ದೇವಾಲಯಗಳಲ್ಲಿ ಮಾಡುವಂತಹ ರುಚಿಕರ ಚಟ್ನಿ ಮಾಡುವ ವಿಧಾನ

Krishnaveni K

ಭಾನುವಾರ, 14 ಜನವರಿ 2024 (13:57 IST)
ಬೆಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಅನೇಕ ದೇವಾಲಯಗಳು ಅನ್ನ ಸಂತರ್ಪಣೆಗೆ ಹೆಸರು ವಾಸಿ. ಅಲ್ಲಿ ಸಿಗುವ ಊಟಕ್ಕೇ ಪ್ರತ್ಯೇಕ ಅಭಿಮಾನಿಗಳಿದ್ದಾರೆ.

ಕುಕ್ಕೆ ಸುಬ್ರಹ್ಮಣ್ಯದಂತಹ ಖ್ಯಾತ ದೇವಾಲಯಗಳಲ್ಲಿ ಊಟದ ಜೊತೆ ಬಡಿಸುವ ಚಟ್ನಿ ರುಚಿಕರವಾಗಿರುತ್ತದೆ. ಹಾಗಿದ್ದರೆ ದೇವಸ್ಥಾನ ಶೈಲಿಯಲ್ಲಿ ರುಚಿಕರ ಚಟ್ನಿ ಮಾಡುವುದು ಹೇಗೆ? ಇದು ತೀರಾ ಸಿಂಪಲ್ ರೆಸಿಪಿ.

ಇದಕ್ಕೆ ಬೇಕಾಗುವ ವಸ್ತುಗಳು, ತೆಂಗಿನ ಕಾಯಿ ತುರಿ, ಒಣಮೆಣಸು, ಉದ್ದಿನ ಬೇಳೆ, ಕರಿಬೇವು, ಕೊಬ್ಬರಿ ಎಣ್ಣೆ, ಸಾಸಿವೆ. ಮೊದಲಿಗೆ ಒಂದು ಬಾಣಲೆಯಲ್ಲಿ ಉದ್ದಿನ ಬೇಳೆ ಮತ್ತು ಒಣ ಮೆಣಸಿಗೆ ಕೊಂಚ ಕೊಬ್ಬರಿ ಎಣ್ಣೆ ಹಾಕಿ ಹದ ಬೆಂಕಿಯಲ್ಲಿ ಹುರಿದುಕೊಳ್ಳಿ. ಉದ್ದಿನ ಬೇಳೆ ಕೆಂಪಗಾಗಿ ಪರಿಮಳ ಬರುವಾಗ ಉರಿ ಆರಿಸಿ. ಉರಿ ಆರಿಸಿದ ತಕ್ಷಣವೇ ಕೊಂಚ ಕರಿಬೇವನ್ನು ಹಾಕಿ ಬಾಡಿಸಿಕೊಳ್ಳಿ.

ಬಳಿಕ ಮಿಕ್ಸಿಯಲ್ಲಿ ತೆಂಗಿನ ಕಾಯಿ ತುರಿ ಮತ್ತು ಹುರಿದ ವಸ್ತುಗಳನ್ನು ಸೇರಿಸಿ ಹೆಚ್ಚು ನೀರು ಸೇರಿಸದೇ ರುಬ್ಬಿಕೊಳ್ಳಿ. ಈಗ ಇದಕ್ಕೆ ಬೇಕಾದರೆ ಸಾಸಿವೆ, ಕರಿಬೇವು ಹಾಕಿ ಒಗ್ಗರಣೆ ಕೊಡಬಹುದು. ಇಲ್ಲದೇ ಹೋದರೆ ಹಾಗೆಯೇ ತಿನ್ನಲೂ ರುಚಿಯಾಗಿರುತ್ತದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ