ರವೆ ಖಾರದ ಉಂಡೆ

ಗುರುವಾರ, 21 ಫೆಬ್ರವರಿ 2019 (15:18 IST)
ಸಾಮಾನ್ಯವಾಗಿ ಮಕ್ಕಳಿಗೆ ಉಪ್ಪಿಟ್ಟೆಂದರೇನೆ ಅಲರ್ಜಿ ಅಲ್ಲವೇ. ಬಹಳಷ್ಟು ಮಕ್ಕಳು ಇಷ್ಟಪಟ್ಟು ತಿನ್ನುವುದೇ ಇಲ್ಲ. ಉಪ್ಪಿಟ್ಟನ್ನೇ ಸ್ವಲ್ಪ ವಿಭಿನ್ನವಾಗಿ ಅವರಿಗೆ ಇಷ್ಟವಾಗುವ ಆಕಾರದಲ್ಲಿ, ಅತ್ಯಂತ ಸುಲಭವಾಗಿ ಮಾಡಬಹುದು. ಹಾಗೇಯೇ ಇದು ಬೆಳಗಿನ ಉಪಹಾರಕ್ಕೆ ತುಂಬಾ ಸ್ವಾದಿಷ್ಟವಾಗಿರುತ್ತದೆ.
ಬೇಕಾಗುವ ಸಾಮಾಗ್ರಿಗಳು:
1 ಕಪ್ ಗೋಧಿ ರವೆ
4-5 ಟೀ ಸ್ಪೂನ್ ಎಣ್ಣೆ
1 ಟೀ ಸ್ಪೂನ್ ಅಚ್ಚಖಾರದ ಪುಡಿ
1/2 ಗರಂಮಸಾಲಾ ಪುಡಿ
1 ಟೀ ಸ್ಪೂನ್ ಧನಿಯಾ ಪುಡಿ
2-3 ಒಣ ಮೆಣಸಿನಕಾಯಿ
1/2 ಟೀ ಸ್ಪೂನ್ ಕರಿಮೆಣಸಿನಪುಡಿ
5-6 ಗೊಡಂಬಿ
ಚಿಟಿಕೆ ಅರಿಶಿಣ
ಬೇಕಾಗುವಷ್ಟು ಉಪ್ಪು
ಒಗ್ಗರಣೆಗೆ ಸಾಸಿವೆ, ಕಡಲೇ ಬೆಳೆ ಮತ್ತು ಉದ್ದಿನ ಬೇಳೆ
 
ಮಾಡುವ ವಿಧಾನ:
ಮೊದಲಿಗೆ ಬಾಣಲಿಯಲ್ಲಿ 1 1/2 ಲೋಟದಷ್ಟು ನೀರು ಕಾಯಿಸಿಕೊಂಡು ಅದಕ್ಕೆ ಹುರಿದುಕೊಂಡ ಗೋಧಿರವೆ ಮತ್ತು ಚಿಟಿಕೆ ಉಪ್ಪನ್ನು ಹಾಕಿ ಉಪ್ಪಿಟ್ಟಿನ ಹದದಲ್ಲಿ ಬೇಯಿಸಿಕೊಳ್ಳಬೇಕು. ಸ್ವಲ್ಪ ತಣ್ಣಗಾದ ನಂತರ ಅದಕ್ಕೆ ಸ್ವಲ್ಪ ಎಣ್ಣೆಹಾಕಿಕೊಂಡು ಚೆನ್ನಾಗಿ ಕಲಸಿ ಉಂಡೆ ಮಾಡಿಕೊಂಡು ಹಬೆಯಲ್ಲಿ ಬೇಯಿಸಿಕೊಳ್ಳಬೇಕು. ಮತ್ತೊಂದು ಬಾಣಲಿಯಲ್ಲಿ 4- 5 ಚಮಚ ಎಣ್ಣೆಹಾಕಿಕೊಂಡು ಒಗ್ಗರಣೆಗೆ ಸಾಸಿವೆ, ಉದ್ದಿನ ಬೇಳೆ, ಕಡಲೇ ಬೇಳೆ ಹಾಗೂ ಒಣಮೆಣಸಿನಕಾಯಿ, ಗೊಡಂಬಿ, 5-6 ಎಸಳು ಕರಿಬೇವು ಹಾಕಿಕೊಂಡು ಅದಕ್ಕೆ ಗರಂಮಸಾಲಾ ಪುಡಿ, ಅರಿಶಿಣ, ಧನಿಯಾ ಪುಡಿ, ಅಚ್ಚಖಾರದ ಪುಡಿ, ಕರಿಣೆಣಸು, ರುಚಿಗೆ ತಕ್ಕಷ್ಟು ಉಪ್ಪು ಹಾಕಿ ಹಬೆಯಲ್ಲಿ ಬೇಯಿಸಿಕೊಂಡ ಉಂಡೆಗಳನ್ನು ಅದರಲ್ಲಿ ಹಾಕಿ ಫ್ರೈ ಮಾಡಬೇಕು. ಹಚ್ಚಿಕೊಂಡ ಕೊತ್ತಂಬರಿ ಸೊಪ್ಪನ್ನು ಉದುರಿಸಿ ಬಿಸಿ ಬಿಸಿಯಾಗಿ ಸಾಸ್‌ನೊಂದಿಗೆ ಸವಿದರೆ ಚೆನ್ನಾಗಿರುತ್ತದೆ.     

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ