ಚುನಾವಣೆಗಳಲ್ಲಿ ಬಿದ್ದು ಬಿದ್ದು ಎದ್ದ ಕಾಂಗ್ರೆಸ್

PTI
2004ರಲ್ಲಿ ಮಿತ್ರರು ಮತ್ತು ಚಿತ್ರ ವಿಚಿತ್ರ ಧೋರಣೆಯ ಪಕ್ಷಗಳ ನೆರವಿನಿಂದ ಕೇಂದ್ರದಲ್ಲಿ ಅಧಿಕಾರಕ್ಕೇರಿದ ಬಳಿಕ ಕಾಂಗ್ರೆಸ್ ಪಕ್ಷವು 2008ರಲ್ಲಿ ವಿವಿಧ ರಾಜ್ಯಗಳಿಗೆ ನಡೆದ ವಿಧಾನಸಭೆ ಚುನಾವಣೆಗಳಲ್ಲಿ ಆಘಾತಕಾರಿ ಸೋಲನುಭವಿಸಿದ್ದರೂ, ವರ್ಷಾಂತ್ಯದಲ್ಲಿ ದೆಹಲಿಯಲ್ಲಿ ಅಧಿಕಾರ ಉಳಿಸಿಕೊಂಡಿದ್ದಲ್ಲದೆ, ರಾಜಸ್ಥಾನ, ಮಿಜೋರಾಂನಲ್ಲಿ ಮುನ್ನಡೆ ಸಾಧಿಸುವುದರೊಂದಿಗೆ ನಿಟ್ಟುಸಿರು ಬಿಟ್ಟಿತು.

ಇದು ಮುಂಬರುವ ಲೋಕಸಭಾ ಚುನಾವಣೆಗಳನ್ನು ಎದುರಿಸಲು ಅದಕ್ಕೆ ಆತ್ಮವಿಶ್ವಾಸದ ಆಮ್ಲಜನಕವನ್ನೂ ನೀಡಿದೆ. 26/11 ಮುಂಬಯಿ ಮೇಲೆ ನಡೆದ ಭಯೋತ್ಪಾದಕ ದಾಳಿಯ ಬಳಿಕ ತನ್ನ ಭಯೋತ್ಪಾದನಾ-ವಿರೋಧಿ ನೀತಿಗೆ ಜನತೆ ತಕ್ಕ ಪಾಠ ಕಲಿಸುತ್ತಾರೆ ಎಂಬ ಆತಂಕದಲ್ಲಿದ್ದ ಕಾಂಗ್ರೆಸ್, ಕೊನೆಗೂ ನೆಮ್ಮದಿಯ ನಿಟ್ಟುಸಿರು ಬಿಡುವಂತಾಯಿತು. ಮುಳುಗುತ್ತಿರುವ ಹಡಗು ಎಂದೇ ವಿರೋಧಿಗಳಿಂದ ಕರೆಸಿಕೊಳ್ಳುತ್ತಿದ್ದ ಕಾಂಗ್ರೆಸ್ ಪಕ್ಷಕ್ಕೆ ಈ ಗೆಲುವು ನೈತಿಕ ಬಲವನ್ನು ತುಂಬಿದೆ.

ವರ್ಷದ ಆರಂಭದಲ್ಲಿ ಕರ್ನಾಟಕದಲ್ಲಿ ಹಾಗೂ ಅದಕ್ಕೂ ಮುನ್ನ ಹಿಮಾಚಲ ಪ್ರದೇಶ ಹಾಗೂ ಗುಜರಾತ್ ಚುನಾವಣೆಗಳಲ್ಲಿ ಕಾಂಗ್ರೆಸ್ ಪಕ್ಷವು ಹೀನಾಯ ಸೋಲು ಕಂಡಿತ್ತು. ಗುಜರಾತಿನಲ್ಲಿ ನರೇಂದ್ರ ಮೋದಿ ವಿರುದ್ಧ ಸ್ವತಃ ಪಕ್ಷಾಧ್ಯಕ್ಷೆ ಸೋನಿಯಾ ಗಾಂಧಿಯೇ ಅಬ್ಬರದ ಪ್ರಚಾರಕ್ಕೆ, ನೇರ ವಾಗ್ದಾಳಿಗೆ ಇಳಿದಿದ್ದರೂ ಮುಖ ಉಳಿಸಿಕೊಳ್ಳಲಾಗದಿದ್ದುದು ಅದರ ಆತ್ಮವಿಶ್ವಾಸಕ್ಕೆ ದೊಡ್ಡ ಹೊಡೆತ ನೀಡಿತ್ತು. ಅಂತೆಯೇ ಕರ್ನಾಟಕದಲ್ಲಿ ಅದು ಮುಂದೊತ್ತಿ ಬರುತ್ತಿದ್ದ ಬಿಜೆಪಿಯ ಬಿಸಿ ತಾಳಲಾರದೆ, ಒಡೆದ ಮನೆಯಾಯಿತು. 2004ರ ಮಹಾಚುನಾವಣೆಗಳ ಬಳಿಕ ಅದರ ಗೆಲುವು ಹರ್ಯಾಣ ಮತ್ತು ಅಸ್ಸಾಂಗಳಿಗಷ್ಟೇ ಸೀಮಿತವಾಗಿತ್ತು. ಮಹಾರಾಷ್ಟ್ರದಲ್ಲಿ ರಾಷ್ಟ್ರೀಯವಾದಿ ಕಾಂಗ್ರೆಸ್ ಪಕ್ಷ (ಎನ್‌ಸಿಪಿ) ಬೆಂಬಲದೊಂದಿಗೆ ಸರಕಾರ ರಚಿಸಬೇಕಾಯಿತು.

ಈ ಮಧ್ಯೆ ಅದು, ಉತ್ತರಾಖಂಡ, ಪಂಜಾಬ್ ಮತ್ತು ಕೇರಳಗಳಲ್ಲಿ ಅಧಿಕಾರ ಕಳೆದುಕೊಂಡಿತು. ಉತ್ತರ ಪ್ರದೇಶ, ಪಶ್ಚಿಮ ಬಂಗಾಳ ಮತ್ತಿತರ ರಾಜ್ಯಗಳಲ್ಲಿ ಯಾವುದೇ ಪ್ರಭಾವ ಬೀರುವಲ್ಲಿ ವಿಫಲವಾಗಿತ್ತು.

ಇದೀಗ ವರ್ಷಾಂತ್ಯ ದೊರೆತ ಗೆಲುವು ಕುಸಿಯುತ್ತಿದ್ದ ಆತ್ಮವಿಶ್ವಾಸವನ್ನು ಹೆಚ್ಚಿಸಿದಂತಾಗಿದೆ.

ವೆಬ್ದುನಿಯಾವನ್ನು ಓದಿ