀಕರಣಗೊಳ್ಳುವುದನ್ನು ತಪ್ಪಿಸುತ್ತದೆ.
3. ಕಲ್ಲಂಗಡಿ ಹಣ್ಣು: ಕಲ್ಲಂಗಡಿ ಹಣ್ಣು ಬೇಸಿಗೆಯಲ್ಲಿ ಅತಿ ಹೆಚ್ಚು ಬಳಕೆಯಾಗುವ ಹಣ್ಣುಗಳಲ್ಲಿ ಒಂದು. ಈ ಹಣ್ಣೂ ಸಹ ದೇಹದಲ್ಲಿ ನೀರಿನಂಶ ಕಡಿಮೆಯಾಗದಂತೆ ನೋಡಿಕೊಳ್ಳುತ್ತದೆ. ಇದರಲ್ಲಿರುವ ಲೈಕೊಪೆನೆ ಅಂಶವು ತ್ವಚೆಗೆ ಸೂರ್ಯನ ಕಿರಣಗಳಿಂದ ರಕ್ಷಣೆ ಮಾಡುತ್ತದೆ.
4. ಪೈನಾಪಲ್ : ಪೈನಾಪಲ್ ಹಣ್ಣಿನಲ್ಲಿ ಬ್ರೊಮೆಲಿಯಾನ್ ಎಂಬ ಎಂಜೈಮ್ಸ್ ಇದ್ದು ಅದು ಜೀರ್ಣಕ್ರಿಯೆಗೆ ತುಂಬಾ ಒಳ್ಳೆಯದು. ಮತ್ತು ಈ ಹಣ್ಣನ್ನು ಸೇವಿಸುವುದರಿಂದ ಉರಿಯೂತ ಸಮಸ್ಯೆ ಉಂಟಾಗದಂತೆ ಕಾಪಾಡುತ್ತದೆ.
5. ನೆಲ್ಲಿಕಾಯಿ : ನೆಲ್ಲಿಕಾಯಿಯಲ್ಲಿ ಹಲವಾರು ಔಷಧೀಯ ಗುಣಗಳಿವೆ. ಈ ಹಣ್ಣಿನಲ್ಲಿ ವಿಟಾಮಿನ್ ಸಿ, ಕಬ್ಬಿಣದಂಶ, ರಂಜಕದ ಅಂಶವಿದೆ. ಆದ್ದರಿಂದ ಬೇಸಿಗೆಯ ದಿನಗಳಲ್ಲಿ ಒಂದಾದರೂ ನೆಲ್ಲಿಕಾಯಿಯನ್ನು ತಿನ್ನುವುದು ಒಳ್ಳೆಯದು ಎನ್ನುವುದು ಆರೋಗ್ಯತಜ್ಞರ ಅಭಿಪ್ರಾಯ.
6. ನಿಂಬೆ : ಸಾಮಾನ್ಯವಾಗಿ ಬೇಸಿಗೆಯ ದಿನಗಳಲ್ಲಿ ನಾವು ನಿರ್ಜಲೀಕರಣಗಳನ್ನು ತಪ್ಪಿಸಲು ನಿಂಬೆ ಹಣ್ಣನ್ನು ಬಹಳವಾಗಿ ಬಳಸುತ್ತೇವೆ. ಇದು ದೇಹವನ್ನು ತಂಪಾಗಿ ಇಡುವಲ್ಲಿಯೂ ಸಹಕಾರಿ. ದೇಹಕ್ಕೆ ಚೈತನ್ಯವನ್ನೂ ನೀಡುತ್ತದೆ.
7. ಎಳನೀರು : ಎಳನೀರು ಸಾರ್ವಕಾಲಿಕವಾದ ಪಾನೀಯವಾಗಿದೆ. ಇದನ್ನು ಬೇಸಿಗೆಯಲ್ಲಿ ಕಮ್ಮಿಯೆಂದರೂ 3 ರಿಂದ 4 ಎಳನೀರನ್ನು ಕುಡಿಯುವುದು ಒಳ್ಳೆಯದು. ಇದು ದೇಹದಲ್ಲಿ ನೀರಿನಂಶವನ್ನು ಕಾಪಾಡುವುದಲ್ಲದೇ ದೇಹದ ಉಷ್ಣಾಂಶ ಹೆಚ್ಚಾಗದಂತೆ ಕಾಪಾಡುತ್ತದೆ.
8. ಸ್ಟ್ರಾಬೆರಿ : ಸ್ಟ್ರಾಬೆರಿಯು ತಳ್ಳುವ ಗಾಡಿಯಲ್ಲಿ, ಫುಡ್ ಬಜಾರ್‌ನಲ್ಲಿ ಕಂಡುಬರುತ್ತದೆ. ಇದು ಬೇಸಿಗೆಯಲ್ಲಿ ಕಂಡುಬರುವ ಮೂತ್ರವಿಸರ್ಜನೆಯ ಸಮಸ್ಯೆಯು ಬರದಂತೆ ತಡೆಯುವಲ್ಲಿ ಸಹಕಾರಿಯಾಗಿದೆ.
9. ಪ್ಲಮ್ : ಈ ಹಣ್ಣು ಸ್ವಲ್ಪ ದುಬಾರಿಯಾದ ಹಣ್ಣಾದರೂ ಆರೋಗ್ಯಕ್ಕೆ ಒಳ್ಳೆಯದು. ಈ ಹಣ್ಣಿನಲ್ಲಿ ವಿಟಾಮಿನ್ ಸಿ ಇದ್ದು, ಇದು ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಈ ಹಣ್ಣು ಜೀರ್ಣಕ್ರಿಯೆಗೆ ಸಹಕಾರಿಯಷ್ಟೇ ಅಲ್ಲದೇ ದೇಹದಲ್ಲಿ ರೋಗ ನಿರೋಧಕ ಸಾಮರ್ಥ್ಯವನ್ನು ಹೆಚ್ಚಿಸುತ್ತದೆ.
10. ಸೀಬೇಕಾಯಿ : ಕೆಲವು ಜನರಲ್ಲಿ ಸೀಬೆಕಾಯಿಯನ್ನು ತಿಂದರೆ ಶೀತ ಉಂಟಾಗುತ್ತದೆ ಎನ್ನುವ ಭಾವನೆ ಇದೆ. ಆದರೆ ಸೀಬೆಕಾಯಿಯಿಂದ ಶೀತ, ಬೇಧಿ ಸಂಬಂಧಿ ಸಮಸ್ಯೆಗಳು ನಿವಾರಣೆಯಾಗುತ್ತವೆ.
11. ಹಲಸಿನ ಹಣ್ಣು : ಹಲಸಿನ ಹಣ್ಣಿನಲ್ಲಿ ವಿಟಾಮಿನ್ ಸಿ ಮತ್ತು ಉತ್ತಮ ಪೋಷಕಾಂಶಗಳಿದ್ದು ಶೀತ, ಸೋಂಕು ಇವುಗಳನ್ನು ಸುಧಾರಿಸಲು ಸಹಕಾರಿಯಾಗಿದೆ. ಹಲಸಿನ ಹಣ್ಣನ್ನು ಸೇವಿಸುವುದರಿಂದ ರೋಗ ನಿರೋಧಕ ಶಕ್ತಿಯು ಹೆಚ್ಚಾಗುವುದಲ್ಲದೇ ಇದರಲ್ಲಿ ಆಂಟಿ ಆಕ್ಸಿಡೆಂಟ್‌ಗಳು ಅಧಿಕವಾಗಿವೆ.
12. ಬಾಳೆಹಣ್ಣು : ಬಾಳೆಹಣ್ಣು ಸರ್ವಕಾಲದಲ್ಲಿಯೂ ಬಳಕೆಯಾಗುವ ಹಣ್ಣು ಎಂದು ಹೇಳಬಹುದು. ಬಾಳೆಹಣ್ಣಿನಲ್ಲಿ ಪೊಟ್ಯಾಷಿಯಂ ಮತ್ತು ಕಬ್ಬಿಣದ ಅಂಶವು ಅಧಿಕವಿದೆ ಹಾಗೂ ಇದು ದೇಹವನ್ನು ತಂಪಾಗಿಡುವಲ್ಲಿ ಸಹಕಾರಿಯಾಗಿದೆ.
13 ಪಪ್ಪಾಯಿ ಹಣ್ಣು : ಪಪ್ಪಾಯಿ ಹಣ್ಣು ಆರೋಗ್ಯದ ದೃಷ್ಟಿಯಿಂದ ಒಳ್ಳೆಯ ಹಣ್ಣಾಗಿದೆ. ಇದು ದೇಹವನ್ನು ತಂಪಾಗಿಟ್ಟು ಜೀರ್ಣಕ್ರಿಯೆಗೆ ಸಹಾಯ ಮಾಡುತ್ತದೆ ಮತ್ತು ದೇಹದಲ್ಲಿ ನೀರಿನಂಶ ಇರುವಂತೆ ನೋಡಿಕೊಳ್ಳುತ್ತದೆ.
14. ನೇರಳೆ : ನೇರಳೆ ಹಣ್ಣು ಬೇಸಿಗೆಯಲ್ಲಿ ಧಾರಾಳವಾಗಿ ಸಿಗುವ ಹಣ್ಣಾಗಿದ್ದು ಇದರಲ್ಲಿರುವ ಆಂಟಿ ಆಕ್ಸಿಡೆಂಟ್ಸ್‌ಗಳು ದೇಹದಲ್ಲಿರುವ ಬೇಡದ ಕಲ್ಮಶಗಳನ್ನು ಹೊರಹಾಕುವಲ್ಲಿ ಸಹಕಾರಿಯಾಗಿದೆ.
ಆರೋಗ್ಯವೇ ಭಾಗ್ಯ. ಒಳ್ಳೆಯ ಆರೋಗ್ಯವನ್ನು ಕಾಪಾಡಿಕೊಳ್ಳುವುದು ಸುಲಭದ ಮಾತಲ್ಲ. ರೋಗ ಉಲ್ಬಣವಾದಾಗ ಆಸ್ಪತ್ರೆಗೆ ಹೋಗುವ ಬದಲು ರೋಗದ ಲಕ್ಷಣಗಳು ಕಂಡುಬಂದಾಗಲೇ ಅಥವಾ ಅದರ ಲಕ್ಷಣಗಳು ಸಣ್ಣದಿರುವಾಗಲೇ ವೈದ್ಯರ ಸಲಹೆಯನ್ನು ಪಡೆಯುವುದು ಉತ್ತಮ. ಮತ್ತು ಯಾವುದೇ ಆಹಾರ ಪದಾರ್ಥಗಳನ್ನು ಸೇವಿಸುವ ಮೊದಲು ವೈದ್ಯರನ್ನು ಕಂಡು ಅವರ ಮಾರ್ಗದರ್ಶನದ ಮೇರೆಗೆ ಸೇವಿಸುವುದು ಒಳಿತು. ಇಲ್ಲವಾದಲ್ಲಿ ಕೆಲವು ಆಹಾರ ಪದಾರ್ಥಗಳು ಅಲರ್ಜಿಯಾಗುವ ಸಂಭವವಿರುತ್ತದೆ.