ಅನ್ನ ಹೆಚ್ಚಾಗಿ ಉಳಿದ ಸಂದರ್ಭದಲ್ಲಿ ಅನ್ನವನ್ನು ಚೆಲ್ಲುವುದರ ಬದಲು ಉಳಿದಿರುವ ಅನ್ನದಿಂದ ಚಪಾತಿ, ತಾಳಿಪಿಟ್ಟು ಹೀಗೆ ವೈವಿಧ್ಯಮಯ ಭಕ್ಷ್ಯಗಳನ್ನು ತಯಾರಿಸಬಹುದು. ಅದರಿಂದ ಅನ್ನದ ಬಳಕೆಯೂ ಮಾಡಿದಂತಾಗುತ್ತದೆ ಮತ್ತು ಹೊಸ ಹೊಸ ಬಗೆಯ ಸವಿರುಚಿಗಳನ್ನು ಸವಿದಂತೆಯೂ ಆಗುತ್ತದೆ. ಹಾಗಾದರೆ ಅನ್ನದ ತಾಳಿಪಟ್ಟನ್ನು ಹೇಗೆ ತಯಾರಿಸಬಹುದು ಎಂಬುದನ್ನು ನೋಡೋಣ..
ಮೊದಲಿಗೆ ಟೊಮೆಟೊ, ಈರುಳ್ಳಿ, ಶುಂಠಿ, ಹಸಿಮೆಣಸು ಎಲ್ಲವನ್ನು ಹೆಚ್ಚಿಟ್ಟುಕೊಳ್ಳಬೇಕು. ನಂತರ ಅನ್ನವನ್ನು ಚೆನ್ನಾಗಿ ನುರಿದು ಅದಕ್ಕೆ ತಕ್ಕಷ್ಟು ಅಕ್ಕಿಹಿಟ್ಟನ್ನು ಸೇರಿಸಬೇಕು ನಂತರ ಅದಕ್ಕೆ ಉಪ್ಪನ್ನು ಸೇರಿಸಿ ಚೆನ್ನಾಗಿ ನಾದಬೇಕು. ನಂತರ ನುರಿದ ಅನ್ನ, ಅಕ್ಕಿ ಹಿಟ್ಟಿನ ಮಿಶ್ರಣಕ್ಕೆ ಈಗಾಗಲೇ ಹೆಚ್ಚಿಕೊಂಡ ತರಕಾರಿ ಎಲ್ಲವನ್ನೂ ಸೇರಿಸಿ ಹಾಗೆಯೇ ಕೊತ್ತಂಬರಿ ಕರಿಬೇವು ಮತ್ತು ಹಸಿಮೆಣಸನ್ನು ಹಾಕಿ ರೊಟ್ಟಿಹಿಟ್ಟಿನ ಹದದಲ್ಲಿ ಗಟ್ಟಿಯಾಗಿ ನಾದಿ ಉಂಡೆಯನ್ನು ಕಟ್ಟಬೇಕು. ನಂತರ ಒಂದು ಬಾಳೆ ಅಥವಾ ಪ್ಲಾಸ್ಟಿಕ್ ಹಾಳೆ ಮೇಲೆ ಎಣ್ಣೆಯನ್ನು ಹಚ್ಚಿ ಉಂಡೆಯನ್ನು ತಟ್ಟಬೇಕು. ಆಗಾಗ ನೀರು ಹಚ್ಚಿ ತಟ್ಟಿದರೆ ಕೈಗೆ ಅಂಟುವುದಿಲ್ಲ. ನಂತರ ತವಾ ಇಟ್ಟು ಎಣ್ಣೆ ಹಾಕಿ ಚೆನ್ನಾಗಿ ಎರಡೂ ಕಡೆ ಬೇಯಿಸಿದರೆ ರುಚಿಯಾದ ಗರಿಗರಿಯಾದ ಅನ್ನದ ತಾಳಿಪಟ್ಟು ಸವಿಯಲು ಸಿದ್ಧ. ಚಟ್ನಿಯೊಂದಿಗೆ ಇದನ್ನು ಸವಿಯಿರಿ.