ದೇಹಕ್ಕೆ ಹಿತವಾದ, ಆರೋಗ್ಯಕರವಾದ ತಂಬುಳಿ...

ಗುರುವಾರ, 21 ಡಿಸೆಂಬರ್ 2017 (18:06 IST)
ಹೆಚ್ಚಾಗಿ ಸೊಪ್ಪಿನಿಂದ ಮಾಡುವ ಈ ಪದಾರ್ಥ ಆರೋಗ್ಯಕ್ಕೆ ಬಹಳ ಹಿತಕರವಾದುದು. ಸಾಮಾನ್ಯವಾಗಿ ಊಟಮಾಡುವಾಗ ಸಾಂಬಾರಿಗೂ ಮೊದಲು ಇದನ್ನು ಬಳಸುತ್ತಾರೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಹೆಚ್ಚಿನ ಜನರು ಇದನ್ನು ಪ್ರತಿದಿನ ಊಟದಲ್ಲಿ ಬಳಸುತ್ತಾರೆ. ಆರೋಗ್ಯಕ್ಕೆ ಉತ್ತಮವಾಗಿರುವ, ಮಾಡಲು ಸುಲಭವಾಗಿರುವ ಈ ಪದಾರ್ಥವನ್ನು ಮಾಡುವುದು ಹೇಗೆ ಎಂದು ತಿಳಿಯಲು ಈ ಲೇಖನವನ್ನು ಓದಿ.
1. ವಿಟಮಿನ್ ಸೊಪ್ಪಿನ ತಂಬುಳಿ:
 
ಬೇಕಾಗುವ ಸಾಮಗ್ರಿಗಳು:
ವಿಟಮಿನ್ ಸೊಪ್ಪು - ಎರಡು ಹಿಡಿ
ಕಾಯಿತುರಿ - ಎರಡು ಹಿಡಿ
ಮೊಸರು - 1/4 ಕಪ್
ತುಪ್ಪ - 2 ಚಮಚ
ಮೆಣಸಿನಕಾಳು - 3-4
ಹಸಿಮೆಣಸು - 1
ಸಾಸಿವೆ - 1/2 ಚಮಚ
ಜೀರಿಗೆ - 1/2-1 ಚಮಚ
ಇಂಗು - ಚಿಟಿಕೆ
ಒಣ ಮೆಣಸು - 1
 
ಮಾಡುವ ವಿಧಾನ:
 
* ವಿಟಮಿನ್ ಸೊಪ್ಪನ್ನು ಚೆನ್ನಾಗಿ ತೊಳೆಯಬೇಕು ಆ ಬಳಿಕ ಒಂದು ಬಾಣಲೆಯಲ್ಲಿ 2 ಚಮಚ ತುಪ್ಪ/ಎಣ್ಣೆಯನ್ನು ಹಾಕಿ ಬಿಸಿಯಾದ ನಂತರ ಅದಕ್ಕೆ 3-4 ಮೆಣಸಿನಕಾಳು ಮತ್ತು ಸೊಪ್ಪನ್ನು ಹಾಕಿ ಚೆನ್ನಾಗಿ ಹುರಿದುಕೊಳ್ಳಿ.
 
* ಹುರಿದ ಸೊಪ್ಪನ್ನು ಕಾಯಿತುರಿ ಮತ್ತು ಹಸಿಮೆಣಸಿನೊಂದಿಗೆ ನುಣ್ಣಗೆ ರುಬ್ಬಿಕೊಳ್ಳಿ.
 
* ರುಬ್ಬಿದ ಮಿಶ್ರಣಕ್ಕೆ 1/4 ಕಪ್ ಮೊಸರು(ಸ್ವಲ್ಪ ಹುಳಿಯಿರಲಿ), ರುಚಿಗೆ ತಕ್ಕಷ್ಟು ಉಪ್ಪು ಮತ್ತು ನೀರನ್ನು ಸೇರಿಸಿ ಚೆನ್ನಾಗಿ ಮಿಕ್ಸ್ ಮಾಡಿ.
 
* ಈಗ ತಂಬುಳಿಗೆ ಒಗ್ಗರಣೆಯನ್ನು ತಯಾರಿಸಿ. ಒಂದು ಬಾಣಲೆಯಲ್ಲಿ 1 ಚಮಚ ಎಣ್ಣೆ, 1/2 ಚಮಚ ಸಾಸಿವೆ, 1 ಚಮಚ ಜೀರಿಗೆ, 1 ಒಣ ಮೆಣಸು ಮತ್ತು ಚಿಟಿಕೆ ಇಂಗನ್ನು ಹಾಕಿ ಸಾಸಿವೆ ಸಿಡಿದಾಗ ಸ್ಟೌ ಆಫ್ ಮಾಡಿ, ಒಗ್ಗರಣೆಯನ್ನು ತಂಬುಳಿಗೆ ಹಾಕಿದರೆ ತಂಬುಳಿ ರೆಡಿ.
 
* ಇದೇ ವಿಧಾನದಲ್ಲಿ ಒಂದೆಲಗ, ಎಳೆಯ ನುಗ್ಗಿ ಸೊಪ್ಪು, ತೊಂಡೆ ಸೊಪ್ಪು, ನೆಲನೆಲ್ಲಿ ಸೊಪ್ಪುಗಳನ್ನು ಬಳಸಿ ತಂಬುಳಿಯನ್ನು ಮಾಡಬಹುದು. 
 
2. ನಿಂಬೆಕಾಯಿಯ ಸಿಹಿಯಾದ ತಂಬುಳಿ:
 
ಬೇಕಾಗುವ ಸಾಮಗ್ರಿಗಳು:
ಕಾಯಿತುರಿ - 1 ಕಪ್
ನಿಂಬೆಕಾಯಿ - 1
ಉಪ್ಪು - ರುಚಿಗೆ
ಸಕ್ಕರೆ - ರುಚಿಗೆ
ಉದ್ದಿನಬೇಳೆ - 1/2 ಚಮಚ
ಒಣ ಮೆಣಸು - 2-3
ಸಾಸಿವೆ - 1/2 ಚಮಚ
ಎಣ್ಣೆ - 2 ಚಮಚ
 
ಮಾಡುವ ವಿಧಾನ:
 
* ಕಾಯಿತುರಿಯನ್ನು ರುಬ್ಬಿಕೊಂಡು ಅದನ್ನು ಸೋಸಿಕೊಂಡು ಕಾಯಿಹಾಲನ್ನು ತೆಗೆದುಕೊಳ್ಳಿ. ಅದಕ್ಕೆ ನಿಂಬೆಕಾಯಿಯನ್ನು ಹಿಂಡಿ ಅಗತ್ಯವಿರುವಷ್ಟು ನೀರು, ಉಪ್ಪು ಮತ್ತು ಸಕ್ಕರೆಯನ್ನು ಸೇರಿಸಿ. ಈ ಮಿಶ್ರಣ ಹಾಲಿನಷ್ಟು ಗಟ್ಟಿಯಾದ ಹದದಲ್ಲಿರಲಿ.
 
* ಒಂದು ಬಾಣಲೆಯಲ್ಲಿ 2 ಚಮಚ ಎಣ್ಣೆಯನ್ನು ಹಾಕಿ ಬಿಸಿಯಾದ ನಂತರ ಉದ್ದಿನಬೇಳೆ, ಸಾಸಿವೆ, ಮೆಣಸು ಮತ್ತು ಇಂಗನ್ನು ಹಾಕಿ ಒಗ್ಗರಣೆಯನ್ನು ರೆಡಿ ಮಾಡಿಕೊಂಡು ಅದನ್ನು ತಂಬುಳಿಗೆ ಹಾಕಿದರೆ ನಿಂಬೆಕಾಯಿ ತಂಬುಳಿ ರೆಡಿ.
 
3. ಶುಂಠಿ ಅಥವಾ ಬೆಳ್ಳುಳ್ಳಿ ತಂಬುಳಿ:
 
ಬೇಕಾಗುವ ಸಾಮಗ್ರಿಗಳು:
ಶುಂಠಿ ಅಥವಾ ಬೆಳ್ಳುಳ್ಳಿ - 1 ಇಂಚು/5-6 ಎಸಳು
ಕಾಯಿತುರಿ - 1/4 ಕಪ್
ಉಪ್ಪು - ರುಚಿಗೆ
ಮೊಸರು - 1/4 ಕಪ್
ಉದ್ದಿನ ಬೇಳೆ - 1/2 ಚಮಚ
ಸಾಸಿವೆ - 1/2 ಚಮಚ
ಎಣ್ಣೆ - 2 ಚಮಚ
ಮೆಣಸು - 2
 
ಮಾಡುವ ವಿಧಾನ:
 
* ಕಾಯಿತುರಿ ಮತ್ತು ಶುಂಠಿ ಅಥವಾ ಬೆಳ್ಳುಳ್ಳಿಯನ್ನು ಮಿಕ್ಸಿ ಜಾರಿಗೆ ಹಾಕಿ ಅಗತ್ಯವಿರುವಷ್ಟು ನೀರನ್ನು ಹಾಕಿ ನುಣ್ಣಗೆ ರುಬ್ಬಿಕೊಳ್ಳಿ.
 
* ರುಬ್ಬಿದ ಮಿಶ್ರಣಕ್ಕೆ ಮೊಸರು, ಉಪ್ಪು ಮತ್ತು ಅಗತ್ಯವಿರುವಷ್ಟು ನೀರನ್ನು ಸೇರಿಸಿಕೊಳ್ಳಿ.
 
* ಒಂದು ಬಾಣಲೆಯಲ್ಲಿ 2 ಚಮಚ ಎಣ್ಣೆಯನ್ನು ಹಾಕಿ ಬಿಸಿಯಾದ ನಂತರ ಉದ್ದಿನಬೇಳೆ, ಸಾಸಿವೆ, ಮೆಣಸನ್ನು ಹಾಕಿ ಒಗ್ಗರಣೆಯನ್ನು ರೆಡಿ ಮಾಡಿಕೊಂಡು ಅದನ್ನು ತಂಬುಳಿಗೆ ಹಾಕಿದರೆ ಶುಂಠಿ ಅಥವಾ ಬೆಳ್ಳುಳ್ಳಿಯ ತಂಬುಳಿ ರೆಡಿ.
 
 ಬಿಸಿ ಬಿಸಿಯಾದ ಅನ್ನದ ಜೊತೆ ತಂಬುಳಿ ಚೆನ್ನಾಗಿರುತ್ತದೆ. ನೀವೂ ಇವುಗಳನ್ನೊಮ್ಮೆ ಪ್ರಯತ್ನಿಸಿ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ