ಬೆಂಗಳೂರು: ಬೀಟ್ ರೂಟ್ ನಮ್ಮ ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿ. ನಮ್ಮ ದೇಹದಲ್ಲಿ ಹೃದಯ, ರಕ್ತದೊತ್ತಡ ನಿಯಂತ್ರಣಕ್ಕೆ ಬೀಟ್ ರೂಟ್ ಸಹಕಾರಿ. ಕ್ಯಾನ್ಸರ್ ಕಣಗಳ ವಿರುದ್ಧ ಹೋರಾಡುವುದಲ್ಲದೆ, ನಮ್ಮ ದೇಹ ತೂಕ ಸಮತೋಲನದಲ್ಲಿರಿಸಲೂ ಸಹಾಯ ಮಾಡುತ್ತದೆ.
ಹಾಗಿದ್ದರೆ ಇಂದು ಬೀಟ್ ರೂಟ್ ಬಳಸಿ ಒಂದು ರಾಯತ ಮಾಡುವುದು ಹೇಗೆ ಎಂದು ತಿಳಿದುಕೊಳ್ಳೋಣ. ಇದಕ್ಕೆ ಬೇಕಾಗುವ ಸಾಮಗ್ರಿಗಳು ತುರಿದಿಟ್ಟ ಬೀಟ್ ರೂಟ್ 1 ಕಪ್, ಮೊಸರು 1 ಕಪ್, ಸ್ವಲ್ಪ ನೀರು ಮತ್ತು ರುಚಿಗೆ ತಕ್ಕ ಉಪ್ಪು. ಒಗ್ಗರಣೆಗೆ ಸಾಸಿವೆ, ಕರಿಬೇವು,ಕೆಂಪು ಮೆಣಸು, ಹಸಿಮೆಣಸಿನಕಾಯಿ, ಎಣ್ಣೆ.
ಮೊದಲಿಗೆ ಒಂದು ಪ್ಯಾನ್ ಗೆ ತುರಿದ ಬೀಟ್ ರೂಟ್ ಹಾಕಿ ನೀರು ಚಿಮುಕಿಸಿ ಬೀಟ್ ರೂಟ್ ಬಾಡಿಸಿಕೊಳ್ಳಿ. ಜೊತೆಗೆ ಸ್ವಲ್ಪ ಉಪ್ಪು ಸೇರಿಸಿಕೊಳ್ಳಿ. ಹಸಿ ವಾಸನೆ ಹೋಗಿ ಸ್ವಲ್ಪ ಬೆಂದ ಮೇಲೆ ಉರಿ ಆರಿಸಿ. ಬಳಿಕ ಇದನ್ನು ತಣ್ಣಗಾಗಲು ಬಿಡಿ. ತಣ್ಣಗಾದ ಬಳಿಕ ಇದಕ್ಕೆ ಮೊಸರು ಸೇರಿಸಿ. ಬಳಿಕ ಒಗ್ಗರಣೆ ಪಾತ್ರೆಯಲ್ಲಿ ಸ್ವಲ್ಪ ಎಣ್ಣೆ ಬಿಸಿ ಮಾಡಿ ಅದಕ್ಕೆ ಸಾಸಿವೆ, ಕೆಂಪುಮೆಣಸು ಮತ್ತು ಹಸಿಮೆಣಸಿನಕಾಯಿ ಹಾಗೂ ಕರಿಬೇವು ಸೇರಿಸಿ ಒಗ್ಗರಣೆ ಕೊಡಿ. ಈ ರಾಯತವನ್ನು ಹಾಗೆಯೇ ಸೇವಿಸಬಹುದು ಅಥವಾ ಊಟದ ಜೊತೆಗೆ ಸೇರಿಸಿಕೊಂಡು ಸೇವಿಸಬಹುದು.
ಈ ರಾಯತ ತಿನ್ನುವುದರಿಂದ ನಮ್ಮ ಹೊಟ್ಟೆಯಲ್ಲಿ ಅಸಿಡಿಟಿ ಅಥವಾ ಅಜೀರ್ಣದಿಂದಾಗಿ ಅಸಹಜತೆಯಾಗುತ್ತಿದ್ದರೆ ಶಮನ ಮಾಡುತ್ತದೆ. ಅಲ್ಲದೆ ಜೀರ್ಣಕ್ರಿಯೆ ಸುಗಮವಾಗಿಸಲು ಈ ರಾಯತ ಸಹಕಾರಿ.