ಜ್ಯಾವೆಲಿನ್ ಥ್ರೋನಲ್ಲಿ ಚಿನ್ನ ಗೆದ್ದ ಪಾಕಿಸ್ತಾನದ ಅರ್ಶದ್ ನದೀಂ ಹಿನ್ನಲೆ ಮತ್ತು ನೀರಜ್ ಚೋಪ್ರಾ ಜೊತೆಗಿನ ಗೆಳೆತನ

Krishnaveni K

ಶುಕ್ರವಾರ, 9 ಆಗಸ್ಟ್ 2024 (10:49 IST)
ಪ್ಯಾರಿಸ್: ಈ ಬಾರಿ ಒಲಿಂಪಿಕ್ಸ್ ಜ್ಯಾವೆಲಿನ್ ಥ್ರೋ ವಿಭಾಗದಲ್ಲಿ ಎಲ್ಲರ ನಿರೀಕ್ಷೆ ಸುಳ್ಳಾಗಿಸಿ ಪಾಕಿಸ್ತಾನದ ಅರ್ಶದ್ ನದೀಂ ಚಿನ್ನ ಗೆದ್ದು ಇತಿಹಾಸ ನಿರ್ಮಿಸಿದ್ದಾರೆ. ಅತೀ ಹೆಚ್ಚು 92.97 ಮೀ. ದೂರ ಎಸೆದು ದಾಖಲೆ ಮಾಡಿದ ಅವರ ಹಿನ್ನಲೆ ಮತ್ತು ಭಾರತದ ನೀರಜ್ ಚೋಪ್ರಾ ಜೊತೆಗಿನ ಗೆಳೆತನದ ವಿವರ ಇಲ್ಲಿದೆ.

ಟೋಕಿಯೋ ಒಲಿಂಪಿಕ್ಸ್ ನಲ್ಲಿ ಅರ್ಶದ್ ಐದನೆಯವರಾಗಿ ಪಂದ್ಯ ಮುಗಿಸಿದ್ದರು. ಆ ಒಲಿಂಪಿಕ್ಸ್ ನಲ್ಲಿ ನೀರಜ್ ಮೊದಲನೆಯವರಾಗಿ ಚಿನ್ನದ ಪದಕ ಗೆದ್ದರು. ಆ ಒಲಿಂಪಿಕ್ಸ್ ನಲ್ಲಿ ಅರ್ಶದ್ ಸೋತಿದ್ದಕ್ಕೆ ಅವರ ದೇಶದಲ್ಲೇ ಭಾರೀ ಟೀಕೆ ವ್ಯಕ್ತವಾಗಿತ್ತು. ಸಾಂಪ್ರದಾಯಿಕ ದೇಶದ ಸ್ಪರ್ಧಿಗಳಾಗಿರುವುದರಿಂದ ಇಬ್ಬರನ್ನೂ ಪ್ರತಿಸ್ಪರ್ಧಿಗಳು ಎಂದೇ ಎಲ್ಲರೂ ಅಂದುಕೊಂಡಿದ್ದರು. ಆದರೆ ನಾವಿಬ್ಬರೂ ಉತ್ತಮ ಸ್ನೇಹಿತರು ಎಂದು ನೀರಜ್ ಹೇಳುತ್ತಲೇ ಬಂದಿದ್ದಾರೆ. ಅದರಂತೆ ಇಬ್ಬರೂ ನಡೆದುಕೊಂಡಿದ್ದಾರೆ ಕೂಡಾ.

ಇಬ್ಬರ ನಡುವೆ ಉತ್ತಮ ಬಾಂಧವ್ಯ ಎಷ್ಟಿತ್ತೆಂದರೆ ಈ ಒಲಿಂಪಿಕ್ಸ್ ನಲ್ಲಿ ನದೀಂ ಚಿನ್ನ ಗೆದ್ದ ಬಳಿಕ ಪ್ರತಿಕ್ರಿಯಿಸಿದ್ದ ನೀರಜ್ ಪೋಷಕರು ಆತ ನಮಗೂ ಮಗನಿದ್ದಂತೆ ಎಂದಿದ್ದಾರೆ. ನದೀಂ ಚಿನ್ನದ ಪದಕದ ಹಾದಿ ಅಷ್ಟು ಸುಗಮವಾಗಿರಲಿಲ್ಲ. ಪಾಕಿಸ್ತಾನದಲ್ಲಿ ಸರ್ಕಾರದಿಂದ ಅವರಿಗೆ ಯಾವುದೇ ಆರ್ಥಿಕ ಸಹಾಯ ಸಿಗಲಿಲ್ಲ. ಮನೆಯಲ್ಲೂ ಬಡತನವಿತ್ತು.

ಆದರೆ ಅವರನ್ನು ಜ್ಯಾವೆಲಿನ್ ಥ್ರೋ ಸ್ಪರ್ಧೆಗೆ ಕಳುಹಿಸಲು ಇಡೀ ಊರೇ ಒಂದಾಗಿತ್ತು. ತಮ್ಮ ವೃತ್ತಿ ಜೀವನದ ಆರಂಭದಲ್ಲಿ ನದೀಂಗೆ ಗ್ರಾಮಸ್ಥರು, ನೆಂಟರಿಷ್ಟರೇ ಹಣ ಒಗ್ಗೂಡಿಸಿ ಕೊಟ್ಟು ತರಬೇತಿಗೆ ಸಹಾಯ ಮಾಡಿದ್ದರಂತೆ. ಬಹಳ ಕಷ್ಟದಿಂದ ಬಂದು ಈಗ ಪಾಕಿಸ್ತಾನಕ್ಕೆ ಮೊದಲ ಚಿನ್ನ ಗೆದ್ದುಕೊಟ್ಟ ಹಿರಿಮೆ ಅವರದ್ದು. ಇತ್ತೀಚೆಗಿನ ದಿನಗಳಲ್ಲಿ ತಮಗೆ ಕಷ್ಟವಾದಾಗ ಭಾರತದ ನೀರಜ್ ಚೋಪ್ರಾ ಅವರ ಸಹಾಯಕ್ಕೆ ಬಂದಿದ್ದಾರೆ. ಹೀಗಾಗಿ ಈಗ ಅರ್ಶದ್ ಗೆಲುವು ನೀರಜ್ ಕುಟುಂಬಕ್ಕೂ ಖುಷಿ ತಂದಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ