ಸೊಂಪಾದ ತಲೆಗೂದಲನ್ನು ಹೊಂದಲು ಏನು ಮಾಡಬೇಕು?

ನಾಗಶ್ರೀ ಭಟ್

ಗುರುವಾರ, 25 ಜನವರಿ 2018 (12:43 IST)
ಯುವಕರಿಂದ ಹಿಡಿದು ವಯಸ್ಸಾದವರವರೆಗೂ ತಲೆ ಕೂದಲು ಉದುರುವಿಕೆ, ಬೇಗನೆ ಬೆಳ್ಳಗಾಗುವುದು, ಹೊಳಪು ರಹಿತವಾಗಿ ಒರಟಾಗಿರುವುದು ಹೀಗೆ ಕೂದಲಿಗೆ ಸಂಬಂಧಿಸಿದ ಹಲವು ಸಮಸ್ಯೆಗಳಿವೆ.

ಇದಕ್ಕಾಗಿ ಹಲವು ಡಾಕ್ಟರ್‌ಗಳನ್ನು ಭೇಟಿಯಾಗಿ ಅಧಿಕ ಹಣವನ್ನು ವ್ಯಯಿಸುವ ಮೊದಲು ನೀವು ಮನೆಯಲ್ಲಿಯೇ ಕೆಲವು ಔಷಧಗಳನ್ನು ಪ್ರಯತ್ನಿಸಿ ನೋಡಬಹುದು. ಯಾವ ಔಷಧಗಳು ನಿಮಗೆ ಯಾವ ಪರಿಣಾಮಗಳನ್ನು ನೀಡುತ್ತವೆ ಎಂಬುದನ್ನು ತಿಳಿದುಕೊಳ್ಳಲು ಈ ಲೇಖನವನ್ನು ಓದಿ.
 
1. ಅಲೋವೆರಾ
 
ತಲೆ ಹೊಟ್ಟಿನ ಸಮಸ್ಯೆ, ಕೂದಲು ಉದುರುವ ಸಮಸ್ಯೆ ಮತ್ತು ತುರಿಕೆಯಂತಹ ಸಮಸ್ಯೆಗಳಿಗೆ ಅಲೋವೆರಾ ಉತ್ತಮ ಔಷಧವಾಗಿದೆ ಮತ್ತು ಇದು ಬಹಳ ಪರಿಣಾಮಕಾರಿಯೂ ಆಗಿದೆ. ಇದು ನೆತ್ತಿಯ ಆಳಕ್ಕೆ ಹೋಗುವ ಮೂಲಕ ಕೂದಲಿನ ಬೆಳವಣಿಗೆಯನ್ನು ಹೆಚ್ಚಿಸುತ್ತದೆ ಮತ್ತು ಕೂದಲು ನಯವಾಗಿ ಹೊಳೆಯುವಂತೆ ಮಾಡುತ್ತದೆ.
 
ಅಲೋವೆರಾದ ಎಲೆಯೊಂದನ್ನು ತೆಗೆದುಕೊಂಡು ಅದರ ಜೆಲ್ ಅನ್ನು ಬೇರ್ಪಡಿಸಿ ಅದನ್ನು ನಿಮ್ಮ ಕೂದಲು ಮತ್ತು ಕೂದಲಿನ ಬೇರಿನಾಳಕ್ಕೆ ಹೋಗುವಂತೆ ನೆತ್ತಿಗೂ ಸಹ ಚೆನ್ನಾಗಿ ಹಚ್ಚಿಕೊಳ್ಳಿ. ಒಂದು ಗಂಟೆಯ ನಂತರ ಕೂದಲನ್ನು ತೊಳೆದುಕೊಳ್ಳಿ. ಇದನ್ನು ವಾರಕ್ಕೆ 3-4 ಬಾರಿ ಮಾಡಿದರೆ ಉತ್ತಮ ಪರಿಣಾಮವನ್ನು ಪಡೆಯುವಿರಿ.
 
2. ಮೆಂತೆ ಕಾಳು
 
ಕೂದಲು ಉದುರುವಿಕೆಯನ್ನು ತಡೆಯಲು ಮೆಂತೆ ಕಾಳು ಉತ್ತಮ ಔಷಧವಾಗಿದೆ. ಇದರಲ್ಲಿ ಪ್ರೋಟೀನ್‌ಗಳು ಮತ್ತು ನಿಕೋಟಿನ್ ಆಮ್ಲಗಳು ಸಮೃದ್ಧವಾಗಿರುವುದರಿಂದ ಅದು ಕೂದಲನ್ನು ಬಲಪಡಿಸುತ್ತದೆ ಹಾಗೂ ಬಲವಾದ, ಹೊಳೆಯುವ ಮತ್ತು ಉದ್ದವಾದ ಕೂದಲು ನಿಮ್ಮದಾಗುವಂತೆ ಮಾಡುತ್ತದೆ.
 
1 ಕಪ್ ಮೆಂತೆಕಾಳನ್ನು 7-8 ಗಂಟೆಗಳಕಾಲ ನೀರಿನಲ್ಲಿ ನೆನೆಸಿಡಿ. ನಂತರ ಅದಕ್ಕೆ ನೀರನ್ನು ಸೇರಿಸಿ ನುಣ್ಣಗೆ ರುಬ್ಬಿ ಪೇಸ್ಟ್ ಅನ್ನು ತಯಾರಿಸಿಕೊಳ್ಳಿ. ತಯಾರಿಸಿದ ಪೇಸ್ಟ್ ಅನ್ನು ನಿಮ್ಮ ಕೂದಲ ಬುಡವನ್ನು ತಲುಪುವಂತೆ ಚನ್ನಾಗಿ ಹಚ್ಚಿಕೊಂಡು ಒಂದು ಗಂಟೆ ಬಿಟ್ಟು ನಂತರ ಸ್ನಾನಮಾಡಿ. ಒಂದು ತಿಂಗಳು ವಾರಕ್ಕೆ ಎರಡು ಬಾರಿ ನೀವು ಇದನ್ನು ಮಾಡಿದರೆ ನಿಮ್ಮ ತಲೆಗೂದಲ ಉದುರುವಿಕೆ ನಿಯಂತ್ರಣಕ್ಕೆ ಬರುತ್ತದೆ.
 
3. ತೆಂಗಿನ ಹಾಲು
 
ಹಲವು ಪ್ರೋಟೀನ್‌ಗಳು, ಖನಿಜಗಳು ಮತ್ತು ಅಗತ್ಯವಾದ ಕೊಬ್ಬುಗಳಿಂದ ಸಮೃದ್ಧವಾಗಿರುವ ತೆಂಗಿನ ಹಾಲು ಕೂದಲು ಸೀಳುವಿಕೆ, ಉದುರುವಿಕೆಯನ್ನು ತಗ್ಗಿಸುತ್ತದೆ ಮತ್ತು ಕೂದಲ ಬೆಳವಣಿಗೆಯನ್ನು ಹೆಚ್ಚಿಸುತ್ತದೆ. ತೆಂಗಿನ ಹಾಲು ನಿಮ್ಮ ಕೂದಲಿಗೆ ತೇವಾವಂಶವನ್ನು ಒದಗಿಸಿ ಕೂದಲು ನಯವಾಗಿ ಹೊಳೆಯುವಂತೆ ಮಾಡುತ್ತದೆ.
 
ಒಂದು ಕಪ್ ಕಾಯಿತುರಿಗೆ ಸ್ವಲ್ಪ ನೀರನ್ನು ಸೇರಿಸಿ ರುಬ್ಬಿ ಅದನ್ನು ಸೋಸಿ ಹಾಲನ್ನು ಬೇರ್ಪಡಿಸಿಕೊಳ್ಳಿ. ಹಾಲನ್ನು ಕೂದಲಿಗೆ ಹಾಗೂ ಕೂದಲ ಬುಡಕ್ಕೆ ಹಚ್ಚುತ್ತಾ ಸ್ವಲ್ಪ ಮಸಾಜ್ ಮಾಡಿಕೊಳ್ಳಿ. ನಂತರ ಒಂದು ಟವೆಲ್ ನಿಂದ ಕೂದಲನ್ನು ಕಟ್ಟಿಕೊಂಡು 30-40 ನಿಮಿಷಬಿಟ್ಟು ತಣ್ಣಗಿನ ನೀರಿನಿಂದ ಸ್ನಾನಮಾಡಿ. ಉತ್ತಮ ಫಲಿತಾಂಶಕ್ಕಾಗಿ ವಾರದಲ್ಲಿ ಒಮ್ಮೆ ಇದನ್ನು ಮಾಡುತ್ತಿರಿ.
 
4. ನೆಲ್ಲಿಕಾಯಿ
 
ನೆಲ್ಲಿಕಾಯಿ ವಿಟಮಿನ್ C ಯ ಆಗರವಾಗಿದೆ. ಕೂದಲ ಉದುರುವಿಕೆಗೆ ಪ್ರಮುಖ ಕಾರಣ ವಿಟಮಿನ್ C ಯ ಕೊರತೆಯಾಗಿರುವುದರಿಂದ ನೆಲ್ಲಿಕಾಯಿ ಅದನ್ನು ಒದಗಿಸುತ್ತದೆ. ಅದರಲ್ಲೂ ಭಾರತದ ನೆಲ್ಲಿಕಾಯಿಗಳು ಕೂದಲ ಉದುರುವಿಕೆಯನ್ನು ತಡೆಯಲು ಪರಿಣಾಮಕಾರಿಯಾದ ಔಷಧವಾಗಿದೆ. ಇದು ಕೂದಲ ಉದುರುವಿಕೆಯನ್ನು ತಡೆಯುವುದಲ್ಲದೇ ಕೂದಲು ಸೊಂಪಾಗಿ ಬೆಳೆಯಲು ಮತ್ತು ಕೂದಲ ಬಣ್ಣ ಬೇಗ ಬಿಳಿಯಾಗದಂತೆ ಇರಲೂ ಸಹ ಸಹಾಯ ಮಾಡುತ್ತದೆ.
 
* ಒಣಗಿದ ನೆಲ್ಲಿಕಾಯಿಗಳನ್ನು ಎಣ್ಣೆಗೆ ಸೇರಿಸಿ ಅದು ಕಪ್ಪು ಬಣ್ಣಕ್ಕೆ ಬರುವವರೆಗೆ ಕುದಿಸಿ ಆರಿಸಿಕೊಳ್ಳಿ. ನಂತರ ಉಗುರು ಬೆಚ್ಚಗಿನ ಶಾಖದಲ್ಲಿರುವಾಗ ಅದನ್ನು ನಿಮ್ಮ ಕೂದಲು ಮತ್ತು ಕೂದಲ ಬುಡಕ್ಕೆ ಹಚ್ಚಿ ಚೆನ್ನಾಗಿ ಮಸಾಜ್ ಮಾಡಿ ಒಂದು ಗಂಟೆಯ ನಂತರ ತಲೆಸ್ನಾನ ಮಾಡಿ.
 
* ನಿಂಬೆರಸ ಮತ್ತು ನೆಲ್ಲಿಕಾಯಿ ಪುಡಿಯನ್ನು ಸೇರಿಸಿ ಪೇಸ್ಟ್ ಅನ್ನು ರೆಡಿಮಾಡಿಕೊಂಡು ಅದನ್ನು ನಿಮ್ಮ ಕೂದಲು ಮತ್ತು ಕೂದಲ ಬುಡಕ್ಕೆ ಹಚ್ಚಿ ಚೆನ್ನಾಗಿ ಮಸಾಜ್ ಮಾಡಿ ಒಂದು ಗಂಟೆಯ ನಂತರ ತಲೆಸ್ನಾನ ಮಾಡಿ. ಉತ್ತಮ ಪರಿಣಾಮಕ್ಕೆ ವಾರಕ್ಕೆ ಎರಡು ಬಾರಿ ಇದನ್ನು ಪ್ರಯತ್ನಿಸಿ.
 
5. ಈರುಳ್ಳಿ ರಸ
 
ಈರುಳ್ಳಿ ರಸ ನಿಮ್ಮ ಕೂದಲ ಬೆಳವಣಿಗೆಯಲ್ಲಿ ಅದ್ಭುತವಾದ ಪರಿಣಾಮವನ್ನು ಬೀರಬಹುದು. ಆ್ಯಂಟಿಬ್ಯಾಕ್ಟೀರಿಯಾದ ಅಂಶವನ್ನು ಹೊಂದಿರುವುದರಿಂದ ತಲೆಯ ಸೋಂಕಿನಿಂದ ಕಾಪಾಡುತ್ತದೆ. ಗಂಧಕದ ಅಂಶವನ್ನು ಹೊಂದಿರುವ ಇದು ತಲೆಯ ಭಾಗದ ರಕ್ತಪರಿಚಲನೆಯನ್ನು ಉತ್ತಮಗೊಳಿಸಿ ಕೂದಲ ಬೆಳವಣಿಗೆಯನ್ನು ಉತ್ತೇಜಿಸುತ್ತದೆ ಮತ್ತು ಕೂದಲ ಉದುರುವಿಕೆಯನ್ನು ತಡೆಯುತ್ತದೆ.
 
ಒಂದು ಈರುಳ್ಳಿಯನ್ನು ನುಣ್ಣಗೆ ರುಬ್ಬಿ ರಸವನ್ನು ಬೇರ್ಪಡಿಸಿಕೊಳ್ಳಿ. ಒಂದು ಕಾಟನ್ ಬಾಲ್ ತೆಗೆದುಕೊಂಡು ಅದನ್ನು ಈರುಳ್ಳಿ ರಸದಲ್ಲಿ ಅದ್ದಿ ನಿಮ್ಮ ತಲೆಯ ಕೂದಲ ಬುಡಕ್ಕೆ ಹಚ್ಚಿ ಅರ್ಧ ಗಂಟೆಯ ಬಳಿಕ ತಲೆ ಸ್ನಾನ ಮಾಡಿಕೊಳ್ಳಿ. ಉತ್ತಮ ಪರಿಣಾಮಕ್ಕೆ ವಾರಕ್ಕೆ ಒಂದು ಬಾರಿ ಇದನ್ನು ಮಾಡಿ.
 
ಈ ಸರಳವಾದ ಮನೆ ಮದ್ದುಗಳನ್ನು ನೀವು ಒಮ್ಮೆ ಪ್ರಯತ್ನಿಸಿ ಸೊಂಪಾದ, ಹೊಳೆಯುವ ಮತ್ತು ಉದ್ದ ಕೂದಲನ್ನು ನಿಮ್ಮದಾಗಿಸಿಕೊಳ್ಳಿ.
 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ