ತೆಲಂಗಾಣ: ಭಾರತದ ಚೆನ್ನೈನ 18 ವರ್ಷದ ಚೆಸ್ ಆಟಗಾರ ಡಿ ಗುಕೇಶ್ ಅವರು ಸಿಂಗಾಪುರದಲ್ಲಿ ನಡೆದ ವಿಶ್ವ ಚೆಸ್ ಚಾಂಪಿಯನ್‌ಶಿಪ್‌ನಲ್ಲಿ ಗೆದ್ದು ದೇಶಕ್ಕೆ ಹೆಮ್ಮೆ ತರುತ್ತಿದ್ದ ಹಾಗೇ ಸಾಮಾಜಿಕ ಜಾಲತಾಣದಲ್ಲಿ ಅವರ ಬಗ್ಗೆ ಹುಡುಕಾಟ ಶುರುವಾಗಿದೆ.
ಗುಕೇಶ್ ಅವರು ಫೈನಲ್ ಸುತ್ತಿನಲ್ಲಿ ಚೀನಾದ ಡಿಂಗ್ ಲಿರೆನ್ ಅವರನ್ನು ಸೋಲಿಸಿ ವಿಶ್ವ ಚಾಂಪಿಯನ್ ಆಗಿದ್ದಾರೆ. ಡಿಂಗ್ ಅವರನ್ನು ಚಾಣಕ್ಷ್ಯತನದಿಂದ ಸೋಲಿಸುತ್ತಿದ್ದ ಹಾಗೇ ಗುಕೇಶ್ ಅವರು ಖುಷಿಯಲ್ಲಿ ಕಣ್ಣೀರು ಹಾಕಿದ್ದಾರೆ. ವಿಶ್ವ ಚಾಂಪಿಯನ್‌ಶಿಪ್ ಗೆಲುವಿನ ನಂತರ ದೇವರಿಗೆ ಕೈ ಮುಗಿದು, ಸಂತೋಷದಿಂದ ಕಣ್ಣೀರು ಹಾಕಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
18ವರ್ಷದ ಗುಕೇಶ್ ಅವರು ಮೇ 29, 2006 ರಂದು ಜನಿಸಿದರು. ಚೆನ್ನೈನವರಾಗಿರುವ ಗುಕೇಶ್ ಅವರ ಪೋಷಕರು ವೈದ್ಯರಾಗಿದ್ದಾರೆ. ತಂದೆ ಡಾ. ರಜನಿಕಾಂತ್ ಅವರು ಇಎನ್‌ಟಿ ಸ್ಪೆಷಲಿಸ್ಟ್ ಆಗಿ, ತಾಯಿ ಡಾ. ಪದ್ಮ ಅವರು ಮೈಕ್ರೋಬಯೋಲಜಿಸ್ಟ್ ಆಗಿದ್ದಾರೆ. ಗುಕೇಶ್ ಅವರು ತನ್ನ ಏಳನೇ ವಯಸ್ಸಿನಲ್ಲಿ ಚದುರಂಗದ ಪ್ರಯಾಣವನ್ನು ಆರಂಭಿಸಿದರು. ಇಂದು ಅತೀ ಚಿಕ್ಕ ವಯಸ್ಸಿನಲ್ಲಿ ವಿಶ್ವ ಚಾಂಪಿಯನ್ ಆಗಿ ದೊಡ್ಡ ಸಾಧನೆ ಮಾಡಿದ್ದಾರೆ.
ಈ ಮೊದಲು ಅವರು 2015 ರಲ್ಲಿ 9 ವರ್ಷದೊಳಗಿನವರ ಏಷ್ಯನ್ ಸ್ಕೂಲ್ ಚೆಸ್ ಚಾಂಪಿಯನ್‌ಶಿಪ್‌ಗಳನ್ನು ಗೆದ್ದಾಗ ದೊಡ್ಡ ಮಟ್ಟದಲ್ಲಿ ಸುದ್ದಿಯಾಗಿದ್ದರು. ಆದಾಗ್ಯೂ, ಅವರು 2018 ರಲ್ಲಿ 12 ವರ್ಷದೊಳಗಿನವರ ವಿಶ್ವ ಯೂತ್ ಚೆಸ್ ಚಾಂಪಿಯನ್‌ಶಿಪ್‌ನಲ್ಲಿ ವಿಜಯಶಾಲಿಯಾದ ನಂತರ ಅವರ ಕೌಶಲ್ಯಗಳು ಮುಂಚೂಣಿಗೆ ಬಂದವು.
ಅವರು 12 ನೇ ವಯಸ್ಸಿನಲ್ಲಿ ಇಂಟರ್ ನ್ಯಾಶನಲ್ ಮಾಸ್ಟರ್ ಆದರು ಮತ್ತು ಶೀಘ್ರದಲ್ಲೇ ಇತಿಹಾಸದಲ್ಲಿ ಮೂರನೇ-ಕಿರಿಯ ಗ್ರ್ಯಾಂಡ್‌ಮಾಸ್ಟರ್ ಆಗಿ ಹೊರಹೊಮ್ಮಿದರು.
2023 ರಲ್ಲಿ, ಗುಕೇಶ್ ಅವರು FIDE ರೇಟಿಂಗ್‌ಗಳಲ್ಲಿ 2750 ರ ರೇಟಿಂಗ್ ಅನ್ನು ಸಾಧಿಸಿದ ಅತ್ಯಂತ ಕಿರಿಯ ಆಟಗಾರನಾದ ನಂತರ ಮುಖ್ಯಾಂಶಗಳನ್ನು ಮಾಡಿದರು. ಹಾಗೆ ಮಾಡುವ ಮೂಲಕ, ಅವರು ಐದು ಬಾರಿಯ ವಿಶ್ವ ಚಾಂಪಿಯನ್ ವಿಶ್ವನಾಥನ್ ಆನಂದ್ ಅವರನ್ನು ಮೀರಿಸಿ ಅಗ್ರ ಭಾರತೀಯ ಚೆಸ್ ಆಟಗಾರರಾಗಿ ತಮ್ಮನ್ನು ತಾವು ಸ್ಥಾಪಿಸಿಕೊಂಡರು.