ಟೋಕಿಯೊ ಒಲಿಂಪಿಕ್ಸ್: 6ನೇ ಸ್ಥಾನಕ್ಕೆ ಕುಸಿದ ಡಿಸ್ಕಸ್ ಪಟು ಕಮಲ್ ಪ್ರೀತ್!

ಸೋಮವಾರ, 2 ಆಗಸ್ಟ್ 2021 (19:02 IST)
ಅರ್ಹತಾ ಸುತ್ತಿನಲ್ಲಿ ಭರ್ಜರಿ ಪ್ರದರ್ಶನ ನೀಡಿದ್ದ ಡಿಸ್ಕಸ್ ಎಸೆತಗಾರ್ತಿ ಕಮಲ್ ಪ್ರೀತ್ ಸಿಂಗ್ ಟೋಕಿಯೊ ಒಲಿಂಪಿಕ್ಸ್ ನಲ್ಲಿ ಪದಕದ ಕನಸು ಭಗ್ನಗೊಂಡಿದೆ. ಆದರೆ ಒಲಿಂಪಿಕ್ಸ್ ನಲ್ಲಿ ಟ್ರ್ಯಾಕ್ ಅಂಡ್ ಫೀಲ್ಡ್ ನಲ್ಲಿ ಭಾರತೀಯ ಅಥ್ಲೀಟ್ ಒಬ್ಬರ ಗರಿಷ್ಠ ಸಾಧನೆಯ ತೃಪ್ತಿಗೆ ಪಾತ್ರರಾದರು.
ಸೋಮವಾರ ನಡೆದ ವನಿತೆಯರ ಡಿಸ್ಕಸ್ ಎಸೆತ ಫೈನಲ್ ನಲ್ಲಿ ಗರಿಷ್ಠ 63.70 ಮೀ. ದೂರ ಎಸೆಯುವ ಮೂಲಕ 6 ನೇ ಸ್ಥಾನಕ್ಕೆ ಕುಸಿದರು. ಈ ಮೂಲಕ ಭಾರತದ ಇನ್ನೊಂದು ಪದಕದ ಆಸೆಗೆ ತಣ್ಣೀರು ಬಿದ್ದಂತಾಯಿತು.
ಕಮಲ್ ಪ್ರೀತ್ ಸಿಂಗ್ 5 ನೇ ಪ್ರಯತ್ನದಲ್ಲಿ ಗರಿಷ್ಠ 63.70 ಮೀ. ಎಸೆದು 6 ನೇ ಸ್ಥಾನ ಪಡೆದರು. ಅಂಜು ಬಾಬಿ ಜಾರ್ಜ್ ಈ ಹಿಂದೆ ಟ್ರ್ಯಾಕ್ ಅಂಡ್ ಫೀಲ್ಡ್ ನಲ್ಲಿ 5 ನೇ ಸ್ಥಾನ ಗಳಿಸಿದ ನಂತರ ಭಾರತದ ಪರ 2 ನೇ ಗರಿಷ್ಠ ಸಾಧನೆ ತೋರಿದ ಆಟಗಾರ್ತಿ ಎಂಬ ಗೌರವಕ್ಕೆ ಕಮಲ್ ಪ್ರೀತ್ ಪಾತ್ರರಾದರು.
ಅಮೆರಿಕದ ವಲೇರಿ ಅಲ್ಮಾನ್ (68.98 ಮೀ.) ಚಿನ್ನದ ಪದಕ ಗಳಿಸಿದರೆ, ಜರ್ಮನಿಯ ಕ್ರಿಸ್ಟಿನ್ ಪುಡೆಂಜ್ (66.86 ಮೀ.) ಮತ್ತು ಕ್ಯೂಬಾದ ಯೆಮ್ಮಿ ಪೆರೆಜ್ (65.72 ಮೀ.) ಕ್ರಮವಾಗಿ ಬೆಳ್ಳಿ ಮತ್ತು ಕಂಚಿನ ಪದಕ ಗಳಿಸಿದರು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ